Rishab Shetty: ಸಾಮಾನ್ಯ ಹುಡುಗನೊಬ್ಬ ಅಸಮಾನ್ಯ ಸ್ಟಾರ್ ಆದ ಕಥೆ ಇದು!

ಅದು 1983ರ ಜುಲೈ 7 ಬೆಳಗ್ಗೆ 7 ಗಂಟೆ, ಕುಂದಾಪುರದ ಕೆರಾಡಿ ಗ್ರಾಮದಲ್ಲಿ ಭಾಸ್ಕರ್ ಶೆಟ್ಟಿ & ರತ್ನಾವತಿ ಶೆಟ್ಟಿ ದಂಪತಿಯ ಕೊನೇ ಮಗನಾಗಿ ಪ್ರಶಾಂತ್ ಶೆಟ್ಟಿ ಜನಿಸಿದರು. ಆದರೆ ಇದೇ ಹುಡುಗ ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡುತ್ತಾನೆ ಅಂತಾ ಯಾರೂ ಊಹಿಸಿರಲಿಲ್ಲ. ಆದರೆ ಅದು 35 ವರ್ಷಗಳ ಬಳಿಕ ನಡೆದೇ ಹೋಯ್ತು. ಈಗ ನಿಮಗೆ ಗೊತ್ತಾಗಿರಬಹುದು ಆ ಹುಡುಗ ಯಾರೆಂದು!

ಹೌದು, ಇದು ರಿಷಬ್ ಎಂಬ ಅದ್ಭುತ ಕಲಾವಿದನ ಕಥೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಹವಾ ಸೃಷ್ಟಿಸಿರುವ ರಿಷಬ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸುಮಾರು 10 ವರ್ಷದಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಓಡಾಡುತ್ತಿರುವ ರಿಷಬ್‌ಗೆ ಬಹುದೊಡ್ಡ ಯಶಸ್ಸು ಸಿಕ್ಕಿದ್ದು ಮಾತ್ರ 1 ವರ್ಷದ ಹಿಂದೆ. ಅದು 'ಕಾಂತಾರ' ಸಿನಿಮಾ ಮೂಲಕ. ಹೀಗೆ ಹತ್ತಾರು ಸಿನಿಮಾ ಮಾಡಿದ್ದರೂ ಸಿಗದ ಯಶಸ್ಸು, ಕೇವಲ ಒಂದೇ ಚಿತ್ರ ತಂದುಕೊಟ್ಟಿತ್ತು. ಅಲ್ಲಿಯವರೆಗೂ ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಿಷಬ್ 'ಕಾಂತಾರ' ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಹಾಗಾದರೆ ರಿಷಬ್ ಶೆಟ್ಟಿ ಸಿನಿಮಾ ಜೀವನದ ಏಳುಬೀಳು ಹೇಗಿತ್ತು? ಬನ್ನಿ ತಿಳಿಯೋಣ.

Discover How the Kannada Star Rishab Shetty became pan India star

ಯಾರದ್ದೇ ಬೆಂಬಲವಿಲ್ಲ, ಸ್ನೇಹಿತ ಕೈಬಿಡಲಿಲ್ಲ!

ರಿಷಬ್ ಶೆಟ್ಟಿ ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೆಯೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಮೊದ ಮೊದಲು ಸಣ್ಣಪುಟ್ಟ ಪಾತ್ರ ಮಾಡುತ್ತಾ ಗಾಂಧಿನಗರದಲ್ಲಿ ಅವಕಾಶಕ್ಕಾಗಿ ತುಂಬಾ ಅಲೆದಾಡಿದ್ದರು. ನಟನೆ ಜೊತೆಗೆ ಡೈರೆಕ್ಷನ್ ಕೂಡ ಆಸಕ್ತಿಯಿದ್ದ ಕಾರಣ, ಯಾವುದಾದರೂ ಅವಕಾಶ ಸಿಗಲಿ ಎಂದು ಕಾಯುತ್ತಿದ್ದರು. ಹೀಗೆ ಅವರ ಆಸೆ ಪೂರೈಸಿದ್ದು ಮಾತ್ರ ಅವರ ಪ್ರಾಣ ಸ್ನೇಹಿತ ರಕ್ಷಿತ್ ಶೆಟ್ಟಿ. 2013ರಲ್ಲಿ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಸಿನಿಮಾದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದ ರಕ್ಷಿತ್ ತನ್ನ ಗೆಳೆಯನ ಕೈಬಿಡಲಿಲ್ಲ. ಇವರಿಬ್ಬರೂ ಒಟ್ಟಾಗಿ 'ಉಳಿದವರು ಕಂಡಂತೆ' ಸಿನಿಮಾ ಮಾಡಿದರು. ಉಳಿದವರು ಕಂಡಂತೆ ಸಿನಿಮಾ ದುಡ್ಡು ಮಾಡದೇ ಇದ್ದರೂ ಕನ್ನಡ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿತ್ತು.

