ನಟ ರಜನಿಕಾಂತ್‌ಗೆ ವಾಟಾಳ್ ನಾಗರಾಜ್ ಕೊಟ್ಟ ವಾರ್ನಿಂಗ್ ಏನು?
ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ನಿನ್ನೆಯಷ್ಟೇ ಬೆಂಗಳೂರು ಬಂದ್ ಮಾಡಿರುವ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಹಾಗೇ ಕರ್ನಾಟಕ ಬಂದ್ ಮಾಡಲು ತಯಾರಿ ಕೂಡ ನಡೆದಿದೆ. ಇದೇ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ನಟ ರಜನಿಕಾಂತ್ ವಿರುದ್ಧ ಗುಡುಗಿದ್ದಾರೆ. ಹಾಗೇ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ಹಾಗಾದರೆ ಈಗ ವಾಟಾಳ್ ನಟ ರಜನಿಕಾಂತ್‌ಗೆ ಕೊಟ್ಟ ವಾರ್ನಿಂಗ್ ಹೇಗಿತ್ತು ಗೊತ್ತಾ?
ಕಾವೇರಿ ವಿವಾದ ಹೆಚ್ಚಾದ ಹಿನ್ನೆಲೆ ಕನ್ನಡಿಗರು ನಿನ್ನೆ ಮೊದಲನೆ ಬಂದ್ ಬಿಸಿ ಅನುಭವಿಸಿದ್ದು ಶುಕ್ರವಾರ ಮತ್ತೊಂದು ಬಂದ್ ಬಿಸಿ ಎದುರಿಸಲು ಸಜ್ಜಾಗಬೇಕಿದೆ. ಈ ಮೂಲಕ ರಾಜ್ಯದಲ್ಲಿ ಕಾವೇರಿ ನೀರಿನ ವಿಚಾರಕ್ಕೆ ಕಿಚ್ಚು ಹೊತ್ತಿರುವಾಗ ತಮಿಳುನಾಡಿಗೆ ಮತ್ತೆ 18 ದಿನ ಪ್ರತಿ ನಿತ್ಯವೂ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ನಿನ್ನೆ ಆದೇಶ ನೀಡಿತ್ತು. ಇಷ್ಟೆಲ್ಲದರ ಮಧ್ಯೆ ಇಂದು ಕಾವೇರಿ ನೀರಿನ ಹೋರಾಟದ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್, ನಟ ರಜನಿಕಾಂತ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ.

ವಾಟಾಳ್ ಕೊಟ್ಟ ವಾರ್ನಿಂಗ್ ಏನು?
ನಟ ರಜನಿಕಾಂತ್ ಅವರು ಕಾವೇರಿ ವಿವಾದ ವಿಚಾರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಈಗ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪದೇ ಪದೆ ನಾನು ಕರ್ನಾಟಕ ಮೂಲದವನು ಎನ್ನುವ ನೀವು, ತಮಿಳುನಾಡು ಸಿಎಂ ಜೊತೆ ಹೋಗಿ ಮಾತನಾಡಬೇಕು. ಅದನ್ನ ಬಿಟ್ಟು ಆಟ ಆಡಬೇಡಪ್ಪಾ ರಜನಿಕಾಂತ್ ನೀನು, ಇಲ್ಲ ಅಂದರೆ ನೀನು ಇಲ್ಲಿಗೆ ಬರಕೂಡದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ ವಾಟಾಳ್. ಶುಕ್ರವಾರ ಕರ್ನಾಟಕ ಬಂದ್ ಇದ್ದು, ಈ ನಡುವೆ ವಾಟಾಳ್ ನಾಗರಾಜ್ ಕೊಟ್ಟ ವಾರ್ನಿಂಗ್ ಕುತೂಹಲ ಕೆರಳಿಸಿದೆ.
ಜೈಲರ್ ಸಕ್ಸಸ್ ನಡುವೆ ಶಾಕ್
ಇತ್ತೀಚೆಗೆ ರಿಲೀಸ್ ಆಗಿದ್ದ ರಜನಿಕಾಂತ್ ಅವರ ಜೈಲರ್ ಸಿನಿಮಾ ಕರ್ನಾಟಕದಲ್ಲಿ ಕೂಡ ದೊಡ್ಡ ಸಕ್ಸಸ್ ಕಂಡಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು ಈ ಸಿನಿಮಾ. ಇದೀಗ ಎಲ್ಲವನ್ನೂ ಪ್ರಸ್ತಾಪಿಸಿ ಪರೋಕ್ಷವಾಗಿ ರಜನಿಕಾಂತ್ ಅವರಿಗೆ ವಾಟಾಳ್ ಎಚ್ಚರಿಕೆ ನೀಡಿದ್ದಾರೆ. ಹಾಗೇ ಕರ್ನಾಟಕದ ಕಷ್ಟದ ಬಗ್ಗೆ ತಮಿಳುನಾಡು ಸಿಎಂ ಜೊತೆಗೂ ಮಾತನಾಡಿ ಎಂದು ನಟ ರಜನಿಕಾಂತ್‌ಗೆ ಆಗ್ರಹಿಸಿದ್ದಾರೆ ವಾಟಾಳ್.

