Parashurama Idol: 33 ಅಡಿ ಎತ್ತರದ ಪರಶುರಾಮ ಪ್ರತಿಮೆ ನಾಪತ್ತೆ!
ಜಗತ್ತಿನಲ್ಲಿ ಏನೆಲ್ಲಾ ನಾಪತ್ತೆ ಆಗಬಹುದು ಹೇಳಿ? ಅದ್ರಲ್ಲೂ ಈ ಕಳ್ಳರ ಕಣ್ಣು ಬಿದ್ದರೆ ಊರಿಗೆ ಊರೇ ನಾಪತ್ತೆ ಆಗಿಬಿಡಬಹುದು. ಇಲ್ಲಿ ಇಂತಹದ್ದೇ ಘಟನೆ ನಡೆದಿದೆ. ಆದರೆ ಈ ಜಾಗದಲ್ಲಿ ಊರು ನಾಪತ್ತೆಯಾಗಿಲ್ಲ ಬದಲಾಗಿ 33 ಅಡಿ ಎತ್ತರ ಇದ್ದ ಕಂಚಿನ ಪ್ರತಿಮೆಯೇ ಈಗ ದಿಢೀರ್ ನಾಪತ್ತೆಯಾಗಿದೆ! ಹಾಗಾದ್ರೆ ಪ್ರತಿಮೆ ಹೋಗಿದ್ದು ಎಲ್ಲಿಗೆ? ಪ್ರತಿಮೆ ನಾಪತ್ತೆಯಾಗಲು ಯಾರು ಕಾರಣ?
ಅಷ್ಟಕ್ಕೂ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ಲು ಗುಡ್ಡದಲ್ಲಿ ಇಡೀ ದೇಶ ನಿಂತು ನೋಡುವಂತೆ ಪರಶುರಾಮ ಥೀಮ್ ಪಾಕ್೯ ನಿರ್ಮಿಸಲಾಗುತ್ತಿದೆ. ಅದೇನೋ ಗೊತ್ತಿಲ್ಲ ಈ ಕಾಮಗಾರಿ ಶುರುವಾದ ದಿನದಿಂದ ಒಂದಲ್ಲ ಒಂದು ರೀತಿಯ ಗೊಂದಲಗಳು ಇದ್ದೇ ಇದೆ. ಇಷ್ಟೆಲ್ಲದರ ಮಧ್ಯೆ ಈಗ ದಿಢೀರ್ 33 ಅಡಿ ಎತ್ತರ ಇರುವ ಪ್ರತಿಮೆ ನಾಪತ್ತೆ ಆಗೋಗಿದೆ. ಹಾಗಾದರೆ ಹೀಗೆ ಆಗಲು ಕಾರಣ ಏನು? ಸ್ಥಳೀಯರು ಏನ್ ಹೇಳ್ತಾರೆ? ಬನ್ನಿ ತಿಳಿಯೋಣ.