'ಕಿರಿಕ್ ಪಾರ್ಟಿ' ಬರದೇ ಇದ್ದಿದ್ದರೆ?

'ಉಳಿದವರು ಕಂಡಂತೆ' ತಂದುಕೊಟ್ಟ ಯಶಸ್ಸು ಮುಂದೆ ಹಲವು ಬೆಳವಣಿಗೆಗೆ ಕಾರಣವು ಆಗಿತ್ತು. ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಒಡನಾಟ ಮತ್ತಷ್ಟು ಹತ್ತಿರವಾಗಿತ್ತು. ಹೀಗಾಗಿ 2016ರಲ್ಲಿ 'ರಿಕ್ಕಿ' ಸಿನಿಮಾ ಮೂಲಕ ಇಬ್ಬರೂ ಮತ್ತೆ ಒಂದಾದರು. ಈ ಚಿತ್ರದಲ್ಲಿ ರಕ್ಷಿತ್ ನಾಯಕ & ರಿಷಬ್ ನಿರ್ದೇಶಕ. 'ರಿಕ್ಕಿ' ಕೂಡ ಕನ್ನಡ ಸಿನಿಪ್ರಿಯರ ಮನಸ್ಸನ್ನು ಗೆದ್ದಿತ್ತು. ಆದ್ರೆ ಇದಾದ ಬಳಿಕ ಬಂದ ಸಿನಿಮಾ ರಿಷಬ್ ಅವರ ಜೀವನವನ್ನೇ ಬದಲಾಯಿಸಿಬಿಟ್ಟಿತ್ತು. 2016ರಲ್ಲಿ 'ರಿಕ್ಕಿ' ನಂತರ ರಿಲೀಸ್ ಆದ ರಿಷಬ್ ನಿರ್ದೇಶನದ 'ಕಿರಿಕ್ ಪಾರ್ಟಿ' ಗಲ್ಲಾಪೆಟ್ಟೆಗೆ ಲೂಟಿ ಮಾಡಿತ್ತು. ಹತ್ತಾರು ಕೋಟಿ ರೂಪಾಯಿ ಬಾಚಿಬಿಟ್ಟಿತು. ಅಲ್ಲದೆ ಇಡೀ ಇಂಡಸ್ಟ್ರಿ ಈ ಸಿನಿಮಾ ನೋಡಿ ಭೇಷ್ ಭೇಷ್ ಎಂದಿತ್ತು.

ಗಡಿನಾಡು ಕನ್ನಡಿಗರ ಬಗ್ಗೆ ಸಿನಿಮಾ

ಈ ಎಲ್ಲಾ ಗೆಲುವು ರಿಷಬ್ ಶೆಟ್ಟಿಗೆ ಹುಮ್ಮಸ್ಸು ತಂದಿತ್ತು ಅಷ್ಟೇ, ಆದರೆ ಗೆಲುವಿನ ಮದ ತಲೆಗೆ ಏರಲಿಲ್ಲ. ಹೀಗಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಏನಾದರೂ ಹೊಸ, ಹೊಸ ಬದಲಾವಣೆ ತರಲು ರಿಷಬ್ ಶೆಟ್ಟಿ ಪ್ರಯತ್ನಿಸುತ್ತಿದ್ದರು. ಹೀಗಾಗಿಯೇ 2018ರಲ್ಲಿ 'ಸಹಿಪ್ರಾ ಶಾಲೆ ಕಾಸರಗೋಡು' ಅನ್ನೋ ಮತ್ತೊಂದು ಸೂಪರ್ ಹಿಟ್ ಚಿತ್ರ ಕೊಟ್ಟರು. ಕರಾವಳಿಯ ಕನ್ನಡಿಗರ ಪ್ರದೇಶ, ಕನ್ನಡಿಗರಿಗೆ ಗೊತ್ತಿದ್ದೂ ಗೊತ್ತಿದ್ದೂ ಕೇರಳಗೆ ಸೇರಿತ್ತು. ಆದರೆ ಹೀಗೆ ಕೇರಳ ಸೇರಿದ್ದ ಕನ್ನಡಿಗರ ಜಾಗ ಕಾಸರಗೋಡು ಭಾಗದಲ್ಲಿ ಕನ್ನಡ ಶಾಲೆಗಳಿಗೆ ಅನ್ಯಾಯ ಆಗುತ್ತಿತ್ತು. ಇದೇ ಕಥೆಯನ್ನ ಸಿನಿಮಾ ಮಾಡಿದ್ದ ರಿಷಬ್ ಶೆಟ್ಟಿ ಗೆದ್ದುಬಿಟ್ಟರು. 'ಸಹಿಪ್ರಾ ಶಾಲೆ ಕಾಸರಗೋಡು' ಕೂಡ ಹತ್ತಾರು ಕೋಟಿ ರೂಪಾಯಿ ದುಡ್ಡು ಮಾಡಿತ್ತು.

Discover How the Kannada Star Rishab Shetty became pan India star

ಕನ್ನಡಿಗರ 'ಕಾಂತಾರ' ಅಬ್ಬರ ಜೋರು

ಇಂತಿಪ್ಪ ರಿಷಬ್ ಶೆಟ್ಟಿ 'ಕಾಂತಾರ' ಎಂಬ ಅದ್ಭುತವನ್ನ ಕನ್ನಡಿಗರ ಮುಂದಿಟ್ಟರು. ಈ ಚಿತ್ರ ಕನ್ನಡ ಮಾತ್ರವಲ್ಲ, ಈ ಹಿಂದೆ ಭಾರತೀಯ ಚಿತ್ರರಂಗದಲ್ಲಿ ಹಿಂದೆ ದಾಖಲಾಗಿದ್ದ ಹಲವು ದಾಖಲೆಗಳನ್ನ ಪುಡಿಪುಡಿ ಮಾಡಿತ್ತು. ಧೈವಭಕ್ತಿಯ ಕಥೆಯನ್ನು ತೆರೆಯ ಮೇಲೆ ಅದ್ಭುತವಾಗಿ ತರುವುದು ರಿಷಬ್ ಶೆಟ್ಟಿಗೆ ಎಷ್ಟು ಚೆನ್ನಾಗಿ ಕರಗತವಾಗಿದೆ ಎಂಬುದು ಈ ಸಿನಿಮಾ ಮೂಲಕ ಸಾಬೀತು ಕೂಡ ಆಗಿತ್ತು. ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿತ್ತು ಕಾಂತಾರ, ಆನಂತರ ಬಂದ ಬೇಡಿಕೆಯ ಬಿರುಗಾಳಿಗೆ ಮನಸೋತು ಈ ಚಿತ್ರವನ್ನ ದೇಶಾದ್ಯಂತ ರಿಲೀಸ್ ಮಾಡಿತ್ತು ಹೊಂಬಾಳೆ ಸಂಸ್ಥೆ. ಈ ಮೂಲಕ ಕನ್ನಡ ಚಿತ್ರರಂಗದ ಮೂಲಕ ಪ್ಯಾನ್ ಇಂಡಿಯಾ ಕೆಟಗರಿಗೆ ಇನ್ನೊಂದು ಕೊಡುಗೆ ಸಿಕ್ಕಿತ್ತು.

ಡಾ.ರಾಜ್ ಸಿನಿಮಾಗಳು ಅಚ್ಚುಮೆಚ್ಚು!

