Government Employees: 'ಈ ಕರ್ತವ್ಯದಿಂದ ವಿಮುಕ್ತರಾಗುವ ಸರ್ಕಾರಿ ನೌಕರರಿಗೆ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ'
ಬೆಂಗಳೂರು, ಸೆಪ್ಟೆಂಬರ್ 25: ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿನಾಂಕ:27.09.2025 ರಂದು ಮುಂಜಾನೆ 11.30 ಗಂಟೆಗೆ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಅವರು ತಿಳಿಸಿದರು.
ಇಂದು(ಗುರುವಾರ) ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರಿಗೆ ಸಚಿವ ಸಂಪುಟದ ನಿರ್ಣಯಗಳ ವಿವರಗಳನ್ನು ನೀಡಿದ ಎಚ್.ಕೆ ಪಾಟೀಲ ಅವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಳ್ಳಲಾಗಿರುವ ಈ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಡುವ ಅಧಿಕಾರಿ/ನೌಕರರು ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೇ ಮತ್ತು ಕರ್ತವ್ಯಗಳನ್ನು ನಿರ್ವಹಿಸದೇ ಇರುವಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬೆಂಗಳೂರು ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ಪ್ರಾಯೋಜಿಸಲಾಗಿದೆ ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕಾಗಿ ಗಣತಿದಾರರಾಗಿ ನಿಯೋಜಿಸಲ್ಪಡುವ ಸರ್ಕಾರ, ನಿಗಮ/ಮಂಡಳಿಗಳ ಅಧಿಕಾರಿ/ ನೌಕರರುಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ರಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತುಕ್ರಮ ಮತ್ತು ದಂಡನೆ ವಿಧಿಸುವ ಅಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಪ್ರತ್ಯಾಯೋಜಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಗಣಪತಿ ಆತ್ಮಹತ್ಯೆ ಕೇಶವನಾರಾಯಣ ಆಯೋಗದ ವರದಿ ತಿರಸ್ಕಾರ
ಹಿಂದಿನ ಗೃಹಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಎ.ಎಮ್ ಪ್ರಸಾದ ಐ.ಪಿ.ಎಸ್ ಪ್ರಣವ ಮೊಹಾಂತಿ ಐ.ಪಿ.ಎಸ್ ಇವರುಗಳ ವಿರುದ್ಧ ದಿ.ಗಣಪತಿಯವರು ಸಂದರ್ಶನದಲ್ಲಿ ಆರೋಪಿಸಿರುವುದನ್ನು ತಳ್ಳಿಹಾಕಿ ಎಮ್.ಕೆ.ಗಣಪತಿಯವರ ಆತ್ಮಹತ್ಯೆಗೆ ಇವರುಗಳು ಕಾರಣವಲ್ಲವೆಂಬ ಅಭಿಪ್ರಾಯವನ್ನು ಕೇಶವನಾರಾಯಣ ಆಯೋಗವು ಸ್ಪಷ್ಟವಾಗಿ ಹೇಳಿದ್ದು, ತನಿಖಾ ಪ್ರಕರಣದಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿರುವುದರಿಂದ ಕೆಲವು ಅಧಿಕಾರಿ/ಸಿಬ್ಬಂದಿಯವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಡಿರುವ ಶಿಫಾರಸ್ಸನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಇಂದಿಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಎಂ.ಕೆ ಶ್ರೀವಾಸ್ತವ್, ಐಪಿಎಸ್ ನಿವೃತ್ತ ಪೊಲೀಸ್ ಮಹಾನಿರ್ದೇಶಕರು ಇವರು ಸರ್ಕಾರಕ್ಕೆ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿ ತನಿಖಾ ಕ್ರಮಗಳ ಬಗ್ಗೆ ವಿಚಾರಣಾ ಆಯೋಗವು ಮಾಡಿರುವ ಆಕ್ಷೇಪಣೆಗಳನ್ನು ಸಿ.ಬಿ.ಐ ಸಲ್ಲಿಸಿರುವ ವರದಿಯನ್ನು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ಮಾನ್ಯ ಮಾಡಿರುವುದರಿಂದ ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಎಸ್.ಎಲ್.ಪಿ ಯಲ್ಲಿ ಸಿ.ಬಿ.ಐ ಪ್ರಕರಣವನ್ನು ಮುಕ್ತಾಯ ಮಾಡಿರುವುದನ್ನು ಎತ್ತಿ ಹಿಡಿದಿರುವುದರಿಂದ, ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆಯ ಶಿಫಾರಸ್ಸನ್ನು ಒಪ್ಪುವ ಅಗತ್ಯವಿಲ್ಲವೆಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿರುತ್ತದೆ. ಕೆ.ಎನ್. ಕೇಶವನಾರಾಯಣ, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಇವರ ವಿಚಾರಣಾ ವರದಿಯನ್ನು ಸಚಿವ ಸಂಪುಟವು ಭಾಗಶ: ಒಪ್ಪಿ, ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆಯ ಶಿಫಾರಸ್ಸನು ತಿರಸ್ಕರಿಸಿದೆ ಎಂದು ತಿಳಿಸಿದರು.











Click it and Unblock the Notifications