ಧರ್ಮಸ್ಥಳದ ಪವಿತ್ರ ಪರಂಪರೆಗೆ ಧಕ್ಕೆ ತರಲು ಕಾರ್ಯನಿರತವಾದ ಸುಳ್ಳಿನ ಜಾಲ
ಶತಮಾನಗಳಿಂದಲೂ ಶ್ರೀಕ್ಷೇತ್ರ ಧರ್ಮಸ್ಥಳವು ನಂಬಿಕೆ, ದಾನ ಮತ್ತು ಸೇವೆಯ ಸಂಕೇತವಾಗಿ ನಿಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಪಾವಿತ್ರ್ಯವು ದಾಳಿಗೆ ಒಳಗಾಗುತ್ತಿದೆ. ಇದು ನಡೆದಿರುವುದು ಸಾಬೀತಾಗಿರುವ ತಪ್ಪುಗಳಿಂದಲ್ಲ, ಬದಲಾಗಿ ತಪ್ಪು ಮಾಹಿತಿಯ ಜಾಲದಿಂದ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಅನನ್ಯಾ ಭಟ್ ಪ್ರಕರಣ.
2003ರಲ್ಲಿ ಧರ್ಮಸ್ಥಳದಲ್ಲಿ ಕಸ್ತೂರ ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆಯಾದಳು. ಆಕೆಗೆ ಸಂಬಂಧಿಸಿದ ಪ್ರಕರಣವನ್ನು ತಿರುಚುವ ವ್ಯಾಪಕ ಯತ್ನಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಈ ವಿದ್ಯಾರ್ಥಿನಿಯ ನಾಪತ್ತೆ ಹಿಂದೆ ಪ್ರಬಲ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಲಾಗಿದೆ.

1995ರಿಂದ 2014ರ ವರೆಗೆ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಪೌರ ಕಾರ್ಮಿಕನೊಬ್ಬನ ಆರೋಪಗಳಿಂದ ಈ ಪ್ರಕರಣವು ಮತ್ತೆ ಬೆಳಕಿಗೆ ಬರುವಂತೆ ಮಾಡಲಾಗಿದೆ. ಅಪರಾಧ ಚಟುವಟಿಗಳಲ್ಲಿ ಸಾವಿಗೀಡಾದ ಶವಗಳನ್ನು ವಿಲೇವಾರಿ ಮಾಡಲು ನನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಕಥೆಗಳನ್ನು ಆ ಪೌರ ಕಾರ್ಮಿಕ ಹೇಳಿಕೊಂಡಿದ್ದಾನೆ. ಸಮಾಧಿ ಸ್ಥಳಗಳೆಂದು ಹೇಳಿಕೊಳ್ಳಲಾಗುತ್ತಿರುವ ಜಾಗಗಳಿಗೆ ಪೊಲೀಸರು ಭೇಟಿ ನೀಡಿದ್ದಾರೆ. ಆ ನಂತರ ಕರ್ನಾಟಕ ಸರ್ಕಾರವು ಎಸ್‌ಐಟಿ ತನಿಖೆಗೆ ಆದೇಶವನ್ನು ಮಾಡಿದೆ.
ಇದಾದ ನಂತರವೇ ಅನನ್ಯಾಳ ತಾಯಿ ಎಂದು ಹೇಳಿಕೊತ್ತಿರುವ ಸುಜಾತಾ ಭಟ್ ಮಾಧ್ಯಮಗಳ ಮುಂದೆ ಬಂದರು. ದಶಕಗಳ ಮೌನದ ನಂತರ ಅವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದರು. ಅವರು ತಮ್ಮ ಮಗಳ ನಾಪತ್ತೆ ವಿಚಾರವನ್ನು ಮುಖ್ಯವಾಹಿನಿಯ ಮುಂದೆ ಇಡಲು ಪ್ರಯತ್ನಿಸಿದರು. ಆದರೆ ಸತ್ಯಗಳು ಬೇರೆಯದೇ ಕಥೆಯನ್ನು ಹೇಳುತ್ತವೆ.