ಪ್ರಶಾಂತ್ ಶೆಟ್ಟಿ ಅಥವಾ ರಿಷಬ್ ಶೆಟ್ಟಿ ಅವರ ಬಾಲ್ಯ ಹಳ್ಳಿ ಮಕ್ಕಳಂತೆ ಸಾಮಾನ್ಯವಾಗಿತ್ತು. ಆದರೆ ತುಂಟಾಟ, ಬಡತನ, ಕಂಬಳ, ಕೋಲ ಇತ್ಯಾದಿಗಳಿಂದ ವರ್ಣರಂಜಿತವಾಗಿತ್ತಂತೆ. ಇನ್ನು ರಿಷಬ್ ಶೆಟ್ಟಿಗೆ ಬಾಲ್ಯದಿಂದಲೂ ವರನಟ ಡಾ. ರಾಜ್‌ಕುಮಾರ್ ಎಂದರೆ ಪ್ರೀತಿ & ಅಭಿಮಾನವಂತೆ. ರಾಜ್ ಸಿನಿಮಾಗಳನ್ನು ನೋಡುತ್ತಲೇ ಬೆಳೆದವರಂತೆ. ಇನ್ನು ಕುಂದಾಪುರ ಮೂಲದವರೇ ಆದ ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅವರು ಕೂಡ ರಿಷಬ್ ಶೆಟ್ಟಿಗೆ ಅಚ್ಚುಮೆಚ್ಚು. 'ನಮ್ಮ ಊರಿನವರು ಬೆಂಗಳೂರಿಗೆ ಹೋಗಿ ಸಾಧನೆ ಮಾಡಿದ್ದಾರೆ' ಎಂಬ ಹೆಮ್ಮೆ. ಅಲ್ಲದೆ ಅವರಂತೆ ತಾವೂ ಸಿನಿಮಾದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲ ರಿಷಬ್ ಶೆಟ್ಟಿ ಅವರಲ್ಲಿ ಬೆಳೆದಿತ್ತು.

Discover How the Kannada Star Rishab Shetty became pan India star

ಪ್ರಶಾಂತ್ ಶೆಟ್ಟಿ ಅವರು ರಿಷಬ್ ಆಗಿದ್ದೇಗೆ?

ಅಂದಹಾಗೆ ಸಿನಿಮಾ ರಂಗದಲ್ಲಿ ಮೆಲ್ಲಗೆ ಸಾಧನೆ ಮಾಡುತ್ತಿದ್ದ ರಿಷಬ್ ಶೆಟ್ಟಿ, ಮೊದಲಿಗೆ ಪ್ರಶಾಂತ್ ಶೆಟ್ಟಿ ಎಂಬ ಹೆಸರಿನಿಂದಲೇ ಗುರುತಿಸಿಕೊಳ್ಳಲು ಮುಂದಾಗಿದ್ದರು. ಆದರೆ ಆಗ ರಿಷಬ್ ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲವಂತೆ. ನಾಟಕ, ಶಾರ್ಟ್ ಮೂವಿ, ಸಿನಿಮಾಗಳ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದರೂ ಗೆಲುವು ಸಿಗಲೇ ಇಲ್ಲ. ಹೀರೋ ಆಗಬೇಕು ಅಂತ ಬಂದವರು, ಅವಕಾಶಕ್ಕಾಗಿ ಅಲೆದಾಡಿದ್ದರು. ಹಾಗೇ ಒಂದೆರಡು ಸಿನಿಮಾಗೆ ಹೀರೋ ಅಂತ ಗೊತ್ತಾದರೂ ಮುಹೂರ್ತಕ್ಕೂ ಮುನ್ನ ಪ್ರಾಜೈಕ್ಟ್ ಕೈತಪ್ಪಿ ಹೋಗಿತ್ತಂತೆ. ಇದರಿಂದ ನೊಂದ ಪ್ರಶಾಂತ್ ಅಥವಾ ರಿಷಬ್ ಶೆಟ್ಟಿ, ತಮ್ಮ ತಂದೆಯ ಸಲಹೆ ಕೇಳುತ್ತಾರೆ. ಅಲ್ಲಿಂದಲೇ ಅವರ ಬದುಕಿಗೆ ದೊಡ್ಡ ತಿರುವುದು ಸಿಗುತ್ತದೆ.

ರಿಷಬ್ ಶೆಟ್ಟಿ ಹೆಸರಲ್ಲೇ ಭಾರಿ ಅದೃಷ್ಟ!

ಪ್ರಶಾಂತ್ ಶೆಟ್ಟಿ ಅಥವಾ ರಿಷಬ್‌ರ ತಂದೆ ಭಾಸ್ಕರ್ ಶೆಟ್ಟಿ ಜ್ಯೋತಿಷ್ಯದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಹೀಗಾಗಿ ಸಿನಿಮಾದಲ್ಲಿ ಬೆಳೆಯಲು ಹೆಸರು ಬದಲಾವಣೆ ಮಾಡಿಕೊಳ್ಳುವ ಬಗ್ಗೆ ತಂದೆ ಬಳಿ ಪ್ರಸ್ತಾಪಿಸಿದ್ದಾರೆ. ಆಗ ಅವರ ತಂದೆ ರಾಜ್‌ಕುಮಾರ್, ರಜಿನಿಕಾಂತ್ ಅವರಂತೆ 'R' ಅಕ್ಷರದಿಂದ ಹೆಸರು ಇಟ್ಟುಕೊಳ್ಳುವಂತೆ ತಂದೆ ಸೂಚಿಸಿದ್ದಾರೆ. ತಮ್ಮ ತಂದೆ ಸೂಚನೆ ನಂತರ ಪ್ರಶಾಂತ್ ಅವರಿಗೆ ಹೊಳೆದಿದ್ದೆ ರಿಷಬ್ ಅನ್ನೋ ಹೆಸರು. ತಕ್ಷಣ ಹಿಂದೆ ಮುಂದೆ ಯೋಚಿಸದೆ ಪ್ರಶಾಂತ್ ಶೆಟ್ಟಿ ತಮ್ಮ ಹೆಸರನ್ನು 'ರಿಷಬ್ ಶೆಟ್ಟಿ' ಎಂದು ಬದಲಾಯಿಸಿದ್ದರು. ಮುಂದೆ ಇದೇ ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಾರೆ.

Discover How the Kannada Star Rishab Shetty became pan India star

'ಕಾಂತಾರ-2' ಯಾವಾಗ ರಿಲೀಸ್

ಕೋಟ್ಯಂತರ ಅಭಿಮಾನಿಗಳು 'ಕಾಂತಾರ-1' ನೋಡಿ ಇದೀಗ 'ಕಾಂತಾರ-2'ಗೆ (Kantara 2) ಕಾಯುತ್ತಿದ್ದಾರೆ. ಈಗಾಗಲೇ ಕಾಂತಾರ-2 ಸಿನಿಮಾಗಾಗಿ ರಿಷಬ್ ಶೆಟ್ಟಿ ಭರ್ಜರಿ ತಯಾರಿ ನಡೆಸಿದ್ದು, ಕುದುರೆ ಸವಾರಿ, ಕಲರಿ ಪಯಟ್ಟು ಸೇರಿದಂತೆ ಅನೇಕ ವಿಧ್ಯೆ ಕಲಿಯುತ್ತಿದ್ದಾರೆ. ಕಾಂತಾರ ಚಿತ್ರದಂತೆ ಕಾಂತಾರ-2 ಕೂಡ ಅಭೂತಪೂರ್ವ ಯಶಸ್ಸು ಗಳಿಸಲೇಬೇಕು ಅಂತಾ ರಿಷಬ್ ಶೆಟ್ಟಿ ಪಣತೊಟ್ಟಿದ್ದಾರೆ. ಹೀಗೆ ಅದ್ಭುತ ಸಾಧನೆ ಮಾಡಿರುವ ನಟನಿಗೆ ಇಂದು 40ನೇ ಹುಟ್ಟುಹಬ್ಬದ ಸಂಭ್ರಮ, ಹೀಗಾಗಿ ಇಂದು ಅಭಿಮಾನಿಗಳನ್ನು ಅವರು ಭೇಟಿ ಮಾಡುತ್ತಿದ್ದಾರೆ. ರಿಷಬ್ ಅವರ ಫ್ಯೂಚರ್ ಪ್ರಾಜೆಕ್ಟ್‌ಗಳಿಗೆ ಆಲ್ ದಿ ಬೆಸ್ಟ್ ಹೇಳೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+