ಕಡೂರು : ಟ್ಯಾಂಕರ್ ಪಲ್ಟಿ, 5 ಮನೆಗೆ ಬೆಂಕಿ, ಒಬ್ಬರು ಸಜೀವ ದಹನ
ಚಿಕ್ಕಮಗಳೂರು, ಜೂನ್ 19 : ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದೆ. ಅಪಘಾತದಲ್ಲಿ ಓರ್ವ ಸಜೀವವಾಗಿ ದಹನವಾಗಿದ್ದು, 5 ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ.
ಮಂಗಳವಾರ ಮಧ್ಯಾಹ್ನ ಕಡೂರು ತಾಲೂಕಿನ ಗಿರಿಯಾಪುರ ಎಂಬಲ್ಲಿ ಈ ಅಪಘಾತ ನಡೆದಿದೆ. ಹೊಸದುರ್ಗಕ್ಕೆ ಹೋಗುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದ್ದು. ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದೆ.
ರಸ್ತೆ ಅಕ್ಕಪಕ್ಕದಲ್ಲಿದ್ದ ಸುಮಾರು 5 ಮನೆಗಳಿಗೂ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆಯ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. 4ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

ಅಪಘಾತದಲ್ಲಿ ಟ್ಯಾಂಕರ್ ಕ್ಲೀನರ್ ಸಜೀವವಾಗಿ ದಹನವಾಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಬೆಂಕಿ ಹೊತ್ತಿಕೊಂಡ ಬಳಿಕ ಗಾಯಗೊಂಡು ಚೀರಾಡುತ್ತಿದ್ದ ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಟ್ಯಾಂಕರ್ ವೊಳಗೆ ಇನ್ನೂ ಇಬ್ಬರು ಇದ್ದರು ಎಂದು ತಿಳಿದುಬಂದಿದೆ.
ಟ್ಯಾಂಕರ್ ಪಲ್ಟಿಯಾದ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಟ್ಯಾಂಕರ್‌ನಲ್ಲಿದ್ದ ಡೀಸೆಲ್ ಹರಿದು ಹೋದ ಕಡೆಯಲ್ಲಾ ಬೆಂಕಿ ವ್ಯಾಪಿಸಿದೆ. ಟ್ಯಾಂಕರ್ ರಸ್ತೆ ಬಿಟ್ಟು ಮನೆಯ ಕಾಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಆದ್ದರಿಂದ ಹೊತ್ತಿಕೊಂಡ ಬೆಂಕಿ ಮನೆಗೂ ವ್ಯಾಪಿಸಿದೆ.
ಮನೆಯಲ್ಲಿ ಯಾರಿದ್ದರು?, ಅವರ ಸ್ಥಿತಿ ಏನಾಗಿದೆ? ಎಂಬುದು ಇನ್ನೂ ತಿಳಿದುಬಂದಿಲ್ಲ. ಬೆಂಕಿ ಮತ್ತು ದಟ್ಟ ಹೊಗೆಯ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ.
ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.












Click it and Unblock the Notifications