ಇಬ್ಬರು ಜೆಡಿಎಸ್ ಕ್ಯಾಬಿನೆಟ್ ಸಚಿವರ ತಲೆದಂಡ ಬಯಸಿದ್ದರೇ ಸಿದ್ದರಾಮಯ್ಯ?
Recommended Video
ಮೈಸೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತಹಾಕಿದ್ದಾರೆ ಎನ್ನುವ ಸಮ್ಮಿಶ್ರ ಸರಕಾರದ ಸಚಿವರ ಹೇಳಿಕೆ, ಮಾಜಿ ಸಿಎಂ ಸಿದ್ದರಾಮಯ್ಯನವರ ತೀವ್ರ ಬೇಸರಕ್ಕೆ ಕಾರಣವಾಗಿದೆಯಾ? ಮೈಸೂರಿನ ಚುನಾವಣಾ ಫಲಿತಾಂಶ, ಕಾಂಗ್ರೆಸ್ ವಿರುದ್ದವಾಗಿ ಬಂದರೆ, ಸಿದ್ದರಾಮಯ್ಯ ತಿರುಗಿಬೀಳುತ್ತಾರಾ? ಈ ರೀತಿಯ ಪ್ರಶ್ನೆಗಳು ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ಓಡಾಡುತ್ತಿದೆ.
ಒಂದು ಕಡೆ ಬಿಜೆಪಿ ಎರಡಂಕಿ ದಾಟುವುದಿಲ್ಲ ಎಂದು ಖಚಿತ ವಿಶ್ವಾಸದ ಮಾತುಗಳನ್ನಾಡುತ್ತಿರುವ ಕಾಂಗ್ರೆಸ್ಸಿನವರು, ಮೇ 23ರಂದು ರಾಜ್ಯ ರಾಜಕಾರಣದಲ್ಲಿ ಸ್ಥಿತ್ಯಂತರ ನಡೆಯಬಹುದು ಎನ್ನುವ ಹೇಳಿಕೆಯನ್ನೂ ನೀಡುತ್ತಿದ್ದಾರೆ.
ಮೈತ್ರಿಧರ್ಮ ಪಾಲನೆಯನುಸಾರ ಏನು ಕಾಂಗ್ರೆಸ್ ಮತ್ತು ಜೆಡಿಎಸ್ ಸೀಟು ಹಂಚಿಕೆ ಮಾಡಿಕೊಂಡಿತ್ತೋ, ಇದರಿಂದ ಎರಡು ಪಕ್ಷಗಳಿಗೆ ಲಾಭವಾಗಿದೆಯಾ, ಇಲ್ಲವೋ ಎನ್ನುವುದನ್ನು ಮತದಾರ ಈಗಾಗಲೇ ನಿರ್ಧರಿಸಿ ಬಿಟ್ಟಿದ್ದಾನೆ.
ಮೈಸೂರಿನ ವಿದ್ಯಮಾನದ ವಿಚಾರದಲ್ಲಿ, ಸಿದ್ದರಾಮಯ್ಯ, ಇಬ್ಬರು ಜೆಡಿಎಸ್ ಸಚಿವರ ತಲೆದಂಡಕ್ಕೆ ಆಗ್ರಹಿಸಿದ್ದರು ಎನ್ನುವ ಮಾತು ಕೇಳಿಬರುತ್ತಿದೆ. ಬೆಂಕಿಯಿಲ್ಲದೇ ಹೊಗೆಯಾಡುತ್ತಾ ಎನ್ನುವಂತೆ, ಇದೆಲ್ಲಾ ಸತ್ಯಕ್ಕೆ ದೂರವಾದುದು ಎಂದು ಸಚಿವರೂ ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಮೈತ್ರಿಯಿಂದ ಲಾಭಕ್ಕಿಂತ ಹೆಚ್ಚಾಗಿ ಎರಡೂ ಪಕ್ಷಗಳು ಮುಜುಗರವನ್ನು ಎದುರಿಸಿದ್ದೇ ಜಾಸ್ತಿ
ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರ ವಿಚಾರದಲ್ಲಿ ಹೇಳುವುದಾದರೆ, ಜೆಡಿಎಸ್ - ಕಾಂಗ್ರೆಸ್ ಮೈತ್ರಿಯಿಂದ ಲಾಭಕ್ಕಿಂತ ಹೆಚ್ಚಾಗಿ ಎರಡೂ ಪಕ್ಷಗಳು ಮುಜುಗರವನ್ನು ಎದುರಿಸಿದ್ದೇ ಜಾಸ್ತಿ. ಅದರಲ್ಲೂ ಪ್ರಮುಖವಾಗಿ, ಮಂಡ್ಯ, ಮೈಸೂರು, ಹಾಸನ, ತುಮಕೂರು ಮತ್ತು ಕೋಲಾರದಲ್ಲಿ ಎರಡು ಪಕ್ಷಗಳ ನಡುವೆ ಹೊಂದಾಣಿಕೆಯ ಕೊರತೆ ಎರಡೂ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿತ್ತು.

ಭಾರೀ ಸಂಚಲನವನ್ನು ಮೂಡಿಸಿದ ಜಿ ಟಿ ದೇವೇಗೌಡ ಹೇಳಿಕೆ
ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ಕೆಲವರು ಬಿಜೆಪಿಗೆ ಮತಹಾಕಿದ್ದಾರೆ ಎನ್ನುವ ಹೇಳಿಕೆಯನ್ನು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಹೇಳಿದ್ದರು. ಮೈಸೂರಿನಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ನಾವು ಜಬಾಬ್ದಾರರಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ, ಮೈಸೂರಿನಲ್ಲಿ ಎಚ್ ವಿಶ್ವನಾಥ್ ಸೋಲು ಅನುಭವಿಸಿದ್ದರು, ಆಗ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರಾ ಎನ್ನುವ ಜಿಟಿಡಿ ಹೇಳಿಕೆ ಭಾರೀ ಸಂಚಲನವನ್ನು ಮೂಡಿಸಿತ್ತು.
|
ಕೆಲವು ಭಾಗದಲ್ಲಿ ಜೆಡಿಎಸ್ ಮತ ಬಿಜೆಪಿಗೆ ಹೋಗಿದೆ ಎಂದು ಒಪ್ಪಿಕೊಂಡಿದ್ದ ಸಿದ್ದರಾಮಯ್ಯ
ಜಿ.ಟಿ.ದೇವೇಗೌಡರ ಹೇಳಿಕೆ ನನ್ನಲ್ಲಿಯೂ ಅಚ್ಚರಿ ಮೂಡಿಸಿದೆ. ದೇವೇಗೌಡರ ಮಾತುಗಳು ಸುಳ್ಳಾಗಲಿ ಎಂದು ಆಶಿಸುತ್ತೇನೆ, ಮೇ 23ರ ಫಲಿತಾಂಶದಲ್ಲಿ ಈ ಹೇಳಿಕೆಯ ಸತ್ಯಾಸತ್ಯತೆ ಗೊತ್ತಾಗಲಿದೆ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲ ಇಲ್ಲ. ಕಾದು ನೋಡೋಣ ಎಂದು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಹೌದು, ಕೆಲವು ಭಾಗದಲ್ಲಿ ಜೆಡಿಎಸ್ ಮತ ಬಿಜೆಪಿಗೆ ಹೋಗಿದೆ ಎಂದು ಒಪ್ಪಿಕೊಳ್ಳುವ ಹೇಳಿಕೆಯನ್ನು ನೀಡಿದ್ದರು.

ಜಿಟಿಡಿ ಮತ್ತು ಸಾ.ರಾ.ಮಹೇಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು
ಇದರ ಬೆನ್ನಲ್ಲೇ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಜೆಡಿಎಸ್ ಮತ ಬಿಜೆಪಿಗೆ ಹೋಗಿದ್ದು ಹೌದು ಎಂದು ಒಪ್ಪಿಕೊಂಡಿದ್ದರು. ಚಾಮುಂಡೇಶ್ವರಿ ಅಸೆಂಬ್ಲಿ ವ್ಯಾಪ್ತಿಯ ಉದ್ದೂರಿನಲ್ಲಿ ಜೆಡಿಎಸ್ ಬೆಂಬಲಿಗರು ಬಿಜೆಪಿಗೆ ಮತಹಾಕಿದ್ದಾರೆ. ಆದರೆ, ಜಿಟಿಡಿ ಮತ್ತು ನನ್ನನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿಲ್ಲ ಎಂದು ಹೇಳಿದ್ದಾರೆ. ಇದು ಸಿದ್ದರಾಮಯ್ಯ ಬೇಸರಗೊಂಡಿರುವ ವಿಚಾರವನ್ನು ಸ್ಪಷ್ಟವಾಗಿ ಸಾರುತ್ತದೆ.

ಸಿದ್ದರಾಮಯ್ಯ ಪ್ರಸ್ತಾವನೆ ಸಲ್ಲಿಸಿದ್ದು ಹೌದಾಗಿದ್ದಲ್ಲಿ ಅದರಲ್ಲಿ ತಪ್ಪೇನು ಇಲ್ಲ
ಮಂಡ್ಯದಲ್ಲಿ ನಮ್ಮ ಮುಖಂಡರು ಸುಮಲತಾ ಮನೆಗೆ ಡಿನ್ನರ್ ಹೋಗಿದ್ದಕ್ಕೆ, ಹೈಕಮಾಂಡ್ ಲೆವೆಲಿಗೆ ಹೋಗಿದ್ದ ಕುಮಾರಸ್ವಾಮಿ, ಜಿ ಟಿ ದೇವೇಗೌಡ ಮತ್ತು ಸಾ.ರಾ.ಮಹೇಶ್ 'ರಾಜಕೀಯಕ್ಕೆ' ಏನು ಹೇಳುತ್ತಾರೆ. ಇಬ್ಬರನ್ನು ಸಚಿವಸ್ಥಾನದಿಂದ ಕೈಬಿಡಬೇಕು ಎಂದು ಸಿದ್ದರಾಮಯ್ಯ ಪ್ರಸ್ತಾವನೆ ಸಲ್ಲಿಸಿದ್ದು ಹೌದಾಗಿದ್ದಲ್ಲಿ ಅದರಲ್ಲಿ ತಪ್ಪೇನು ಇಲ್ಲ ಎನ್ನುವ ನಿಲುವನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೊಂದಿದ್ದಾರೆ ಎನ್ನುವ ಮಾತಿದೆ. ಓವರ್ ಟು ಮೇ 23...












Click it and Unblock the Notifications