ರಸ್ತೆ, ರಸ್ತೆಯಲ್ಲೂ ಬಂದ್ ಘೋಷಣೆ
ಮತ್ತೊಂದ್ಕಡೆ ಬೆಂಗಳೂರು ಹೃದಯ ಭಾಗದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ತಂಡ, ಮೈಕ್ ಮೂಲಕ ಬಂದ್ ಬಗ್ಗೆ ಸೂಚನೆ ನೀಡುತ್ತಿದೆ. ವಾಹನದಲ್ಲಿ ಮೈಕ್ ಬಳಸಿ ಶುಕ್ರವಾರ ಬಂದ್ ಇರುವ ಬಗ್ಗೆ ಘೋಷಣೆ ಕೂಗುತ್ತಾ ಹೋಗುತ್ತಿದ್ದಾರೆ. ಹೀಗೆ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಸಾಕಷ್ಟು ತಯಾರಿ ನಡೆಸಿದ್ದಾರೆ. ಇನ್ನು ಕಾವೇರಿಯ ವಿಚಾರದಲ್ಲಿ ಕರ್ನಾಟಕದ ಪರ ಹೋರಾಟ ನಡೆಸಿದವರ ವಿರುದ್ಧವೇ ಪೊಲೀಸರ ಮೂಲಕ ಒತ್ತಡ ಹಾಕಿಸಿದ್ದಾರೆ ಎಂದು ಕನ್ನಡಪರ ಸಂಘಟನೆಗಳು ಆರೋಪ ಮಾಡಿವೆ.
ಬೆಂಗಳೂರು ಬಳಿಕ ಇಡೀ ಕರ್ನಾಟಕ ಬಂದ್
ಕಾವೇರಿ ನದಿ ಭಾಗದಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಿದ್ದು ಕುಡಿಯುವ ನೀರು ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ಮುಂದಿನ ಬೇಸಿಗೆ ಹೊತ್ತಿಗೆ ರಾಜ್ಯದಲ್ಲಿ ನೀರಿಗಾಗಿ ಭಾರಿ ಕೊರತೆ ಎದುರಾಗಲಿದೆ. ಇದೇ ಸಂದರ್ಭದಲ್ಲಿ ತಮಿಳುನಾಡು ನೀರಿನ ವಿಚಾರ ಮುಂದಿಟ್ಟುಕೊಂಡು, ನೀರು ಬಿಡಿ ಅಂತಾ ಟಾರ್ಚರ್ ಮಾಡುತ್ತಿದೆ. ಈ ಕುರಿತು ರಾಜಧಾನಿ ಬೆಂಗಳೂರಿನಲ್ಲೂ ನಿನ್ನೆ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಇನ್ನು ಈ ವಿಚಾರವಾಗಿ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

ಒಟ್ನಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದ್ದು, ಶುಕ್ರವಾರ ಕೂಡ ಕನ್ನಡಿಗರು ಮತ್ತೊಂದು ಬಂದ್ ಬಿಸಿ ಎದುರಿಸಲು ಸಜ್ಜಾಗಬೇಕಿದೆ. ಈಗಾಗಲೇ ಒಂದು ಬಂದ್ ಬಿಸಿಗೆ ರಾಜಧಾನಿಯ ಜನ ತತ್ತರಿಸಿದ್ದು ಒಂದೇ ವಾರದಲ್ಲಿ ಎರಡೆರಡು ಬಂದ್ ಎದುರಿಸಬೇಕಿದೆ. ಇದೇ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ರಾಜ್ಯ ಸರ್ಕಾರ, ಶುಕ್ರವಾರ ಕೂಡ ಸೂಕ್ತ ಭದ್ರತೆ ಒದಿಗಸಲು ಸಿದ್ಧತೆ ನಡೆಸಿದೆ. ಅದರಲ್ಲೂ ತಮಿಳುನಾಡು ಗಡಿ ಭಾಗದಲ್ಲಿ ಹೆಚ್ಚಿನ ಭದ್ರತೆಗೆ ಸಿದ್ಧತೆ ಸಾಗಿದೆ.












Click it and Unblock the Notifications