ಜಿ ಕೆಟಗರಿ ವರದಿ, ದೇವೇಗೌಡರು ಹೇಳಿದ್ದೇನು?
ಬೆಂಗಳೂರು, ಅ, 28 : ಕರ್ನಾಟಕದ ಎಲ್ಲಾ ಮುಖ್ಯಮುಖ್ಯಮಂತ್ರಿಗಳ ಅವಧಿಯಲ್ಲಿ ಹಂಚಿಕೆಯಾದ ಜಿ ಕೆಟಗರಿ ನಿವೇಶನಗಳ ಕುರಿತು ತನಿಖೆನಡೆಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ. ಕೇವಲ ಮೂರು ಮುಖ್ಯಮಂತ್ರಿಗಳ ಅವಧಿಯಲ್ಲಿನ ನಿವೇಶನ ಹಂಚಿಕೆ ನಡೆಸಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಭಾನುವಾರ ಹಾಸನದಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ ಧರ್ಮಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ ಮಾತ್ರವಲ್ಲ ಎಲ್ಲಾ ಮುಖ್ಯಮಂತ್ರಿ ಗಳ ಅವಧಿಯಲ್ಲಿ ಹಂಚಿಕೆ ಮಾಡಲಾಗಿರುವ ಜಿ ಕೆಟಗರಿ ನಿವೇಶನಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಮೂವರು ಸಿಎಂಗಳ ಅವಧಿಯ ಬಗ್ಗೆ ಮಾತ್ರ ತನಿಖೆ ನಡೆಸಿದ್ದು ಏಕೆ? ಎಂದು ಅವರು ಪ್ರಶ್ನಿಸಿದರು.
ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಜಿ ಕೆಟಗರಿಯಡಿ ನಿವೇಶನ ಮಂಜೂರಾಗಿವೆ. ಆದ್ದರಿಂದ ಎಲ್ಲಾ ಮಖ್ಯಮಂತ್ರಿಗಳ ಅವಧಿಯ ನಿವೇಶನ ಹಂಚಿಕೆಯ ಕುರಿತು ತನಿಖೆ ನಡೆಸಬೇಕು ಎಂದು ದೇವೇಗೌಡ ಆಗ್ರಹಿಸಿದರು. ಸಚಿವರ ಕಾರು ಚಾಲಕನಿಗೆ ನಿವೇಶನ ನೀಡುವುದು, ಆತ ಪಡೆಯುವುದು ಮಹಾ ಅಪರಾಧವೆ ಎಂದು ಪ್ರಶ್ನಿಸಿದ ಗೌಡರು, ಎಷ್ಟೋ ಮಂದಿ 2-3 ಬಾರಿ ಜಿ ಕೆಟಗರಿ ನಿವೇಶನ ಪಡೆದು, ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ಸದ್ಯ ನ್ಯಾ.ಬಿ.ಪದ್ಮರಾಜ್ ಸಲ್ಲಿಸಿರುವ ವರದಿಯಂತೆ ಜಿ ಕೆಟಗರಿ ನಿವೇಶನಗಳನ್ನು ವಾಪಸ್ ಪಡೆಯುವುದಾದದರೆ, ಎಲ್ಲಾ ಸಿಎಂಗಳು ಹಂಚಿಕೆ ಮಾಡಿರುವ ನಿವೇಶನಗಳನ್ನು ವಾಪಸ್ ಪಡೆಯಬೇಕೆಂದು ದೇವೇಗೌಡ ಒತ್ತಾಯಿಸಿದರು. ನಾನು ಜಿ ಕೆಟಗರಿಯಡಿ ಯಾವುದೇ ನಿವೇಶನ ಪಡೆದಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರ ಸ್ಪಷ್ಟಪಡಿಸಿದರು. (ಜಿ ಕೆಟಗರಿ ನಿವೇಶನ ಹಂಚಿಕೆಯ ಕುರಿತ ಪ್ರತಿಕ್ರಿಯೆಗಳು)

