ಧರ್ಮಸ್ಥಳ ಪ್ರಕರಣ: ಕೇರಳದ ಯೂಟ್ಯೂಬರ್‌ಗೆ ಕರ್ನಾಟಕ ಪೊಲೀಸ್ ಡ್ರಿಲ್, ಕಾರಣವೇನು ?
ಕರ್ನಾಟಕದ ಧರ್ಮಸ್ಥಳ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು ಈ ಪ್ರಕರಣದಲ್ಲಿ ಕಮ್ಯೂನಿಸ್ಟ್ ಹಾಗೂ ಕೇರಳ ಸರ್ಕಾರದ ಕೈವಾಡವಿದೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿಕೊಂಡೇ ಬಂದಿದೆ. ಇದೀಗ ಕರ್ನಾಟಕದ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಯೂಟ್ಯೂಬರ್ ಅನ್ನು ಕರ್ನಾಟಕ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದ ಧರ್ಮಸ್ಥಳ ಪ್ರಕರಣವು ದೇಶಾದಾದ್ಯಂತ ಸುದ್ದಿಯಾಗಿತ್ತು. ಇದೇ ಸಂದರ್ಭದಲ್ಲಿ ಕೇರಳದ ಕೈವಾಡವಿದೆ ಎನ್ನುವ ವಿಷಯವು ಪದೇ ಪದೇ ಚರ್ಚೆಯ ಮುನ್ನೆಲೆಗೆ ಬರುತ್ತಿದೆ. ಇದೀಗ ಧರ್ಮಸ್ಥಳ ಗ್ರಾಮದಲ್ಲಿ ಶವಗಳ ಹೂತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ಯೂಟ್ಯೂಬರ್ ವಿಚಾರಣೆ ನಡೆಸಲಾಗಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಕೇರಳದ ಯೂಟ್ಯೂಬರ್ ಸೇರಿದಂತೆ ಹಲವರನ್ನು ಬೆಳ್ತಂಗಡಿಯ ಕಚೇರಿಗೆ ಕರೆಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು "ಪ್ರಜಾವಾಣಿ" ವರದಿ ಮಾಡಿದೆ. ಈ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನು ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಸಾಕ್ಷಿ ದೂರುದಾರ ಎಸ್‌ಐಟಿಗೆ ತಂದೊಪ್ಪಿಸಿದ್ದ ಬುರುಡೆ ಇದ್ದ ಜಾಗವನ್ನು ತೋರಿಸಿದ್ದ ವಿಠಲ ಗೌಡ, ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಿಂದ ಬುರುಡೆ ಹೊರ ತೆಗೆದ ವಿಡಿಯೊ ಪ್ರಸಾರ ಮಾಡಿದ್ದ ಕೇರಳದ ಯೂಟ್ಯೂಬರ್ ಮುನಾಫ್ ಮತ್ತು ಕರ್ನಾಟಕದ ಯುನೈಟೆಡ್ ಮಿಡಿಯಾ ಯೂಟ್ಯೂಬ್ ಚಾನೆಲ್‌ನ ಅಭಿಷೇಕ್ ಹಾಗೂ ಗಿರೀಶ ಮಟ್ಟೆಣ್ಣವರ ಅವರು ಸೇರಿದಂತೆ ಹಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ಮುನಾಫ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಯಾವ ಕಾರಣಕ್ಕಾಗಿ ನನ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ನನ್ನ ಬಳಿ ಇರುವ ಕೆಲವೊಂದು ಮಾಹಿತಿಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಿದ್ದೇನೆ ಎಂದು ಹೇಳಿದ್ದಾರೆ. ಸಾಕ್ಷಿ ದೂರುದಾರ ಭೀಮಾ ತಂದೊಪ್ಪಿಸಿದ್ದ ತಲೆಬುರುಡೆಯನ್ನು ನೇತ್ರಾವತಿ ಪಕ್ಕದಲ್ಲಿರುವ ಸ್ನಾನಘಟ್ಟದ ಪಕ್ಕದಲ್ಲಿರುವ ಬಂಗ್ಲಗುಡ್ಡೆಯ ಕಾಡಿನಿಂದ ಹೊರತೆಗೆದಿರುವ ಜಾಗದಲ್ಲಿ ಪೊಲೀಸರು ಬಂದೋಬಸ್ತ್ ಅಥವಾ ಕಾವಲು ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಆರೋಪ: ಇನ್ನು ಧರ್ಮಸ್ಥಳ ಪ್ರಕರಣ ಹಾಗೂ ಎಸ್‌ಐಟಿ ರಚನೆ ಮಾಡಿರುವ ಸಂದರ್ಭದಿಂದಲೂ ಕರ್ನಾಟಕ ಬಿಜೆಪಿಯು ಧರ್ಮಸ್ಥಳ ಪ್ರಕರಣದ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ಎಡಪಂಥೀಯರು - ಕೇರಳದ ಪಾತ್ರವಿದೆ ಎಂದು ದೂರುತ್ತಿದೆ. ಆದರೆ ಈ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿಯು ಯಾವುದೇ ಸಾಕ್ಷಿಗಳನ್ನು ನೀಡಿಲ್ಲ. ಅಲ್ಲದೇ ಇದೀಗ ಯೂಟ್ಯೂಬರ್ ಅನ್ನು ಯಾವ ಕಾರಣಕ್ಕೆ ವಿಚಾರಣೆಗೆ ಒಳಪಡಿಸಲಾಗಿದೆ ಎನ್ನುವ ನಿಖರ ಮಾಹಿತಿಯನ್ನೂ ಹಂಚಿಕೊಂಡಿಲ್ಲ.












Click it and Unblock the Notifications