Dhruva Narayan: ನಂಜನಗೂಡು ಟಿಕೆಟ್ ಟೆನ್ಸನ್ ಮುಳುವಾಯಿತೇ?
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ ಅವರು ಮೈಸೂರಿನಲ್ಲಿ ನಿಧನರಾಗಿದ್ದಾರೆ. 61ವರ್ಷ ವಯಸ್ಸಿನ ಧ್ರುವ ನಾರಾಯಣ ಅವರ ಹಠಾತ್ ನಿಧನ ಇಡೀ ರಾಜ್ಯಕ್ಕೆ ಶಾಕ್ ಕೊಡುವಂತಹ ಸುದ್ದಿಯಾಗಿದೆ. ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ಧ್ರುವ ನಾರಾಯಣ ಅವರ ಸಾವಿಗೆ ನಾಯಕರು ಕಂಬನಿ ಮಿಡಿಯುತ್ತಿದ್ದಾರೆ.
ರಾಜ್ಯದ ದಲಿತ ಸಮುದಾಯದ ಮಂಚೂಣಿ ನಾಯಕರಲ್ಲಿ ಒಬ್ಬರಾಗಿರುವ ಧ್ರುವ ನಾರಾಯಣ 1983ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿಶೇಷ ಪ್ರಯತ್ನದಿಂದ ಇವರು ಕಾರ್ಯಾಧ್ಯಕ್ಷ ಹುದ್ದೆಗೆ ಏರಿದ್ದರು. ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ವಿಧಿಯಾಟ ಇನ್ನೊಂದಾಗಿದೆ.

2008ರಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 11,800 ಮತಗಳ ಅಂತರದಿಂದ ಗೆದ್ದಿದ್ದ ಧ್ರುವ ನಾರಾಯಣ, ಇದಾದ ಬಳಿಕ ಚಾಮರಾಜನಗರ ಕ್ಷೇತ್ರದಿಂದ 4,020 ಮತಗಳ ಅಂತರದಿಂದ 15ನೇ ಲೋಕಸಭೆಗೆ, 2014ರಲ್ಲಿ ಮತ್ತೊಮ್ಮೆ 1,41,182 ಮತಗಳ ಅಂತರದಿಂದ ಗೆದ್ದು 16ನೇ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದರು.
2019 ರಲ್ಲಿ ಧ್ರುವನಾರಾಯಣ ಅವರು 17ನೇ ಲೋಕಸಭೆ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ವಿರುದ್ಧ 12,716 ಮತಗಳ ಅಂತರದಿಂದ ಸೋಲುಂಡಿದ್ದ ಧ್ರುವ ನಾರಾಯಣ, ಮುಂಬರುವ ವಿಧಾನಸಭಾ ಚುನಾವಣೆಗೆ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕ್ಷೇತ್ರದಲ್ಲಿ ಟಿಕೆಟಿಗಾಗಿ ತೀವ್ರ ಪೈಪೋಟಿ ಇದ್ದದ್ದು ಅವರಿಗೆ ತುಂಬಾ ಟೆನ್ಸನ್ ತಂದೊಡ್ಡಿತ್ತು ಎನ್ನುವುದು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಕೆಪಿಸಿಸಿಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಹತ್ತಿರವಾಗಿದ್ದ ಧ್ರುವ ನಾರಾಯಣ ಅವರು ನಂಜನಗೂಡು ಟಿಕೆಟಿಗಾಗಿ ಡಿಕೆಶಿಯವರನ್ನು ಬಹಳ ನಂಬಿಕೊಂಡಿದ್ದರು. ಪಕ್ಷದ ಉತ್ತಮ ಸಂಘಟಕರಾಗಿದ್ದ ಇವರು ಡಿಕೆಶಿಯವರ ಸೂಚನೆಯನ್ನು ಚಾಚೂತಪ್ಪದೇ ಪಾಲಿಸುತ್ತಿದ್ದರು. ಆದರೆ, ನಂಜನಗೂಡಿನಲ್ಲಿ ಟಿಕೆಟಿಗಾಗಿ ತ್ರಿಕೋಣ ಸ್ಪರ್ಧೆ ಇದ್ದದ್ದು ಇವರಿಗೆ ಒತ್ತಡವನ್ನು ತಂದಿತ್ತು.

ನಂಜನಗೂಡು ಕ್ಷೇತ್ರದ ಟಿಕೆಟಿಗಾಗಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಡಾ.ಎಚ್.ಸಿ.ಮಹದೇವಪ್ಪ ಕೂಡಾ ಲಾಬಿ ನಡೆಸಿದ್ದರು. ಧ್ರುವ ನಾರಾಯಣ ಮತ್ತು ಮಹಾದೇವಪ್ಪ ಇಬ್ಬರೂ ಹೈಕಮಾಂಡ್ ವಲಯದಲ್ಲಿ ವರ್ಚಸ್ಸನ್ನು ಹೊಂದಿದ್ದರಿಂದ, ಟಿಕೆಟಿಗಾಗಿ ಇಬ್ಬರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ತಮಗೆ ನಂಜನಗೂಡಿನಿಂದ ತಮ್ಮ ಮಗ ಸುನೀಲ್ ಬೋಸಿಗೆ ತಿ.ನರಸೀಪುರದಿಂದ ಟಿಕೆಟ್ ನೀಡಬೇಕೆನ್ನುವುದು ಡಾ.ಮಹದೇವಪ್ಪನವರ ಒತ್ತಾಯವಾಗಿತ್ತು.
ಧ್ರುವ ನಾರಾಯಣ ಮತ್ತು ಮಹಾದೇವಪ್ಪ ಇಬ್ಬರ ಜೊತೆಗೆ ಕಳಲೆ ಕೇಶವಮೂರ್ತಿಯವರೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳಲೆಯವರು ಕೂಡಾ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಹಾಗಾಗಿ, ನಂಜನಗೂಡು ಟಿಕೆಟಿಗೆ ಭಾರೀ ಪೈಪೋಟಿಯಿತ್ತು.
ಕ್ಷೇತ್ರದಿಂದ ಟಿಕೆಟ್ ಸಿಗುತ್ತೋ ಇಲ್ಲವೋ ಎಂದು ಅವರಿಗೆ ಬಹಳ ಟೆನ್ಸನ್ ಆಗಿತ್ತು. ಏನೇ ಆದರೂ ಡಿ.ಕೆ.ಶಿವಕುಮಾರ್ ಅವರು ನನ್ನ ಕೈಬಿಡುವುದಿಲ್ಲ ಎನ್ನುವ ನಂಬಿಕೆಯಿದೆ. ಅವರು ಸಂಪೂರ್ಣವಾಗಿ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಮುಂದಾಗಿದ್ದರು ಎಂದು ಧ್ರುವ ನಾರಾಯಣ ಅವರ ಆಪ್ತರೂ ಆಗಿರುವ ಜಿ.ಟಿ.ದೇವೇಗೌಡ ತೀವ್ರ ನೋವು ವ್ಯಕ್ತ ಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಕೆಪಿಸಿಸಿ ಸ್ಕ್ರೀನಿಂಗ್ ಕಮಿಟಿಯ ಸಭೆಯಲ್ಲಿ ನಂಜನಗೂಡು ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಪಕ್ಷ ಬಹುತೇಕ ಅಂತಿಮ ನಿಲುವನ್ನು ತಾಳಿತ್ತು ಎಂದು ಹೇಳಲಾಗುತ್ತಿದೆ.












Click it and Unblock the Notifications