ಪ್ರತಿಮೆ ನಾಪತ್ತೆ, ಠಾಣೆಗೆ ದೂರು!
ಹೌದು, ಮೊದಲೇ ಹೇಳಿದಂತೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ನಿರ್ಮಾಣ ಮಾಡಲಾದ ಪರಶುರಾಮ ಥೀಮ್ ಪಾಕ್೯ ಗೊಂದಲದ ಗೂಡಾಗಿದೆ. ಕಾಮಗಾರಿ ಪ್ರಾರಂಭದಿಂದ ಒಂದಲ್ಲ ಒಂದು ಸಮಸ್ಯೆ ಇದ್ದಿದ್ದೇ. ಇದೀಗ ಪ್ರತಿಮೆ ಕೂಡ ಏಕಾಏಕಿ ಮಾಯವಾಗಿರುವುದು, ಮತ್ತಷ್ಟು ಅಕ್ರೊಶಕ್ಕೆ ಕಾರಣವಾಗಿದೆ. ಪರಶುರಾಮನ ಪ್ರತಿಮೆ ಪಾದ ಬಿಟ್ಟು ಉಳಿದ ಬಾಗ ಕಾಣೆಯಾಗಿದೆ ಅಂತಾ ಸ್ಥಳೀಯರು ದೂರು ಕೂಡ ನೀಡಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ.
33 ಅಡಿ ಎತ್ತರದ ಕಂಚಿನ ಪ್ರತಿಮೆ!
ಇನ್ನು ಬೈಲೂರು ಉಮಿಕಲ್ಲು ಬೆಟ್ಟದ ಮೇಲೆ ನಿಂತಿದ್ದ ಪರಶುರಾಮನ ಮೂರ್ತಿ ಕಾಣುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಕೊಡಲಿ & ಬಿಲ್ಲು ಸಹ ಕಾಣ್ತಿಲ್ಲ ಅಂತಾ ಆರೋಪಿಸಲಾಗಿದೆ. ರಾತ್ರೋ ರಾತ್ರಿ ಪ್ರತಿಮೆ ಕಳ್ಳತನ ಮಾಡಲಾಯ್ತಾ? ಇಲ್ಲ ಮೂರ್ತಿ ತೆರವು ಮಾಡಿದ್ರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗೇ ಸ್ಥಳೀಯ ಶಾಸಕ ಸುನಿಲ್ ಕುಮಾರ್ ವಿರುದ್ಧ ಬೇರೆ ಪಕ್ಷಗಳ ನಾಯಕರು ಮತ್ತು ಮುಖಂಡರು ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ. 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ಹೋಗಿದ್ದೆಲ್ಲಿಗೆ? ಎಂಬ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ
ಪ್ರತಿಮೆ ಅಡಿಪಾಯ ಭದ್ರಪಡಿಸಿ
ಈ ಕುರಿತು ಸ್ಥಳೀಯ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸ್ಥಾಪಿಸಿದ್ದ ಪ್ರತಿಮೆ ನಕಲಿ ಹೀಗಾಗಿ ಕ್ಷೇತ್ರದ ಜನತೆಗೆ ಸತ್ಯ ಮನದಟ್ಟಾಗಿದೆ. ಅದ್ದರಿಂದ ತಕ್ಷಣ ಅಸಲಿ ಪ್ರತಿಮೆಯ ಸ್ಥಾಪನೆ ಮಾಡಬೇಕು & ಕಾರ್ಕಳ ಜನತೆ ಬಳಿ ಕ್ಷಮೆ ಯಾಚಿಸಲಿ. ಮುಂದಿನ ದಿನದಲ್ಲಿ ಅಸಲಿ ಪ್ರತಿಮೆ ಸ್ಥಾಪನೆ ಹಂತ ಹಂತವಾಗಿ ಹಾಗೂ ಕ್ರಮ ಬದ್ದವಾಗಿ ಕಾಮಗಾರಿ ನಡೆಸಲಿ. ಈಗ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಅದರ ಗುಣಮಟ್ಟ ಹಾಗೂ ತಾಂತ್ರಿಕತೆ ಬಗ್ಗೆ ಮಾಹಿತಿ ಪಡೆದು ಪ್ರತಿಮೆ ಅಡಿಪಾಯ ಭದ್ರಪಡಿಸಿ ಎಂದು ಆಗ್ರಹಿಸಿದ್ದಾರೆ.

ಒಟ್ನಲ್ಲಿ ಏಕಾಏಕಿ 33 ಅಡಿ ಎತ್ತರ ಇದ್ದ ಪರಶುರಾಮನ ಕಂಚಿನ ಪ್ರತಿಮೆ ಕಾಣೆಯಾಗಿರುವುದು ಈಗ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಂತಾ, ಸ್ಥಳೀಯರು ಆಗ್ರಹಿಸ್ತಿದಾರೆ. ಹಾಗೇ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಪೊಲೀಸ್ ಠಾಣೆಗೂ ಈ ಕುರಿತು ದೂರು ನೀಡಲಾಗಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಮುಂದೆ ಏನಾಗುತ್ತೆ? ಅನ್ನೋದನ್ನು ಕಾದು ನೋಡಬೇಕಿದೆ. ಹಾಗೇ ಪೊಲೀಸರ ತನಿಖೆ ಮೇಲೆ ಎಲ್ಲಾ ನಿರ್ಧಾರವಾಗಲಿದೆ. ಆದರೆ ಆದಷ್ಟು ಬೇಗ ಪ್ರತಿಮೆ ಹೋಗಿದ್ದು ಎಲ್ಲಿಗೆ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಇಲ್ಲವಾದರೆ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗುವ ಅಪಾಯ ಇದೆ.












Click it and Unblock the Notifications