ಪರಿಶೀಲಿಸಿ ಕ್ರಮ ಕೈಗೊಳ್ಳುವೆ
ಜಿ ಕೆಟಗರಿ ಅಡಿಯಲ್ಲಿ ಬಿಡಿಎ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾ.ಪದ್ಮರಾಜ್ ಸಮಿತಿ ಸಲ್ಲಿಸಿರುವ ವರದಿಯ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವರದಿಯಲ್ಲಿ ಏನಿದೆ ಎಂದು ನಾನು ಪರಿಶೀಲನೆ ನಡೆಸಿಲ್ಲ ಎಂದು ಭಾನುವಾರ ಮಾಧ್ಯಮಗಳಿಗೆ ಅವರು ಹೇಳಿಕೆ ನೀಡಿದ್ದಾರೆ. ವರದಿ ಪರಿಶೀಲನೆ ನಡೆಸಿದ ಬಳಿಕ ಅಕ್ರಮವಾಗಿ ಹಂಚಿಕೆಯಾಗಿರುವ ಜಿ ಕೆಟಗರಿ ನಿವೇಶಗಳನ್ನು ವಾಪಸ್ ಪಡೆಯುವ ಕುರಿತು ಚಿಂತನೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಸರ್ಕಾರ ಕ್ರಮ ಎದುರು ನೋಡುತ್ತಿದ್ದೇನೆ
ನ್ಯಾ. ಪದ್ಮರಾಜ್ ಸಮಿತಿಯ ವರದಿ ಕುರಿತು ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡುತ್ತಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜಿ ಕೆಟಗರಿಯಡಿ ನಿವೇಶನ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಅರ್ಜಿದಾರರು ತಮಗೆ ನಿವೇಶನ ಇಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಸಿ ನೀವೇಶನ ಪಡೆಯುತ್ತಾರೆ. ಶಾಸಕರು, ಸಂಸದರು, ಸಾಮಾನ್ಯರು ಎಲ್ಲರೂ ಸೈಟು ಪಡೆದಿದ್ದಾರೆ. ಒಂದು ವೇಳೆ ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಪಡೆದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ತುರ್ತು ಕ್ರಮ ತೆಗೆದುಕೊಳ್ಳಲಿ
ಜಿ ಕೆಟಗರಿ ನಿವೇಶನ ಹಂಚಿಕೆ ವಿಚಾರದ ಕುರಿತು ನ್ಯಾ.ಪದ್ಮರಾಜ್ ಸಲ್ಲಿಸಿರುವ ವರದಿಯನ್ನು ಸರ್ಕಾರ ಬಹಿರಂಗ ಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳಿ ಸಚಿವ ಸಂಪುಟ ಸಭೆ ಕರೆದು, ಸಮಿತಿ ವರದಿ ಒಪ್ಪಿಕೊಳ್ಳಬೇಕೋ ಅಥವಾ ಇನ್ನೊಂದು ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕೋ ಎಂದು ನಿರ್ಧರಿಸಬೇಕು ಎಂದು ಅವರು ಹೇಳಿದರು. ತಾವು ಕಾನೂನು ಚೌಕಟ್ಟಿನಲ್ಲಿ ಜಿ ಕೆಟಗರಿ ನಿವೇಶನ ಪಡೆದಿದ್ದೇನೆ. ಜಿ ಕೆಟಗರಿ ನಿವೇಶನ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದರು.

ಯಾವುದೇ ಲೋಪವಾಗಿಲ್ಲ
ಜಿ ಕೆಟಗರಿ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಅದರಲ್ಲೂ ನನ್ನ ಅವಧಿಯಲ್ಲಿ ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ಜಿ ಕೆಟಗರಿ ನಿವೇಶನಗಳನ್ನು ಅರ್ಹರಿಗೆ ಮಾತ್ರ ಹಂಚಿಕೆ ಮಾಡಲಾಗಿದೆ ಎಂದು ಮಾಜಿ ಸಿಎಂ ಧರಂ ಸಿಂಗ್ ಹೇಳಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿರುವುದು ಸಾಬೀತಾದರೆ ಅವುಗಳನ್ನು ರದ್ದುಪಡಿಸಲಿ. ಎಲ್ಲ ನಿವೇಶನ ಪಡೆದವರೂ ಅಫಿಡವಿಟ್ ಸಲ್ಲಿಸಿದ್ದಾರೆ. ಅವು ಬಿಡಿಎ ಕಚೇರಿಯಲ್ಲಿವೆ, ಇವುಗಳಲ್ಲೂ ಲೋಪ ಕಂಡು ಬಂದರೆ ಕ್ರಮ ಕೈಗೊಳ್ಳಲಿ. ನಾನು ತಪ್ಪು ಮಾಡಿದ್ದರೆ ನನ್ನ ವಿರುದ್ಧವೂ ಕ್ರಮ ಕೈಗೊಳ್ಳಲಿ ಎಂದು ಧರಂ ಸಿಂಗ್ ಸವಾಲು ಹಾಕಿದ್ದಾರೆ.

ಏನಿದು ವರದಿ
ಮುಖ್ಯಮಂತ್ರಿಯವರ ವಿವೇಚನಾ ಕೋಟಾ (ಜಿ ಕೆಟೆಗರಿ) ಅಡಿಯಲ್ಲಿ ಬೆಂಗಳೂರು ಅಭಿ ವೃದ್ಧಿ ಪ್ರಾಧಿಕಾರದ (ಬಿಡಿಎ) 313 ನಿವೇಶನಗಳನ್ನು ಅನರ್ಹರಿಗೆ ನೀಡಲಾಗಿದ್ದು, ಇವನ್ನು ವಾಪಸ್ ಪಡೆಯಲು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಪದ್ಮರಾಜ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ‘ಜಿ' ಕೋಟಾ ಅಡಿಯಲ್ಲಿ ಮಾಡಲಾದ ಬಹುಪಾಲು ನಿವೇಶನಗಳ ಹಂಚಿಕೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಇಂತಹ ನಿವೇಶನಗಳನ್ನು ವಾಪಸ್ ಪಡೆಯಬೇಕು ಎಂದು ಸಮಿತಿ ವರದಿಯಲ್ಲಿ ಶಿಫಾರಸು ಮಾಡಿದೆ. ಸದ್ಯ ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. (ನಿವೇಶನದ ವರದಿ)












Click it and Unblock the Notifications