ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: ದೇವಸ್ಥಾನ ಪರ ಹಿರಿಯ ವಕೀಲರಾದ ಸಿವಿ ನಾಗೇಶ್, ಮಹೇಶ್ ಕಜೆ ವಕಾಲತ್ತು
ಮಂಗಳೂರು: ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಗಮನ ಸೆಳೆದಿದ್ದ ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಆರೋಪ ಪ್ರಕರಣ ಸಂಬಂಧಿಸಿದ ಬುರಡೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ವಾದ ಮಾಡಲು ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಹಾಗೂ ಪುತ್ತೂರಿನ ವಕೀಲ ಮಹೇಶ್ ಕಜೆ ಅವರು ಇಂದು (ಡಿಸೆಂಬರ್ 31) ಬೆಳ್ತಂಗಡಿ ನ್ಯಾಯಲಯಕ್ಕೆ ಆಗಮಿಸಿ ವಕಾಲತ್ತು ಅರ್ಜಿ ಸಲ್ಲಿಸಿದರು. ಇದರಲ್ಲಿ ವಕೀಲರು, ಧರ್ಮಸ್ಥಳ ದೇವಸ್ಥಾನದ ಮೇಲೆ ಆರೋಪಿಸಿ ತಾವು ಸಂತ್ರಸ್ತರು ಎಂದು ಹೇಳಿದ್ದ ಆರೋಪಿಗಳು ಪ್ರಕರಣದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕೋರಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂಳಲಾಗಿದೆ ಎಂದು ಕೆಲವರು ಆರೋಪಿಸಿದ್ದರು. ಈ ಸಂಬಂಧ ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ವರದಿ ಸಹ ಸಲ್ಲಿಸಿದೆ. ತನಿಖೆ ಮೂಲಕ ಇದು ಶ್ರೀ ಕ್ಷೇತ್ರದ ಮೇಲಿನ ಅಪಪ್ರಚಾರದ ಭಾಗವೆಂದು ಸಾಬೀತಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ದೇವಸ್ಥಾನದ ಪರ ಈ ಇಬ್ಬರು ವಕೀಲರು ವಕಾಲತ್ತು ವಹಿಸಲಿದ್ದು, ಇಂದು ಮಧ್ಯಾಹ್ನ 2.30ಕ್ಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಅನುಭವಿ ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಅವರು ನಟ ದರ್ಶನ್ ಪ್ರಕರಣ, ಎಚ್.ಡಿ.ರೇವಣ್ಣರಂತಹ ಖ್ಯಾತನಾಮರ ಪ್ರಕರಣಗಳಲ್ಲಿ ಅವರ ಪರ ವಾದ ಮಂಡಿಸಿದಂಥವರು. ಇವರು ಸಾಕಷ್ಟು ಕ್ರಿಮಿನಲ್ ಪ್ರಕರಣಗಳಲ್ಲಿ ವಾದ ಮಂಡಿಸಿ ಹೆಸರು ವಾಸಿ ಆದವರು. ಇನ್ನೂ ಮಹೇಶ್ ಕಜೆ ಅವರು ಅಕ್ರಮ ಹಣ ವರ್ಗಾವಣೆ ಕಾಯ್ದೆ ಪ್ರಕರಣಗಳಲ್ಲಿ ಇಡಿ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡವರು. ಈ ಇಬ್ಬರು ಧರ್ಮಸ್ಥಳ ದೇವಸ್ಥಾನ ಪರವಾಗಿ ವಕಾಲತ್ತು ವಹಿಸಿದ್ದಾರೆ. ಇಂದು ಅರ್ಜಿ ಸಲ್ಲಿಸಿದ ಬಳಿಕ ಸಿ.ವಿ.ನಾಗೇಶ್ ಅವರು ವಾದ ಮಂಡಿಸಿದ್ದಾರೆ ಎಂದು ಮಹೇಶ್ ಕಜೆ ಅವರು ತಿಳಿಸಿದ್ದಾರೆ.
ವಿಚಾರಣೆ ಜನವರಿ 3ಕ್ಕೆ ಮುಂದೂಡಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಕಜೆ ಅವರು, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರವನ್ನೂ ಸಂತ್ರಸ್ತರನ್ನಾಗಿ ಪರಿಗಣಿಸಬೇಕು ಎನ್ನುವ ವಕಾಲತ್ತನ್ನು ಬುಧವಾರ (ಡಿ 31) ಕೋರ್ಟ್ ಸಲ್ಲಿಸಿದ್ದೇವೆ. ಈ ಸಂಬಂಧ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ. ಇಂದು ಸಿ.ವಿ.ನಾಗೇಶ್ ಅವರು ವಾದ ಮಂಡಿಸಿದರು. ಎಸ್‌ಐಟಿ ವರದಿಗೆ ಸಂಬಂಧಿಸಿದ ವಿಚಾರಣೆ ಶನಿವಾರ ಜನವರಿ 3ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಧರ್ಮಸ್ಥಳ ಬುರಡೆ ಗ್ಯಾಂಗ್ ಕಡೆಯಿಂದ ಆಕ್ಷೇಪ ಕುರಿತು ಅರ್ಜಿ ಹಾಕಿಲ್ಲ. ಆಕ್ಷೇಪ ಸಲ್ಲಿಸುವಂತೆ ನಿಲುವು ಅವರಿಗೆ ಇದರಲ್ಲಿ ಇಲ್ಲ. ನಮ್ಮ ಅರ್ಜಿಗೆ ಆಕ್ಷೇಪ ಸಿಗುತ್ತೋ ಇಲ್ಲವೇ ಎಂಬುದು ಮುಂದಿನ ದಿನಗಳಲ್ಲಿ ಕೋರ್ಟ್ ಆದೇಶದ ಮೇಲೆ ತಿಳಿಯಲಿದೆ ಎಂದರು.
ಪ್ರಕರಣ ಆರೋಪಿಗಳು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಅರ್ಜಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನವನ್ನೇ ಪ್ರಮುಖವಾಗಿಟ್ಟುಕೊಂಡು ದೇವಸ್ಥಾನ ಹೆಸರು ಉಲ್ಲೇಖಿಸಿ ತನಿಖೆಗೆ ಆಗ್ರಹಿಸಿದ್ದರು. ತನಿಖೆಗೆ ತಂಡ ರಚಿಸುವಂತೆ ಕೋರಿದ್ದರು. ಆಗ ಸುಪ್ರೀಂ ಕೋರ್ಟ್ ನಿಂದ ಅರ್ಜಿ ತಿರಸ್ಕೃತವಾಗಿತ್ತು. ಅವರ ಮೂಲವೇ ಟಾರ್ಗೆಟ್ ದೇವಸ್ಥಾನವಾಗಿತ್ತು. ಇದಕ್ಕೆ ಕೋರ್ಟ್ ದಾಖಲೆಗಳು ಇವೆ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ ಏನು?
ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಅನಾಮಿಕ ದೂರುದಾರ ಚಿನ್ನಯ್ಯ ಹೇಳಿದ್ದ. ಆ ಬಗ್ಗೆ ವಿಡಿಯೋ ಮಾಡಿ ಅಪಪ್ರಚಾರ ಮಾಡಿದ್ದ. ಈತನ ಜೊತೆಗೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸುಜಾತಾ ಭಟ್, ಜಯಂತ್ ಮತ್ತು ವಿಠ್ಠಲಗೌಡ ಸೇರಿ ಆರು ಮಂದಿಯ ತಂಡ ಧರ್ಮಸ್ಥಳ ದೇವಸ್ಥಾನ ಗುರಿ ಆಗಿಸಿಕೊಂಡು ಮಸಿ ಬಳಿಯಲು ಯತ್ನಿಸಿತ್ತು. ಅವರ ಆಗ್ರಹದಂತೆ ನಡೆದ ತನಿಖೆಯಲ್ಲಿ ಇದೆಲ್ಲವು ದೇವಸ್ಥಾನದ ಘನತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ. ಇದೊಂದು ವ್ಯವಸ್ಥಿತ ಪಿತೂರಿ ಎಂಬುದು ತಿಳಿದು ಬಂತು. ಈ ಬಗ್ಗೆ ಎಸ್‌ಐಟಿ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ. ಅದರ ಬೆನ್ನಲ್ಲೆ ಹಿರಿಯ ವಕೀಲರು ಧರ್ಮಸ್ಥಳ ಪರ ವಕಾಲತ್ತು ವಹಿಸಿದ್ದಾರೆ. ಈ ಮೂಲಕ ಧರ್ಮಸ್ಥಳ ಪ್ರಕರಣದ ಮೇಲೆ ರಾಜ್ಯದ ಜನರು ಮತ್ತೆ ಗಮನ ನೆಡುವಂತಾಗಿದೆ.












Click it and Unblock the Notifications