JDS & BJP Alliance: ಜೆಡಿಎಸ್ & ಬಿಜೆಪಿಗೆ ಮುಂದುವರಿದ ಶಾಕ್?
ಒಂದು ಕಡೆ ಜೆಡಿಎಸ್ & ಬಿಜೆಪಿ ಮೈತ್ರಿಗೆ ವೇದಿಕೆ ಸಿದ್ಧವಾಗಿದ್ರೆ, ಇನ್ನೊಂದ್ಕಡೆ ಕಾಂಗ್ರೆಸ್ ಈ ಮೈತ್ರಿಗೆ ಶಾಕ್ ಕೊಡುತ್ತಿದೆ. ರಾಜ್ಯದಲ್ಲಿ ಆಪರೇಷನ್ ಹಸ್ತ ಮತ್ತಷ್ಟು ಚುರುಕಾದಂತೆ ಕಾಣುತ್ತಿದ್ದು, ಜೆಡಿಎಸ್ & ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್‌ಗೆ ವಲಸೆ ಬರುತ್ತಿದ್ದಾರೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ನಿರಂತರವಾಗಿ ವಲಸೆ ಹಕ್ಕಿಗಳು ಕಾಂಗ್ರೆಸ್ ಸೇರುತ್ತಿದ್ದು ಬುಧವಾರ ಕೂಡ ವಿಪಕ್ಷಗಳಿಗೆ ಸರ್ಪ್ರೈಸ್ ಕಾದಿದೆಯಂತೆ.
ಹೌದು, ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ದಿನಾಂಕ 27.09.2023 ರಂದು ಬುಧವಾರ ಬೆಳಗ್ಗೆ 10.30 ಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಅನ್ಯ ಪಕ್ಷದವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ತಿಳಿಸಿದೆ. ಇತ್ತೀಚೆಗಷ್ಟೇ ಪದ್ಮನಾಭನಗರದ ವಿವಿಧ ಪಕ್ಷದ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಇದೀಗ ಮತ್ತೆ ಅಂತಹದ್ದೇ ಶಾಕ್ ಸಿಗುವ ನಿರೀಕ್ಷೆ ಇದೆ.

ಮೈತ್ರಿ ಘೋಷಣೆಯಾದರೆ ಮತ್ತೆ ಶಾಕ್?
ಈಗಿನ ಪರಿಸ್ಥಿತಿ ಲೆಕ್ಕಾಚಾರ ಹಾಕಿ ಹೇಳುವುದಾದರೆ, ಅಧಿಕೃತವಾಗಿ ಬಿಜೆಪಿ & ಜೆಡಿಎಸ್‌ನ ಮೈತ್ರಿ ಘೋಷಣೆಯಾದರೆ ವಲಸೆ ಹಕ್ಕಿಗಳ ಆರ್ಭಟ ಮತ್ತಷ್ಟು ಹೆಚ್ಚಾಗುತ್ತದೆ. ಈಗಾಗಲೇ ಕಾಂಗ್ರೆಸ್ ನಾಯಕರೇ ಹೇಳಿರುವಂತೆ, ಬಿಜೆಪಿ & ಜೆಡಿಎಸ್ ಮೈತ್ರಿ ಬಗ್ಗೆ ಸ್ವತಃ ಎರಡೂ ಪಕ್ಷದಲ್ಲಿ ಭಿನ್ನರಾಗ ಇದೆ. ಪರಿಸ್ಥಿತಿ ಹೀಗಿದ್ದಾಗ ಎರಡೂ ಪಕ್ಷಗಳ ಮೈತ್ರಿ ಅಧಿಕೃತವಾಗಿ ಘೋಷಣೆಯಾದರೆ, ಇನ್ನಷ್ಟು ಅಸಮಾಧಾನಿತ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರು ಅಲರ್ಟ್ ಆಗಿದ್ದಾರೆ.
ಬಿಬಿಎಂಪಿ ಚುನಾವಣೆಗೂ ಎಫೆಕ್ಟ್?
ಇಲ್ಲಿಯವರೆಗೆ ಬಿಜೆಪಿ ಮತ್ತು ಜೆಡಿಎಸ್‌ನ ಸಾಕಷ್ಟು ಸ್ಥಳೀಯ ನಾಯಕರು ಕಾಂಗ್ರೆಸ್ ಕಡೆ ಬಂದಿದ್ದಾರೆ. ಅದರಲ್ಲೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿ ಸರ್ಕಾರ ರಚಿಸಿದ ನಂತರ ಈ ವಲಸೆ ಪರ್ವ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಮುಂಬರುವ ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆಗೂ ಎಫೆಕ್ಟ್ ಆಗುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಮಧ್ಯೆ ತಮ್ಮ ತಮ್ಮ ಕ್ಷೇತ್ರಗಳ ಸ್ಥಳೀಯ ನಾಯಕರನ್ನ ಕಾಂಗ್ರೆಸ್ ಸೇರದ ರೀತಿ ತಡೆಯುವ ಜವಾಬ್ದಾರಿ ಆಯಾ ಕ್ಷೇತ್ರಗಳ ಶಾಸಕರಿಗೆ ನೀಡಲಾಗಿದೆ. ಇಷ್ಟಾದರೂ ಈಗ ವಲಸೆ ಪರ್ವ ಮುಂದುವರಿದಿದೆ. ಹೀಗಾಗಿ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಕೈ ಬಲವಾಗುತ್ತಿದ್ದರೆ, ಬಿಜೆಪಿ & ಜೆಡಿಎಸ್‌ನ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ.
ಒಟ್ನಲ್ಲಿ ಇದು ಏನೇ ಇರಲಿ ಮುಂಬರುವ ಲೋಕಸಭೆ ಚುನಾವಣೆಯನ್ನ ಫಸ್ಟ್ ಟಾರ್ಗೆಟ್ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು, ಇದೀಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿನ ಅಸಮಾಧಾನಿತ ನಾಯಕರಿಗೆ ಪಕ್ಷಕ್ಕೆ ವೆಲ್‌ಕಂ ಮಾಡುತ್ತಿದ್ದಾರೆ. ಹಿಗಾಗಿ ಮೈತ್ರಿಯ ಬಳಿಕ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರು ಏನು ಮಾಡ್ತಾರೆ? ಅನ್ನೋ ಕುತೂಹಲ ಹೆಚ್ಚಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಇನ್ನಷ್ಟು ದಿನ ಕಾದು ನೋಡಬೇಕಿದೆ.












Click it and Unblock the Notifications