Diesel Price Hike: ಡೀಸೆಲ್ ದರ ಏರಿಸಿದ್ದು ಇದೇ ಕಾರಣಕ್ಕೆ: ಅಶೋಕ್ ಗಂಭೀರ ಆರೋಪ
ರಾಜ್ಯ ಕಾಂಗ್ರೆಸ್ ಸರ್ಕಾರವು ಹೊಸ ಆರ್ಥಿಕ ವರ್ಷದ ಮೊದಲ ದಿನವೇ ಬೆಲೆ ಏರಿಕೆ ಶಾಕ್ ನೀಡಿದೆ. ಡೀಸೆಲ್ ದರ ಲೀಟರ್ ₹2 ಏರಿಕೆ ಮಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ರಾಜ್ಯ ಸರ್ಕಾರವು ದಿನಕ್ಕೊಂದು ಬೆಲೆ ಏರಿಕೆ ಮಾಡುತ್ತಲೇ ಇದೆ ಎಲ್ಲರೂ ದೂರುತ್ತಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಅವರು ಡೀಸೆಲ್ ದರ ಏರಿಕೆಯ ಶಾಕಿಂಗ್ ಕಾರಣ ಬಿಚ್ಚಿಟ್ಟಿದ್ದಾರೆ.
ಕನ್ನಡಿಗರಿಗೆ ಈ ವರ್ಷ ಮಾರಿಹಬ್ಬ ಕಾದಿದೆ ಎಂದು ಬಜೆಟ್ ಅಧಿವೇಶನದಲ್ಲಿ ನಾನು ನೀಡಿದ್ದ ಎಚ್ಚರಿಕೆ ಈಗ ಅಕ್ಷರಶಃ ನಿಜವಾಗುತ್ತಿದೆ. ಬಜೆಟ್‌ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನ, ಬೆಲೆ ಏರಿಕೆಯನ್ನ ಘೋಷಣೆ ಮಾಡದೆ, ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ ಸಿದ್ದರಾಮಯ್ಯ ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ, ಬಡವರು, ಮಧ್ಯಮ ವರ್ಗದ ರಕ್ತ ಹೀರಲು ಹೊರಟಿದ್ದಾರೆ ಎಂದು ದೂರಿದ್ದಾರೆ.

ಹಾಲಿನ ದರ ಏರಿಕೆ ಮಾಡಿದ್ದಾಯ್ತು, ಕಸ ಸಂಗ್ರಹಣ ಮೇಲೆ ತೆರಿಗೆ ಹಾಕಿದ್ದಾಯ್ತು, ಈಗ ಏಕಾಏಕಿ ಡೀಸೆಲ್ ಬೆಲೆಯನ್ನು ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ. ಡೀಸೆಲ್ ಅಂದರೆ ಅದು ಸರಕು ಸಾಗಾಣಿಕೆಗೆ ಉಪಯೋಗಿಸುವ ಇಂಧನವಾಗಿದೆ. ಡೀಸೆಲ್ ಬೆಲೆ ಹೆಚ್ಚಾದರೆ ಕ್ರಮೇಣ ಹಾಲು, ತರಕಾರಿ, ಹಣ್ಣು, ದಿನಸಿ, ಟ್ಯಾಕ್ಸಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ, ಸೇವೆಗಳ ಬೆಲೆ ಕೂಡ ಹೆಚ್ಚಾಗುತ್ತವೆ ಎಂದು ಸ್ವಯಂಘೋಷಿತ ಆರ್ಥಿಕ ತಜ್ಞರಾದ ಸಿದ್ದರಾಮಯ್ಯನವರಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಾರಿಗೆ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲದೆ, ಇತ್ತೀಚೆಗಷ್ಟೆ ಬಸ್ ಟಿಕೆಟ್ ದರ ಏರಿಕೆ ಮಾಡಿತ್ತು. ಈಗ ಡೀಸೆಲ್ ಬೆಲೆ ಏರಿಕೆ ಆಗಿದೆ ಎನ್ನುವ ನೆಪವೊಡ್ಡಿ, ಮತ್ತೊಮ್ಮೆ ಬಸ್ ಟಿಕೆಟ್ ದರ ಏರಿಕೆ ಮಾಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಇನ್ನು ಯಾವ ಯಾವ ವಸ್ತುಗಳ ಮೇಲೆ ತೆರಿಗೆ ಹಾಕಬೇಕು? ಯಾವ ಯಾವ ವಸ್ತುಗಳ ಬೆಲೆ ಏರಿಕೆ ಮಾಡಬೇಕು? ಎಂದು ಹೊಂಚು ಹಾಕಿದ್ದೀರಿ ಸಿದ್ದರಾಮಯ್ಯನವರೇ? ಬಡವರು, ಮಧ್ಯಮ ವರ್ಗದ ರಕ್ತ ಹೀರುತ್ತಿರುವ ರಕ್ತಪಿಪಾಸು ಕಾಂಗ್ರೆಸ್ ಸರ್ಕಾರಕ್ಕೆ ಜನರ ಶಾಪ ತಟ್ಟದೇ ಇರದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ದಿನವೂ ಜನರ ಸುಲಿಗೆ: ಹೆಚ್‌ಡಿಕೆ
ಡೀಸೆಲ್ ದರ ಏರಿಕೆ ಬಗ್ಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಖಂಡನೆ ವ್ಯಕ್ತಪಡಿಸಿದ್ದಾರೆ. ಡೀಸೆಲ್ ದರ ಲೀಟರಿಗೆ ₹2 ಏರಿಕೆಯಾಗಿದೆ. ಜನಪೀಡಕ ದರ ಬೀಜಾಸುರ ಸರಕಾರದಿಂದ ರಾಜ್ಯದ ಜನತೆಗೆ ಇನ್ನೊಂದು ಶಾಕ್ ನೀಡಿದೆ. ಕಳೆದ ಹತ್ತು ತಿಂಗಳಲ್ಲಿ ಡಿಸೇಲ್ ಪ್ರತಿ ಲೀಟರಿಗೆ ₹5 ಏರಿಕೆ ಭಾಗ್ಯ ಕೊಟ್ಟಿದೆ ರಾಜ್ಯ ಕಾಂಗ್ರೆಸ್ ಸರಕಾರ ಎಂದು ದೂರಿದ್ದಾರೆ.
ಯುಗಾದಿ ಹೊಸ ತೊಡಕು ದಿನವೇ ಹೊಸ ಹೊಸ ದರ ವಿಧಿಸಿ ದರ ಬೀಜಾಸುರ ಸರಕಾರ ವಿಜೃಂಭಿಸಿದೆ. ಬೆಳಗ್ಗೆ ನಿದ್ರೆಯಿಂದ ಜನರೆದ್ದರೆ ಸುಲಿಗೆ ಬರೆ ಹಾಕುತ್ತಿದೆ ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ. ಕೈ ಕಂಪನಿ ಸರಕಾರಕ್ಕೆ ಕಣ್ಣಿಲ್ಲ, ಕರುಣೆಯೂ ಇಲ್ಲ. ಕಿತ್ತು ತಿನ್ನುವ ವಿಕೃತಿಯನ್ನು ಹತ್ತಿಕ್ಕಲು ಜನರು ಬೀದಿಗಿಳಿದು ದಂಗೆ ಎಳದೇ ವಿಧಿ ಇಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.












Click it and Unblock the Notifications