Elephant Arjuna Death: ‘ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ’ ಬಿಕ್ಕಿ ಬಿಕ್ಕಿ ಅಳುತ್ತಿರುವ ಮಾವುತರು
ದಸರಾ ಆನೆ ಅರ್ಜುನ ಸಾವು ಕನ್ನಡಿಗರನ್ನ ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿದೆ. ಅದರಲ್ಲೂ 8 ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಬಗ್ಗೆ ಕನ್ನಡಿಗರು ಪ್ರೀತಿಯನ್ನ ಹೊಂದಿದ್ದರು. ನಿನ್ನೆ ಕಾಡಾನೆ ಜೊತೆ ಸೆಣೆಸಾಟ ನಡೆಸಿ, ಕನ್ನಡ ನಾಡಿನ ಜನರ ರಕ್ಷಣೆ ಮಾಡುವಾಗ ಅರ್ಜುನ ಮೃತಪಟ್ಟಿದ್ದಾನೆ. ಹೀಗಿದ್ದಾಗ ಮಾವುತರು, 'ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ' ಎಂದು ಹಠ ಹಿಡಿದಿದ್ದಾರೆ.
ನಿನ್ನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ಕಾಡಾನೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ನಡೆದಿತ್ತು. ಅರಣ್ಯ ಇಲಾಖೆಗೆ ಇದು ದೊಡ್ಡ ಸವಾಲಾಗಿತ್ತು. ಅರ್ಜುನ ಸೇರಿ 4 ಪಳಗಿದ ಆನೆ ಜೊತೆ ನಿನ್ನೆ ಕಾರ್ಯಾಚರಣೆ ಆರಂಭಿಸಿದ್ದರು ಅರಣ್ಯ ಇಲಾಖೆ ಸಿಬ್ಬಂದಿ. ಹೀಗಿದ್ದಾಗಲೇ ಆನೆ ಒಂದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದ ಸಮಯದಲ್ಲಿ ಅರ್ಜುನನ ಮೇಲೆ ಒಂಟಿ ಸಲಗ ಒಂದು ದಿಢೀರ್ ಅಟ್ಯಾಕ್ ಮಾಡಿತ್ತು. ಈ ದಾಳಿಯಲ್ಲಿ ದಸರಾ ಆನೆ ಅರ್ಜುನ ಮೃತಪಟ್ಟ ನಂತರ ಆಕ್ರೋಶ ಕೂಡ ಭುಗಿಲೆದ್ದಿದೆ.

'ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ'
ನೀವು ಆನೆ ಶಿಬಿರ ಅಥವಾ ಝೂಗಳಿಗೆ ಹೋದಾಗ ಆನೆಗಳು ಹಾಗೂ ಮಾವುತರ ನಡುವೆ ಎಂತಹ ಸಂಬಂಧ ಇರುತ್ತೆ? ಅನ್ನೋದನ್ನ ನೋಡಿರುತ್ತೀರಿ. ಮಾವುತರು ಆನೆಗಳ ಜೊತೆಗೆ ತಂದೆ & ಮಗನ ಸಂಬಂಧ ಇಟ್ಟುಕೊಂಡಿರುತ್ತಾರೆ. ಆನೆಗಳನ್ನ ತಮ್ಮ ಮಕ್ಕಳ ರೀತಿಯಲ್ಲೇ ಅವರು ಸಾಕುತ್ತಾರೆ. ಹೀಗಿದ್ದಾಗ ತಮ್ಮ ಮನೆಯ ಸದಸ್ಯನ ಕಳೆದುಕೊಂಡರೆ ಅವರಿಗೆಲ್ಲಾ ಎಷ್ಟು ನೋವು ಆಗಬೇಡ? ಅದರಲ್ಲೂ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತಿರುವ ಅರ್ಜುನ ಅಂದ್ರೆ ಎಲ್ಲರಿಗೂ ಪ್ರೀತಿ ಇತ್ತು. ಹೀಗೆ ನಿನ್ನೆ ದಿಢೀರ್ ಅರ್ಜುನ ಸಾವನ್ನಪ್ಪಿದ್ದು ಮಾವುತರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರಿಗೆ ಕಳುಹಿಸಲು ಮಾವುತರ ಹಠ!
ಅಂದಹಾಗೆ ನನ್ನ ಆನೆಯನ್ನು ಮೈಸೂರಿಗೆ ಕಳುಹಿಸಿಕೊಡಿ. ಇಲ್ಲಾ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಅರ್ಜುನನ ಜೊತೆಯಲ್ಲಿ ಮಣ್ಣು ಮಾಡಿ ಎಂದು ಮಾವುತರೊಬ್ಬರು ಕಣ್ಣೀರು ಹಾಕಿದ್ದಾರೆ. ಹಾಸನದಲ್ಲಿ ಇಂದು ದಸರಾ ಆನೆ ಅರ್ಜುನ ಅಂತಿಮ ದರ್ಶನ ಪಡೆಯುವಾಗ ಈ ಘಟನೆ ನಡೆದಿದೆ. ಮಾವುತ ವಿನು ಎಂಬುವವರು ದಸರಾ ಆನೆಯಾದ ಅರ್ಜುನನ ಜೊತೆ ತುಂಬಾ ಆತ್ಮೀಯ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಹೀಗಿದ್ದಾಗ, ದಿಢೀರ್ ಅರ್ಜುನ ಹೀಗೆ ಎಲ್ಲರನ್ನೂ ಬಿಟ್ಟು ಹೋಗಿದ್ದು ಈ ಆಕ್ರೋಶ ಮತ್ತು ನೋವಿಗೆ ಕಾರಣವಾಗಿತ್ತು.

ಮನೆಯವರಿಗೆ ಸುಳ್ಳು ಹೇಳಿದ್ದೀನಿ..
ಅರ್ಜುನ ಆನೆಯ ಸೊಂಡಿಲು ತಬ್ಬಿ ಹಿಡಿದಿದ್ದ ಮಾವುತ ವಿನು, ನನ್ನ ಆನೆ ಬದುಕಿಸಿಕೊಡಿ ಎಂದು ಅತ್ತರು. ಹಾಗೆಯೇ ನನ್ನ ಆನೆ ಅರ್ಜುನನ್ನ ಮೈಸೂರಿಗೆ ಕಳುಹಿಸಿ. ಇಲ್ಲ ನನ್ನನ್ನು & ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ. ನನ್ನ ಅರ್ಜುನ ಸತ್ತಿಲ್ಲ ಅಂತಾ, ನನ್ನ ಹೆಂಡತಿ & ಮಕ್ಕಳಿಗೆ ಹೇಳಿದ್ದೇನೆ. ಹೀಗಾಗಿ ಅರ್ಜುನ ಆನೆಯನ್ನ ಬದುಕಿಸಿ ನನ್ನ ಜತೆ ಕಳುಹಿಸಿಕೊಡಿ ಅಂತಾ ಮಾವುತ ವಿನು ಬಿಕ್ಕಿ ಬಿಕ್ಕಿ ಅತ್ತರು. ಈ ವೇಳೆ ಅಲ್ಲೇ ಇದ್ದರ ಜನ ಕೂಡ ಕಣ್ಣೀರು ಹಾಕಿದ್ದಾರೆ. ಕಾಡಾನೆಗಳ ಹಾವಳಿಯಿಂದ, ನಾಡಿನ ಮನುಷ್ಯರ ಜೀವನ ಮತ್ತು ಜೀವ ಬದುಕಿಸಲು ಹೋಗಿ ದಸರಾ ಆನೆ ಅರ್ಜುನ ಜೀವ ಬಿಟ್ಟಿದ್ದಾನೆ.
ಒಟ್ನಲ್ಲಿ ಅರ್ಜುನ ಆನೆಯ ಸಾವು ಮಾವುತರ ಜೀವ ಹಿಂಡುತ್ತಿದೆ. ಎಲ್ಲರೂ ಅರ್ಜುನನಿಗೆ ಅಂತಿಮ ವಿದಾಯ ಹೇಳುತ್ತಾ, ಕಣ್ಣೀರು ಹಾಕುತ್ತಿದ್ದಾರೆ. ಎಲ್ಲರಿಗೂ ಆತ್ಮೀಯ & ಸಲುಗೆ ಬೆಳೆಸಿಕೊಂಡಿದ್ದ ಅರ್ಜುನ ಹೇಳಿದ ಮಾತು ಕೇಳುತ್ತಿದ್ದ. ಆದರೆ ಹೀಗೆ ದಿಢೀರ್ ಅರ್ಜುನ, ಇವರನ್ನೆಲ್ಲಾ ಬಿಟ್ಟು ಹೋಗುತ್ತಿರುವುದು ಮಾವುತರಿಗೆ ತಡೆಯಲು ಆಗುತ್ತಿಲ್ಲ. ನಿನ್ನೆಯಷ್ಟೆ ತಮ್ಮ ಜೊತೆಗೆ ಓಡಾಡಿಕೊಂಡಿದ್ದ ಅರ್ಜುನ ಈಗ ಇಲ್ಲ ಎಂಬುದು ನೋವು ತರಿಸಿದೆ. ಈ ಹಿನ್ನೆಲೆಯಲ್ಲಿ ಮಾವುತರ ಕಣ್ಣೀರು ಜೋರಾಗಿದೆ.












Click it and Unblock the Notifications