ಸಚಿವರ ಕಾರ್ಯವೈಖರಿ ಬಗ್ಗೆ ದಿಗ್ವಿಜಯ್ ಸಿಂಗ್ ಅತೃಪ್ತಿ
ಬೆಂಗಳೂರು, ಜ.6 : ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವರ ವಿರುದ್ಧ ರಾಜ್ಯಪಾಲರು ಅತೃಪ್ತಿ ವ್ಯಕ್ತಪಡಿಸಿದ್ದು ಹಳೆ ಸುದ್ದಿ, ಸದ್ಯ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಸಮನ್ವಯ ಸಮತಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸಮ್ಮಖದಲ್ಲೇ ಸಚಿವರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಸಿಂಗ್ ಆರೋಪಿಸಿದ್ದಾರೆ.
ಸೋಮವಾರ ಕಾಂಗ್ರೆಸ್ ಸಮನ್ವಯ ಸಮತಿ ಅಧ್ಯಕ್ಷ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯಿತು.ಸಭೆಯಲ್ಲಿ ಸಮನ್ವಯ ಸಮಿತಿ ಸದಸ್ಯರಾದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಿಎಂ ಸಿದ್ದರಾಮಯ್ಯ, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಎ. ಚೆಲ್ಲಕುಮಾರ್ ಹಾಗೂ ಶಾಂತರಾಂ ನಾಯ್ಕ್, ಗೃಹ ಸಚಿವ ಕೆ.ಜೆ. ಜಾರ್ಜ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ದಿಗ್ವಿಜಯ್ ಸಿಂಗ್, ಸಚಿವರ ಕಾರ್ಯವೈಖರಿ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಆದೇಶಿಸಿದ್ದಾರೆ.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ವಿರುದ್ಧ ದಿಗ್ವಿಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಈ ಸಚಿವರು ಸರಿಯಾಗಿ ಕಾರ್ಯ ನಿರ್ವಹಣೆ ಮಾಡಿಲ್ಲ ಎಂಬುದು ಸಿಂಗ್ ಅಸಮಾಧಾನಕ್ಕೆ ಕಾರಣವಾಗಿದೆ. [ಸಿಎಂ ಬೆಸ್ಟ್, ಕೆಲವು ಸಚಿವರು ವೇಸ್ಟ್]
ಭಾರೀ ವಿವಾದಕ್ಕೆ ಕಾರಣವಾಗಿದ್ದ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ವಿಚಾರದಲ್ಲಿ ಸಚಿವ ಟಿಬಿ ಜಯಚಂದ್ರ ಅವರು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂಬುದು, ಸಿಂಗ್ ಅಸಮಾಧಾನಕ್ಕೆ ಕಾರಣವಾದರೆ, ಸಿಇಟಿ ವಿಚಾರ ವಿಕೋಪಕ್ಕೆ ಹೋದಾಗ ಶರಣ ಪ್ರಕಾಶ ಪಾಟೀಲ್ ಮತ್ತು ಆರ್.ವಿ.ದೇಶಪಾಂಡೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ದಿಗ್ವಿಜಯ್ ಸಿಂಗ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಸಚಿವರ ಕಾರ್ಯವೈಖರಿಯಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ ಎಂದು ಸಿಎಂಗೆ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮಳೆಗಾಲ ಮುಗಿದರೂ ರಾಜ್ಯದ ರಸ್ತೆಗಳ ಗುಂಡಿ ಮುಚ್ಚದ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಕಾರ್ಯವೈಖರಿ ಬಗ್ಗೆಯೂ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದು, ಸಂಪುಟದ ಎಲ್ಲಾ ಸಚಿವರು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಿ ಎಂದು ಸಿಎಂಗೆ ಸೂಚನೆ ನೀಡಿದ್ದಾರೆ.











Click it and Unblock the Notifications