ಅಸಲಿಗೆ ಸಿದ್ದರಾಮಯ್ಯ ಬಳಿ ರಮೇಶ್ ಜಾರಕಿಹೊಳಿ ಇಟ್ಟಿದ್ದು ಒಂದೇ ಒಂದು ಷರತ್ತು?
ಕರ್ನಾಟಕ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಶುಕ್ರವಾರ (ಜ 19) ಮುಕ್ತಾಯಗೊಂಡಿದೆ. ಸ್ಪೀಕರ್ ರಮೇಶ್ ಕುಮಾರ್ ಹೊರತು ಪಡಿಸಿ ಮಿಕ್ಕೆಲ್ಲಾ 79 ಶಾಸಕರು ಹಾಜರಾಗುತ್ತಾರೆ ಎನ್ನುವ ಸಿದ್ದರಾಮಯ್ಯನವರ ಲೆಕ್ಕಾಚಾರ ಸ್ವಲ್ಪ ಮಟ್ಟಿಗೆ ಉಲ್ಟಾ ಹೊಡೆದಿದೆ.
ಭಿನ್ನಮತೀಯರ ಕ್ಯಾಂಪಿನಲ್ಲಿ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಎಂಡ್ ಟೀಮ್, ಪಕ್ಷದ ಯಾವುದೇ ಎಚ್ಚರಿಕೆಗೆ ಕ್ಯಾರೇ ಅನ್ನದೇ ಸಭೆಯಿಂದ ದೂರ ಉಳಿದಿದೆ. ಆ ಮೂಲಕ ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ವಿರುದ್ದ ತೊಡೆತಟ್ಟಿದ್ದಾರೆ.
ನನ್ನ ಮಾತಿಗೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ, ಎಲ್ಲರೂ ಶಾಸಕಾಂಗ ಸಭೆಯಲ್ಲಿ ಹಾಜರಾಗುವಂತೆ ಮಾಡಿ, ಸಮ್ಮಿಶ್ರ ಸರಕಾರದಲ್ಲಿ ತಮ್ಮ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಳ್ಳೋಣ ಎನ್ನುವ ಸಿದ್ದರಾಮಯ್ಯನವರ ಲೆಕ್ಕಾಚಾರಕ್ಕೆ ರಮೇಶ್ ಸಡ್ಡು ಹೊಡೆದಿದ್ದಾರೆ.
ಪೌರಾಡಳಿತ ಸಚಿವರಾಗಿದ್ದಾಗಲೂ ಸಚಿವ ಸಂಪುಟ ಸಭೆಯಲ್ಲಿ ಸತತ ಗೈರಾಗುತ್ತಿದ್ದ ರಮೇಶ್ ಜಾರಕಿಹೊಳಿಯವರನ್ನು ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಲೇ ಬರುತ್ತಿದ್ದರು. ಸಭೆಯಲ್ಲಿ ಭಾಗವಹಿಸದಿದ್ದರೆ, ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರೂ, ನಾಲ್ವರು ಗೈರಾದರು. ಸಿದ್ದರಾಮಯ್ಯ ಬಳಿ ರಮೇಶ್ ಜಾರಕಿಹೊಳಿ ಇಟ್ಟಿದ್ದು ಒಂದೇ ಒಂದು ಷರತ್ತು ಎನ್ನುವ ಸುದ್ದಿ ಹರಿದಾಡುತ್ತಿದೆ.

ಶಾಸಕ ಜಾಧವ್, ಆರೋಗ್ಯ ಸಂಬಂಧ ಬರಲಾಗುವುದಿಲ್ಲ ಎಂದು ಪತ್ರ
ನಾಲ್ವರಲ್ಲಿ ಒಬ್ಬರು (ಉಮೇಶ್ ಜಾಧವ್ ಹೊರತು ಪಡಿಸಿ) ಮಿಕ್ಕ ಮೂವರು, ರಮೇಶ್ ಜಾರಕಿಹೊಳಿ, ಬಿ ನಾಗೇಂದ್ರ ಮತ್ತು ಮಹೇಶ್ ಕುಮುಟಹಳ್ಳಿ ವಿರುದ್ದ ಕಾಂಗ್ರೆಸ್ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಿದೆ ಎನ್ನುವುದು ಕಾದು ನೋಡಬೇಕಿದೆ. ಶಾಸಕ ಜಾಧವ್, ಆರೋಗ್ಯ ಸಂಬಂಧ ಬರಲಾಗುವುದಿಲ್ಲ ಎಂದು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.