ಅನನ್ಯಾ ಭಟ್ ಎಂಬ ಹೆಸರಿನ ಯಾವುದೇ ವಿದ್ಯಾರ್ಥಿನಿಯ ಹೆಸರು ತಮ್ಮ ದಾಖಲೆಯಲ್ಲೇ ಇಲ್ಲವೆಂದು ಕಸ್ತೂರ ಬಾ ವೈದ್ಯಕೀಯ ಕಾಲೇಜು ದೃಢಪಡಿಸಿದೆ. ಇದಕ್ಕೆ ಸಂಬಂಧಿಸಿ ಯಾವುದೇ ವಿಶ್ವಾಸಾರ್ಹ ಸಾಕ್ಷಿಗಳೂ ಇಲ್ಲವೆಂಬುದು ಕಂಡುಬಂದಿದೆ. 2003ರ ಪೊಲೀಸ್ ಅಥವಾ ಮಾಧ್ಯಮ ದಾಖಲೆಗಳಲ್ಲಿ ಪ್ರಕರಣದ ಯಾವುದೇ ಕುರುಹು ಸಹ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಈ ವಿಚಾರವು ಮಹೇಶ್ ಶೆಟ್ಟಿ ತಿಮರೋಡಿ ಅವರ ಕಾರಣದಿಂದಾಗಿ ಹೆಚ್ಚು ಮುಂಚೂಣಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಅವರು ಧರ್ಮಸ್ಥಳದ ಆಡಳಿತದೊಂದಿಗಿನ ವಿವಾದಗಳ ಇತಿಹಾಸವನ್ನು ಹೊಂದಿರುವ ವ್ಯಕ್ತಿ. ಅವರ ಆಕ್ರಮಣಕಾರಿ ಅಭಿಯಾನವು ಅಪನಂಬಿಕೆ, ಗೊಂದಲ ಮತ್ತು ಕೋಮು ಉದ್ವಿಗ್ನತೆಯನ್ನು ಬಿತ್ತುತ್ತಲೇ ಬಂದಿದೆ. ದುಷ್ಕೃತ್ಯದ ಇತಿಹಾಸ ಹೊಂದಿರುವ ಅತೃಪ್ತ ಮಾಜಿ ಗುತ್ತಿಗೆದಾರನ ಆರೋಪಗಳು ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ಆದರೆ ಡಿಜಿಟಲ್ ಯುಗದಲ್ಲಿ ಅವರ ಸುಳ್ಳಿನ ಆರೋಪಗಳು ಸತ್ಯ-ಪರಿಶೀಲನೆಗಳಿಗಿಂತ ವೇಗವಾಗಿ ಹರಡುತ್ತಿರುವುದು ಮಾತ್ರ ದುರಂತವೆಂದೇ ಹೇಳಬಹುದು.
ಕಟ್ಟುಕಥೆಗಳಿಂದ ನಿರ್ಮಿಸಲ್ಪಟ್ಟ ಹೋರಾಟವು ಶತಮಾನಗಳ ಸಂಪ್ರದಾಯಕ್ಕೆ ಚ್ಯುತಿ ಬಳಿಯುತ್ತಿದೆ. ಸುಳ್ಳು ಹೇಳಿಕೆಗಳನ್ನು ಪುನರಾವರ್ತಿಸಿದಾಗ, ಹಂಚಿಕೊಂಡಾಗ ಮತ್ತು ರಾಜಕೀಯಗೊಳಿಸಿದಾಗ ಮಾತ್ರ ಇದು ಸಂಭವಿಸುತ್ತದೆ. ಶತಮಾನಗಳಷ್ಟು ಹಳೆಯದಾದ ಸಂಸ್ಥೆ ಸಾಕ್ಷ್ಯಗಳಿಂದಲ್ಲ, ಬದಲಾಗಿ ವೈರಲ್ ಆದ ವಿಚಾರಗಳಿಂದ ಅವಮಾನಕ್ಕೆ ಒಳಗಾಗುತ್ತಿರುವುದು ವಿಪರ್ಯಾಸವೇ ಸರಿ ಎಂದು ಹೇಳಬಹುದಾಗಿದೆ. ಧರ್ಮಸ್ಥಳದ ಪ್ರತಿಷ್ಠೆಯನ್ನು ಸತ್ಯದ ಬದಲಾಗಿ ಮೋಸ ಮತ್ತು ಸಾಮಾಜಿಕ ಮಾಧ್ಯಮದ ವೈರಲ್ ವಿಚಾರಗಳಿಂದ ಹಾಳು ಮಾಡಲಾಗುತ್ತಿದೆ. ನಕಲಿ ಮಾಹಿತಿ ಅಭಿಯಾನದಿಂದ ಕಳಂಕಿತಗೊಳಿಸಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಪ್ರತಿಯೊಂದು ಟ್ರೆಂಡಿಂಗ್ ವಿಚಾರವನ್ನು ಸತ್ಯವೆಂದು ಒಪ್ಪಿಕೊಳ್ಳುವ ಮೊದಲು, ನಾವೊಮ್ಮೆ ವಿಮರ್ಶಿಸಿಕೊಳ್ಳಬೇಕಿದೆ. ಇಂತಹ ಆಕ್ರೋಶದಿಂದ ಯಾರಿಗೆ ಲಾಭ? ಈ ವೈರಲ್ ವಿಚಾರಗಳಿಗೆ ಪುರಾವೆಗಳೇನು? ಎಂಬುದನ್ನು ನಾವು ಕೇಳಿಕೊಳ್ಳಬೇಕಿದೆ. ಧರ್ಮಸ್ಥಳ ಪ್ರಕರಣದಲ್ಲಿ ಉತ್ತರಗಳು ನ್ಯಾಯದ ಕಡೆಗೆ ಇಲ್ಲವೆಂದು ಸ್ಪಷ್ಟವಾಗುತ್ತಿದೆ. ಕರ್ನಾಟಕದ ಅತ್ಯಂತ ಗೌರವಾನ್ವಿತ ಸಂಸ್ಥೆಯೊಂದರ ಮೇಲಿನ ನಂಬಿಕೆಯನ್ನು ಕುಗ್ಗಿಸುವ ಉದ್ದೇಶಪೂರ್ವಕ ಪ್ರಯತ್ನಗಳ ಕುರಿತು ನಾವೆಲ್ಲಾ ಪರಾಮರ್ಶಿಸುವುದು ಈಗಿನ ಅನಿವಾರ್ಯವಾಗಿದೆ.












Click it and Unblock the Notifications