ಸರ್ಕಾರಿ ಉದ್ಯೋಗ ನೇಮಕಾತಿ ವಿಳಂಬ ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಮತ್ತೆ ಬೃಹತ್ ಪ್ರತಿಭಟನೆ
ಧಾರವಾಡ: ರಾಜ್ಯದಲ್ಲಿ ಖಾಲಿ ಇರುವ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಹಾಗೂ ಸ್ಥಗಿತಗೊಂಡಿರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ - AKSA) ಹಾಗೂ ಬಿಜೆಪಿ ನೇತೃತ್ವದಲ್ಲಿ ಧಾರವಾಡದ ಶ್ರೀನಗರ ವೃತ್ತದಿಂದ ಈ ಬೃಹತ್ ಪ್ರತಿಭಟನಾ ರ‍್ಯಾಲಿ ಆರಂಭವಾಗಿದೆ.
ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ. ಪ್ರಸ್ತುತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 2.85 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. "ಹಣಕಾಸಿನ ಮುಗ್ಗಟ್ಟಿನಿಂದ ದಿವಾಳಿಯಾಗಿರುವ ರಾಜ್ಯ ಸರ್ಕಾರ ಹೊಸ ನೇಮಕಾತಿಗಳಿಗೆ ಹಣಕಾಸು ಒದಗಿಸುವ ಸ್ಥಿತಿಯಲ್ಲಿಲ್ಲ. ಈ ಕಾರಣಕ್ಕಾಗಿಯೇ ಸರ್ಕಾರ ನೇಮಕಾತಿ ಪ್ರಕ್ರಿಯೆಗಳನ್ನು ವಿಳಂಬ ಮಾಡುತ್ತಿದೆ. ಯುವಕರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ" ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕದ ಶೈಕ್ಷಣಿಕ ಕಾಶಿ ಎಂದೇ ಹೆಸರಾಗಿರುವ ಧಾರವಾಡದಲ್ಲಿ ಸಾವಿರಾರು ಯುವಕ-ಯುವತಿಯರು ಹಳ್ಳಿಗಳಿಂದ ಬಂದು ಪಿಜಿ, ಹಾಸ್ಟೆಲ್‌ಗಳಲ್ಲಿ ಇದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Exams) ಓದುತ್ತಿದ್ದಾರೆ. ಆದರೆ, ವರ್ಷಗಳು ಕಳೆದರೂ ಕೆಪಿಎಸ್‌ಸಿ (KPSC), ಪೊಲೀಸ್ ಇಲಾಖೆ ಸೇರಿದಂತೆ ಯಾವುದೇ ಪ್ರಮುಖ ಇಲಾಖೆಗಳ ನೇಮಕಾತಿ ಅಧಿಸೂಚನೆ ಹೊರಬೀಳದಿರುವುದು ಅವರ ಆರ್ಥಿಕ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ.
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಗಳು ಮತ್ತು ಪರೀಕ್ಷೆಗಳ ವಿಳಂಬದಿಂದ ಕಂಗೆಟ್ಟಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಶ್ರೀನಗರ ವೃತ್ತ, ಸಪ್ತಾಪುರ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಖುದ್ದು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಪೊಲೀಸ್ ಇಲಾಖೆಯ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಫೆಬ್ರವರಿ 24ರಂದು ಪ್ರತಿಭಟನೆ ನಡೆಸಲು ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘವು (ಅಕ್ಸಾ) ಪೊಲೀಸ್ ಇಲಾಖೆಯಿಂದ ಅನುಮತಿ ಕೇಳಿತ್ತು, ಆದರೆ ಪೊಲೀಸರು ಪರವಾನಗಿ ನೀಡಲು ಹಿಂದೇಟು ಹಾಕಿದ್ದರು. ಆದರೆ, ಇದೇ ಉದ್ದೇಶಕ್ಕಾಗಿ ಬಿಜೆಪಿ ಮುಖಂಡರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮಾತ್ರ ಅನುಮತಿ ನೀಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಶ್ರೀನಗರ ವೃತ್ತದ ಬಳಿ ಯುವಕರನ್ನು ತಡೆದು ನಿಲ್ಲಿಸಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರ ಫೋಟೋಗಳನ್ನು ಹಿಡಿದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಕೂಡಲೇ ಬಾಕಿ ಇರುವ ನೇಮಕಾತಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಬೇಕು, ಹೊಸ ಅಧಿಸೂಚನೆಗಳನ್ನು ಹೊರಡಿಸಬೇಕು ಹಾಗೂ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಸರ್ಕಾರ ಸ್ಪಷ್ಟ ಭರವಸೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಉಗ್ರರೂಪಕ್ಕೆ ಕೊಂಡೊಯ್ಯುವುದಾಗಿ ಹಾಗೂ ರಾಜ್ಯಾದ್ಯಂತ ವಿಸ್ತರಿಸುವುದಾಗಿ ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಕೆ ನೀಡಿವೆ.












Click it and Unblock the Notifications