ವಿಧಾನಸೌಧ ವಜ್ರಮಹೋತ್ಸವ, ಶಾಸಕರಿಗೆ ಚಿನ್ನದ ಬಿಸ್ಕತ್ ಭಾಗ್ಯ?
ಬೆಂಗಳೂರು, ಅಕ್ಟೋಬರ್ 15 : ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಖರ್ಚುವೆಚ್ಚಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ವಜ್ರಮಹೋತ್ಸವದ ಸವಿನೆನಪಿಗಾಗಿ ಶಾಸಕರಿಗೆ ಚಿನ್ನದ ಬಿಸ್ಕತ್ ನೀಡಲು ಸಿದ್ಧತೆ ನಡೆಸಲಾಗಿದೆ.
ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 25ರಂದು ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.
ವಜ್ರ ಮಹೋತ್ಸವದ ಸವಿನೆನಪಿಗಾಗಿ ಶಾಸಕರಿಗೆ ತಲಾ 50 ಸಾವಿರ ರೂ. ಮೌಲ್ಯದ ಚಿನ್ನದ ಬಿಸ್ಕತ್, ವಿಧಾನಸೌಧದ ಸಿಬ್ಬಂದಿಗೆ ತಲಾ 5 ಸಾವಿರ ರೂ. ಮೌಲ್ಯದ ಬೆಳ್ಳಿತಟ್ಟೆ ಉಡುಗೊರೆಯಾಗಿ ನೀಡಲು ಉದ್ದೇಶಿಸಲಾಗಿದೆ. ಈ ಪ್ರಸ್ತಾವನೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಶಾಸಕರಿಗೆ ಚಿನ್ನದ ಬಿಸ್ಕತ್ ಉಡುಗೊರೆ ನೀಡುವ ಪ್ರಸ್ತಾವನೆಯನ್ನು ಸರ್ಕಾರದಿಂದ ಮುಂದಿಟ್ಟಿದ್ದೇವೆ. ಅದು ಬೇಡ ಅಂದರೆ ಕೈಬಿಡುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ...

300 ಸದಸ್ಯರಿಗೆ ಚಿನ್ನದ ಬಿಸ್ಕತ್
ವಿಧಾನಮಂಡಲದ ಉಭಯ ಸದನಗಳ 300 ಸದಸ್ಯರಿಗೆ ವಿಧಾನಸೌಧದ ಲಾಂಛನ ಒಳಗೊಂಡಿರುವ ಚಿನ್ನದ ಬಿಸ್ಕತ್ ಗಳನ್ನು ನೀಡಲು ಚಿಂತಿಸಲಾಗಿದೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ರಾಜಭವನ ಮತ್ತು ವಿಶ್ವೇಶ್ವರಯ್ಯ ಗೋಪುರಗಳಲ್ಲಿ ಕೆಲಸ ಮಾಡುವ ಸುಮಾರು 5 ಸಾವಿರ ಸಿಬ್ಬಂದಿಗೆ ಬೆಳ್ಳಿ ತಟ್ಟೆಗಳನ್ನು ನೀಡಲಾಗುತ್ತಿದೆ.

27 ಕೋಟಿ ರೂ.ಗಳ ಖರ್ಚು?
ವಿಧಾನಸೌಧದ ವಜ್ರ ಮಹೋತ್ಸವ ಸಮಾರಂಭದ ಎರಡು ದಿನಗಳ ಕಾರ್ಯಕ್ರಮಕ್ಕೆ ಸುಮಾರು 27 ಕೋಟಿ ರೂ. ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಈ ಕಾರ್ಯಕ್ರಮದ ಖರ್ಚಿನ ಬಗ್ಗೆಯೇ ಈಗ ವಿವಾದ ಎದ್ದಿದೆ. ಅಧಿವೇಶನಕ್ಕೆ 10 ದಿನಗಳು ಮಾತ್ರ ಬಾಕಿ ಇದ್ದು, ವೆಚ್ಚಕ್ಕೆ ಇನ್ನು ಅನುಮತಿ ಸಿಕ್ಕಿಲ್ಲ.

ಕೆ.ಬಿ.ಕೋಳಿವಾಡ ಪ್ರತಿಕ್ರಿಯೆ
ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು, 'ಜನರು ಜನ ಬಟ್ಟೆ ಹಾಕ್ಕೊಂಡ್ರು ಟೀಕಿಸ್ತಾರೆ, ಹಾಕಿಕೊಳ್ದೆ ಇದ್ರೂ ಟೀಕಿಸ್ತಾರೆ. ಈ ಜನ ಮಹಾತ್ಮಾಗಾಂಧಿ ಅವರನ್ನೇ ಬಿಡಲಿಲ್ಲ. ಇನ್ನು ನಮ್ಮನ್ನು ಬಿಡುವರೇ?' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಒಪ್ಪಿಗೆ ಬಿಡುವುದು ಅವರಿಗೆ ಸೇರಿದ್ದು
'ಸಮಾರಂಭಕ್ಕಾಗಿ 27 ಕೋಟಿ ರೂ. ಖರ್ಚು ಮಾಡುವ ಬಗ್ಗೆ ಪ್ರಸ್ತಾವನೆ ಕಳಿಸಿದ್ದೇವೆ. ಅದನ್ನು ಒಪ್ಪುವುದು ಬಿಡುವುದು ಮುಖ್ಯಮಂತ್ರಿಗೆ ಬಿಟ್ಟಿದ್ದು. 27 ಕೋಟಿ ಬೇಡ 15 ಲಕ್ಷದಲ್ಲಿ ಊಟ ಹಾಕಿ ಕಳುಹಿಸಿ ಎಂದರೂ ಪರವಾಗಿಲ್ಲ, ಹಾಗೆಯೇ ಮಾಡ್ತೀವಿ' ಎಂದು ಕೋಳಿವಾಡ ಹೇಳಿದ್ದಾರೆ.

ಯಡಿಯೂರಪ್ಪ ಹೇಳುವುದೇನು?
'ಯಾರು, ಯಾವ ಕಾರಣಕ್ಕೆ ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಹೇಳಬೇಕು. ಲೆಕ್ಕ ಕೇಳಲು ನೀವ್ಯಾರು ಎಂಬ ಧೋರಣೆ ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications