ಜಿಡಿಪಿ ಕುಸಿತಕ್ಕೆ ಹೂಡಿಕೆ ಇಳಿಮುಖ ಕಾರಣ : ರಂಗರಾಜನ್
ಬೆಂಗಳೂರು, ಅಕ್ಟೋಬರ್ 5: ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಕುಸಿತಕ್ಕೆ ಬಂಡವಾಳ ಹೂಡಿಕೆ ದರ ಇಳಿಕೆಯಾಗಿರುವುದೇ ಕಾರಣ ಎಂದು ಆರ್‌ಬಿಐ ನಿವೃತ್ತ ಗವರ್ನರ್ ಹಾಗೂ ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟರು.
ಬುಧವಾರ ಬೆಂಗಳೂರಿನಲ್ಲಿ 'ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್'ನ ಶೈಕ್ಷಣಿಕ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

2007-08ರಲ್ಲಿ ಬಂಡವಾಳ ಹೂಡಿಕೆ ಪಾಲು ಶೇ. 38ರಷ್ಟಿತ್ತು. ಆಗ ಜಿಡಿಪಿ ಶೇ. 9ತಲುಪಿತ್ತು. ಇದೀಗ ಬಂಡವಾಳ ಹೂಡಿಕೆ ಶೇ. 27ಕ್ಕೆ ಇಳಿಕೆಯಾಗಿರುವುದರಿಂದ ಉತ್ಪಾದಕತೆಯ ಮಟ್ಟವೂ ಇಳಿಕೆಯಾಗಿದೆ ಎಂದು ಹೇಳಿದರು.
ದೇಶದ ಜಿಡಿಪಿ ಬೆಳವಣಿಗೆ ದರ 5-6 ವರ್ಷ ಶೇ. 8ರಿಂದ ಶೇ. 9ರ ಆಸುಪಾಸಿನಲ್ಲಿತ್ತು. ದೇಶದ ಆರ್ಥಿಕತೆ ಸುಸ್ಥಿರವಾಗಿರಲು ಮನಮೋಹನ ಸಿಂಗ್ ರಂತಹ ಆರ್ಥಿಕ ತಜ್ಞರು ದೇಶದ ಪ್ರಧಾನಿಯಾಗಿದ್ದು ಕಾರಣ ಕಾರಣ ಎಂದು ರಂಗರಾಜನ್ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಬಗ್ಗೆ ಮನಮೋಹನ್ ಸಿಂಗ್ ಮೆಚ್ಚುಗೆ
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಮನಮೋಹನ್ ಸಿಂಗ್, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿರುವ ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
12 ಆಯವ್ಯಯಗಳನ್ನು ಸಿದ್ದಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 8,165 ಕೋಟಿ ರೂ.ಗಳಷ್ಟು ರೈತರ ಸಾಲ ಮನ್ನಾ ಮಾಡಿದ ನಂತರವೂ ರಾಜ್ಯದಲ್ಲಿ ಉತ್ತಮ ಆರ್ಥಿಕ ಸ್ಥಿತಿಯನ್ನು ಕಾಯ್ದುಕೊಂಡಿದ್ದಾರೆ. ಯು.ಪಿ.ಎ. ಸರ್ಕಾರದ ಆಹಾರ ಭದ್ರತಾ ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯ ಯೋಜನೆಯನ್ನು ಜಾರಿಗೊಳಿಸುವುರೊಂದಿಗೆ ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿದ್ದಾರೆ. ಕರ್ನಾಟಕ ರಾಜ್ಯವು ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿರುವ ಅತ್ಯುತ್ತಮ ರಾಜ್ಯಗಳಲ್ಲಿ ಒಂದು," ಎಂದು ಬಣ್ಣಿಸಿದರು.
ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಯೋಜನಾ ಆಯೋಗವನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಅಸಮಾನತೆಯನ್ನು ನಿಯಂತ್ರಣಕ್ಕೆ ತರಲು ಹೊಸ ಪ್ರಯತ್ನಗಳ ಅಗತ್ಯವಿದೆ. ಹೊಸ ರೂಪದ ಸಾಮಾಜಿಕ, ಆರ್ಥಿಕ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಉನ್ನತ ಶಿಕ್ಷಣಕ್ಕೆ ಹೆಸರುವಾಸಿಯಾದ ಬೆಂಗಳೂರಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಭವಿಷ್ಯದಲ್ಲಿ ದೇಶದ ಅತ್ಯುತ್ತಮ ದರ್ಜೆಯ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications