ಶ್ರೀ ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನಿಧ್ಯದ ಸೇವೆಗೆ ಒಂದು ವರ್ಷದ ಸಂಭ್ರಮ
ಧರ್ಮಸ್ಥಳ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ನೂತನ 'ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್' ಸೇವೆಯ ಒಂದು ವರ್ಷ ಪೂರೈಸಿದೆ. ಅಪಾರ ಭಕ್ತಗಣಕ್ಕೆ ಕಳೆದೊಂದು ವರ್ಷದಿಂದ ಸೇವೆ ನೀಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಕ್ತರ ಅನುಕೂಲಕ್ಕಾಗಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಅತ್ಯಾಧುನಿಕ ತಂತ್ರಜ್ಞಾದೊಂದಿಗೆ ನಿರ್ಮಿಸಲ್ಪಟ್ಟಿದೆ.
ಕಳೆದ ವರ್ಷ 2025ರ ಜನವರಿ 7ರಂದು ಈ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಉದ್ಘಾಟನೆಗೊಂಡಿತ್ತು. ಭಾರತದ ಅಂದಿನ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಕಟ್ಟಡ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದ್ದರು. ಭಕ್ತರಿಗೆ ಒಂದು ವರ್ಷದಿಂದ ಉತ್ತಮ ಸೇವೆ, ವಿಶ್ರಾಂತಿಗೆ ಸೌಕರ್ಯ ಕಲ್ಪಿಸಿರುವ ಅತ್ಯುತ್ತಮ ಕ್ಯೂ ವ್ಯವಸ್ಥೆ ಹೊಂದಿರುವ ಶ್ರೀ ಸಾನಿಧ್ಯಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಹೆಗ್ಗಡೆಯವರು ಶ್ರೀಸಾನಿಧ್ಯಕ್ಕೆ ದೀಪ ಬೆಳಗಿಸಿ ಮೊದಲ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.

ಧರ್ಮಸ್ಥಳ ಕ್ಯೂ ಕಾಂಪ್ಲೆಕ್ಸ್ ವೈಶಿಷ್ಟ್ಯತೆಗಳೇನು?
ಕಳೆದದೊಂದು ವರ್ಷದಲ್ಲಿ ಲಕ್ಷಾಂತರ ಭಕ್ತರು ಈ ಕ್ಯೂ ಕಾಂಪ್ಲೆಕ್ಸ್ ಮೂಲಕ ಸಾಗಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಧರ್ಮಸ್ಥಳದ ಶ್ರೀ ಸಾನಿಧ್ಯ ಕಾಂಪ್ಲೆಂಕ್ಸ್ ಪ್ರವೇಶಿಸುತ್ತಿದ್ದಂತೆ ಭಕ್ತರಿಗೆ ಅದ್ಭುತ ಅನುಭವ ಸಿಗುತ್ತಿದೆ. ಏರ್ ಪೋರ್ಟ್ ಲಾಂಜ್ ನಲ್ಲಿದ್ದಂತೆ ಭಾಸವಾಗುತ್ತದೆ. ಈ ಕ್ಯೂ ಕಾಂಪ್ಲೆಕ್ಸ್ 2,75,177 ಚದರ ಅಡಿಯ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಒಟ್ಟು ಮೂರು ಮಹಡಿಗಳನ್ನು ಹೊಂದಿದೆ.ಇಲ್ಲಿ 16 ಹಾಲ್ ವ್ಯವಸ್ಥೆ ಇದ್ದು, ಒಟ್ಟು ಸಂಕೀರ್ಣದಲ್ಲಿ 10 ರಿಂದ 12 ಸಾವಿರ ಭಕ್ತಾದಿಗಳನ್ನು ಏಕಕಾಲದಲ್ಲಿ ನಿರ್ವಸುವ ಸಾಮರ್ಥ್ಯ ಹೊಂದಿದೆ.
ಆಧುನಿಕ ಮೂಲ ಸೌಕರ್ಯ ವ್ಯವಸ್ಥೆ ಒಳಗಿದೆ
ಶ್ರೀ ಸಾನಿಧ್ಯದ ಒಳಗಡೆ ಉಷ್ಣಾಂಶ ನಿಯಂತ್ರಿಸಲು ಫ್ರೆಶ್ ಏರ್ ತಂತ್ರಜ್ಞಾನದ ಜೊತೆಗೆ ಬೃಹತ್ ಹವಾನಿಯಂತ್ರಕ ಫ್ಯಾನ್ ವ್ಯವಸ್ಥೆ ಇಲ್ಲಿದೆ. ಸುಸಜ್ಜಿತ ಶೌಚಾಲಯ, ಮಗು ಆರೈಕೆ ಕೊಠಡಿ, ಕುಡಿಯುವ ನೀರು, ಕೆಫೆಟೇರಿಯಾ, ಡಿಜಿಟಲ್ ಟಿ.ವಿ ಹಾಗೂ ಆಡಿಯೋ ವ್ಯವಸ್ಥೆ, ಬಾಷ್ ಕಂಪನಿಯ ಕ್ಯೂ ಮ್ಯಾನೇಜ್ಮೆಂಟ್ ಸಿಸ್ಟಂ, ಎ.ಐ ತಂತ್ರಜ್ಞಾನಗಳುಳ್ಳ ಕ್ಯಾಮೆರಾ, ಭಕ್ತರ ನಿಖರ ಲೆಕ್ಕಹಾಕಿ ಕ್ಯೂ ನಿಯಂತ್ರಣ ವ್ಯವಸ್ಥೆ ಇಲ್ಲಿದೆ. ಭಕ್ತರ ದಟ್ಟಣೆ ಹೆಚ್ಚಾದ ಸಂದರ್ಭಗಳಲ್ಲಿ ಶ್ರೀಕ್ಷೇತ್ರದಿಂದ ಫಲಾಹಾರ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
650 ಕೆವಿ ವಿದ್ಯುತ್ ಉತ್ಪಾದನೆಯ ಸೋಲಾರ್ ಪ್ಯಾನಲ್
ಹೊಸ ಕ್ಯೂ ಕಾಂಪ್ಲೆಕ್ಸ್ ನಲ್ಲಿ 650 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಯಾನೆಲ್-ಗಳನ್ನು ಅಳವಡಿಲಾಗಿದೆ. ಜೊತೆಗೆ ವಿದ್ಯುತ್ ಮತ್ತು ನೀರು ಪೋಲಾಗುವುದನ್ನು ತಪ್ಪಿಸಲು ಮಾನಿಟರಿಂಗ್ ತಂತ್ರಜ್ಞಾನ ಒಳಗೊಂಡ ಬಿಲ್ಡಿಂಗ್ ಮ್ಯಾನೇಜ್-ಮೆಂಟ್ ಸಿಸ್ಟಂ ಬಳಸಲಾಗುತ್ತಿದೆ. ನೀರಿನ ಪುನರ್ಬಳಕೆಗೂ ಇಲ್ಲಿ ಆದ್ಯತೆ ನೀಡಲಾಗಿದೆ. ಸ್ವಚ್ಛತೆಗೂ ಶ್ರೀ ಸಾನಿಧ್ಯ ಮಾದರಿಯಾಗಿದೆ ಎಂದು ಧರ್ಮಸ್ಥಳ ಆಡಳಿತ ಮಂಡಳಿ ತಿಳಿಸಿದೆ.
ದೇಶದಲ್ಲೇ ವ್ಯವಸ್ಥೆಯಲ್ಲಿ ಅಪರೂಪವಾಗಿರುವ ಶ್ರೀ ಸಾನಿಧ್ಯದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕ್ಷೇಮವನ ನೇಚರ್ ಕೇರ್ ನ ಸಿಇಓ ಶ್ರದ್ಧಾ ಅಮಿತ್, ವಿರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎವಿ ಶೆಟ್ಟಿ, ದೇವಾಲಯದ ಆಡಳಿತಾಧಿಕಾರಿ ಲಕ್ಷ್ಮೀನಾರಾಯಣ್, ಸಿವಿಲ್ ಎಂಜಿನಿಯರ್ ಯಶೋಧರ, ಮಲ್ಲಿನಾಥ್, ಪ್ರಕಾಶ್ ಹೆಗ್ಡೆ, ನವೀನ್, ಪ್ರಭಾಕರ್ ಹಾಗೂ ಸಿಬ್ಬಂದಿ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು.












Click it and Unblock the Notifications