ಸಿದ್ದರಾಮಯ್ಯ ಬಹಳ ಪ್ರಯತ್ನಿಸಿದ್ದರು
ಶಾಸಕಾಂಗ ಸಭೆಗೆ ಮುನ್ನ ರಮೇಶ್ ಜಾರಕಿಹೊಳಿಯವರನ್ನು ಸಂಪರ್ಕಿಸಲು ಸಿದ್ದರಾಮಯ್ಯ ಬಹಳ ಪ್ರಯತ್ನಿಸಿದ್ದರು. ಒಮ್ಮೆ ಸಂಪರ್ಕಕ್ಕೆ ಸಿಕ್ಕ ರಮೇಶ್, ಸರ್ ನಿಮ್ಮ ಬಳಿ ತುಂಬಾ ಮಾತನಾಡುವುದಿದೆ. ಈಗ ಬೇಡ ಎಂದು ಫೋನ್ ಕಟ್ ಮಾಡಿದ್ದರು. ರಮೇಶ್ ಅವರು ಯಾವುದೇ ಸಚಿವ ಸ್ಥಾನದ ಬೇಡಿಕೆಯನ್ನು ಇಟ್ಟಿರಲಿಲ್ಲ ಎನ್ನುವ ಸುದ್ದಿ ಅವರ ಆಪ್ತ ವಲಯದಿಂದ ಬರುತ್ತಿದೆ.

ನಿಮ್ಮ ಸಚಿವ ಸ್ಥಾನ ಅಥವಾ ಇನ್ನಿತರ ಹುದ್ದೆಯ ಆಕಾಂಕ್ಷಿಗಳು ನಾವಲ್ಲ
ಕೆಲವೊಂದು ಮೂಲಗಳ ಪ್ರಕಾರ, ನಾವು ಸ್ವಾಭಿಮಾನಿಗಳು, ನಿಮ್ಮ ಸಚಿವ ಸ್ಥಾನ ಅಥವಾ ಇನ್ನಿತರ ಹುದ್ದೆಯ ಆಕಾಂಕ್ಷಿಗಳು ನಾವಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಸೇಫ್ ಆಗಿರಬೇಕೆಂದರೆ, ಡಿ ಕೆ ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಿ. ಹಾಗೆ ಮಾಡಿದರೆ, ನಮ್ಮಿಂದ ನಿಮಗೆ ಯಾವುದೇ ತೊಂದರೆ ಬರುವುದಿಲ್ಲ ಎಂದು ರಮೇಶ್, ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಜಾರಕಿಹೊಳಿ ಸಹೋದರರು
ಪಿಎಲ್ಡಿ ಬ್ಯಾಂಕ್ ಚುನಾವಣೆಯ ವಿಚಾರದಲ್ಲಿ ಜಾರಕಿಹೊಳಿ ಸಹೋದರರು ಮತ್ತು ಡಿ ಕೆ ಶಿವಕುಮಾರ್ ಅವರ ನಡುವಿನ ಮನಸ್ತಾಪ ತೀವ್ರವಾಗಿತ್ತು. ಡಿಕೆಶಿ, ಬೆಳಗಾವಿ ರಾಜಕೀಯಕ್ಕೆ ಹಸ್ತಕ್ಷೇಪ ಮಾಡಿದ್ದಕ್ಕೆ ಬಹಿರಂಗವಾಗಿಯೇ ಜಾರಕಿಹೊಳಿ ಸಹೋದರರು ಕಿಡಿಕಾರಿದ್ದರು. ಇವೆಲ್ಲದರ ನಡುವೆ, ಪಿಎಲ್ಡಿ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮೇಲುಗೈ ಸಾಧಿಸಿದ್ದು ರಮೇಶ್ ಅವರಿಗಾದ ಹಿನ್ನಡೆ ಎಂದೇ ಹೇಳಲಾಗಿತ್ತು.

ಸಚಿವ ಸ್ಥಾನದ ಭರವಸೆ
ಶಾಸಕಾಂಗ ಸಭೆಗೆ ಮುನ್ನ ಸಚಿವ ಸ್ಥಾನದ ಭರವಸೆಯನ್ನು ಮತ್ತೆ ರಮೇಶ್ ಜಾರಕಿಹೊಳಿಗೆ ಕೊಡಲಾಗಿತ್ತು. ಆದರೆ, ಅವರು ಡಿಕೆಶಿಯನ್ನು ಸಂಪುಟದಿಂದ ಕೈಬಿಡಬೇಕು, ನಾನೇನು ಕಾಂಗ್ರೆಸ್ ವಿರೋಧಿಯಲ್ಲ, ಎನ್ನುವ ತಮ್ಮ ನಿಲುವನ್ನು ರಾಜ್ಯ ಹಿರಿಯ ಕಾಂಗ್ರೆಸ್ ಮುಖಂಡರಿಗೆ ತಲುಪಿಸಿದ್ದರು. ಅದು ಈಡೇರದೇ ಇದ್ದಿದ್ದರಿಂದ, ಶಾಸಕಾಂಗ ಸಭೆಯಿಂದ ಹೊರಗುಳಿದರು ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.












Click it and Unblock the Notifications