Vande Bharat Express: ಹಾವೇರಿಗೆ ವಂದೇ ಭಾರತ್ ರೈಲು ನಿಲುಗಡೆ ಬೇಕು: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಸೆಪ್ಟಂಬರ್ 27: ಬೆಂಗಳೂರಿನಿಂದ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು (Vande Bharat Express Rail) ಬೆಳಗಾವಿವರೆಗೆ ವಿಸ್ತರಣೆ ಮಾಡಬೇಕು ಎಂಬ ಕೂಗಿನ ಜೊತೆಗೆ ಇದೀಗ ಈ ಜಿಲ್ಲೆಯಲ್ಲಿ ನಿಲುಗಡೆ ನೀಡುವಂತೆ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಖುದ್ದು ಕ್ರಮ ವಹಿಸುವಂತೆ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಹಾವೇರಿ-ಗದಗ ಜಿಲ್ಲೆಗಳ ವ್ಯಾಪ್ತಿಯ ನಡೆಯುತ್ತಿರುವ ವಿವಿಧ ರೈಲ್ವೇ ಕಾಮಗಾರಿಗಳ ಕುರಿತು ಶುಕ್ರವಾರ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ ಸೌಧದಲ್ಲಿ ಬಸವರಾಜ ಬೊಮ್ಮಾಯಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಹಾವೇರಿ ರೈಲು ನಿಲ್ದಾಣದಲ್ಲಿ ಬೆಂಗಳೂರು ಮತ್ತು ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೆಲವು ದಿನಗಳಿಂದ ಬೆಂಗಳೂರಿನಿಂದ ಹೊರಟು ಹಾವೇರಿಗೆ ನಿಲುಗಡೆ ನೀಡದೇ ಧಾರವಾಡಕ್ಕೆ ಕೊನೆಯಾಗುತ್ತಿದ್ದ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಣೆ ಮಾಡುವಂತೆ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಕೇಂದ್ರ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವರಿಗೆ ಖುದ್ದು ಮನವಿ ನೀಡಿದ್ದಾರೆ.
ಇದರ ಬೆನ್ನಲ್ಲೆ ಹಾವೇರಿಯಲ್ಲಿ ಇದೇ ವಂದೇ ಭಾರತ್ ರೈಲು ನಿಲುಗಡೆಗೆ ಬೇಡಿಕೆ ಇಡಲಾಗಿದೆ. ಮಧ್ಯ ಕರ್ನಾಟಕದ ಪ್ರತಿಷ್ಠಿತ ಜಿಲ್ಲೆ ಹಾಗೂ ತಾಲೂಕು ಆಗಿರುವ ಹಾವೇರಿ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಜಿಲ್ಲೆ ವ್ಯಾಪ್ತಿಯಿಂದ ಬೆಂಗಳೂರಿಗೆ ತೆರಳುವವರು, ಇಲ್ಲವೇ ಅಲ್ಲಿಂದ ಜಿಲ್ಲೆಗೆ ಬರುವವರಿಗೆ ಅನುಕೂಲವಾಗುತ್ತದೆ. ಇದೀಗ ಈ ಸಂಬಂಧ ರೈಲ್ವೆ ಅಧಿಕಾರಿಗಳಿಗೆ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಗದಗ- ಹೊಂಬಳ ರಸ್ತೆಯಲ್ಲಿರುವ ರೇಲ್ವೆ ಸೇತುವೆ, ಗದಗ- ಯಲವಿಗಿ ನೂತನ ರೇಲ್ವೆ ಮಾರ್ಗ, ಮುಂಡರಗಿ ತಾಲೂಕು ಹಳ್ಳಿಕೇರಿ ಹತ್ತಿರ ಕೆಳ ಸೇತುವೆ ನಿಮಿಸಲಾಗುವುದು. ಗದಗ- ಗಜೇಂದ್ರಗಡ-ವಾಡಿ ಮಾರ್ಗ ಕಾಮಗಾರಿ, ಗದಗ- ಬೆಟಗೇರಿ ಮಧ್ಯ ಬಳ್ಳಾರಿ ಗೇಟ್ ಕೆಳಭಾಗದ ಸೇತುವೆ ದುರಸ್ಥಿಗೆ ಶೀಘ್ರವೇ ಕ್ರಮ ವಹಿಸುತ್ತೇವೆ.
ಇನ್ನೂ ಗದಗ- ನವಲಗುಂದ -ನರಗುಂದ ರೇಲ್ವೆ ಕಾಮಗಾರಿಗೆ ನಕ್ಷೆ ತಯಾರಿಸಿ ಅನುಮೋದಿಸಲಾಗುವುದು. ಕಣವಿ ಗ್ರಾಮದ ಹುಲಕೋಟಿ - ಯಲವಿಗಿ ಹೊಸ ರೈಲುಗಳ ಸರ್ವೇ ಮಾಡಲಾಗಿದೆ. ಈ ಸ್ಥಳ ಬದಲಾವಣೆ ಕುರಿತು ಸಾರ್ವಜನಿಕರಿಂದ ಮನವಿ ಬಂದಿದ್ದು, ಈ ಕುರಿತು ಪರಿಶೀಲಿಸಲಾಗುವುದು.
ಗದಗ ಪಟ್ಟಣದ ಗಂಗಾಪುರ ಪೇಟೆಯ ಗೇಟ್ ನಂ 2ಎ ಗೆ ಮೇಲು ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಶೀಘ್ರವೇ ಪೂರ್ಣಗೊಳಿಲಾಗುವುದು. ಗದಗ-ಶಿರಹಟ್ಟಿ -ಯಲವಿಗಿ ರೇಲ್ವೆ ಮಾರ್ಗ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭ ಮಾಡಿ ಕೆಲಸ ಆರಂಭಕ್ಕೆ ಅನುಕೂಲ ಮಾಡಿಕೊಡುವಂತೆ ನಿರ್ದೇಶಿಸಲಾಗಿದೆ. ಇನ್ನು ಗದಗ -ಹರಪನಹಳ್ಳಿ ನೂತನ ರೈಲು ಮಾರ್ಗ ಅನುಷ್ಠಾನಗೊಳಿಸಲು ರೈಲ್ವೆ ಅಧಿಕಾರಿಗಳಿಗೆ ಸಭೆಯಲ್ಲಿ ಬೊಮ್ಮಾಯಿ ಅವರು ಸೂಚಿಸಿದರು.
ರೈಲು ನಿಲ್ದಾಣಗಳು ಮೇಲ್ದರ್ಜೆಗೆ, ರೈಲು ಸೇತುವೆ
ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ರೈಲು ಮಾರ್ಗಗಳಲ್ಲಿ ಯಲವಿಗಿ - ಹಾವೇರಿ - ಬ್ಯಾಡಗಿ - ರಾಣೆಬೆನ್ನೂರ - ಚಳಗೇರಿ ರೇಲ್ವೆ ಸ್ಟೇಷನ್ ನವೀಕರಣ, ಲಕ್ದ್ಮೇಶ್ವರ - ಸವಣೂರ ಮಧ್ಯ ಯಲವಿಗಿ ಹತ್ತಿರದ ರೇಲ್ವೆ ಸೇತುವೆ, ರಾಣೆಬೆನ್ನೂರ ಶಿಕಾರಿಪುರ ನೂತನ ರೇಲ್ವೆ ಮಾರ್ಗ ಭೂ ಸ್ವಾಧೀನ ಮಾಡುವುದು, ರಾಣೆಬೆನ್ನೂರ ತಾಲೂಕ ಕೋನಬೇವು - ಶಿಡಗನಾಳ ಮಧ್ಯ ರೇಲ್ವೆ ಸೇತುವೆ ನಿರ್ಮಾಣ, ಸವಣೂರ ತಾಲೂಕು ಯಲವಿಗಿ ಗ್ರಾಮದ ಹತ್ತಿರ ಸಧ್ಯದ ಕೆಳ ಸೇತುವೆ ಬದಲಾಗಿ ಮೇಲ್ ಸೇತುವೆ ನಿರ್ಮಾಣ ಮಾಡಲು ಸೂಚಿಸಿದರು.
ಇನ್ನು ಜನ ಶತಾಬ್ದಿ, ಕಿತ್ತೂರ ರಾಣಿ ಚನ್ನಮ್ಮ, ಯಶವಂತಪುರ- ವಾಸ್ಕೋ ಎಕ್ಸಪ್ರೆಸ್, ಮಂಗಳೂರ- ವಿಜಯಪುರ ಎಕ್ಸಪ್ರೆಸ್ ರೈಲನ್ನು ಯಲವಿಗಿ ಸ್ಟೇಷನ್ ನಲ್ಲಿ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.












Click it and Unblock the Notifications