ಹೈಕೋರ್ಟ್‌ನಲ್ಲಿ ಸೋಮವಾರ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ
Recommended Video
ಬೆಂಗಳೂರು, ಸೆಪ್ಟೆಂಬರ್ 29 : ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ಸೋಮವಾರ ನಡೆಯಲಿದೆ. ಇಡಿಯಿಂದ ಬಂಧನಕ್ಕೊಳಗಾಗಿರುವ ಅವರು ತಿಹಾರ್ ಜೈಲಿನಲ್ಲಿದ್ದಾರೆ.
ದೆಹಲಿ ಹೈಕೋರ್ಟ್‌ನಲ್ಲಿ ಡಿ. ಕೆ. ಶಿವಕುಮಾರ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ನೇತೃತ್ವದ ಪೀಠದಲ್ಲಿ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 30ರ ಸೋಮವಾರ ನಡೆಯಲಿದೆ. ವಿಚಾರಣೆ ಕುತೂಹಲ ಮೂಡಿಸಿದೆ.
ಬುಧವಾರ ಇಡಿ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಗುರುವಾರ ಅವರ ಪರ ವಕೀಲರು ದೆಹಲಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು.
ವಿಚಾರಣೆ ದಿನಾಂಕ ಸೋಮವಾರಕ್ಕೆ ನಿಗದಿಯಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್‌ರನ್ನು ಇಡಿ ಬಂಧಿಸಿದೆ. 14 ದಿನಗಳ ವಿಚಾರಣೆ ಬಳಿಕ ಅಕ್ಟೋಬರ್ 1ರ ತನಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ದೆಹಲಿಯಲ್ಲಿಯೇ ಇಡಿ ಡಿ. ಕೆ. ಶಿವಕುಮಾರ್ ಬಂಧಿಸಿದ್ದರಿಂದ ದೆಹಲಿ ಹೈಕೋರ್ಟ್‌ನಲ್ಲಿ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಸೋಮವಾರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡು ಪ್ರತಿವಾದಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಸತತ 4 ದಿನಗಳ ವಿಚಾರಣೆ ಬಳಿಕ ಸೆಪ್ಟೆಂಬರ್ 3ರಂದು ಇಡಿ ಡಿ. ಕೆ. ಶಿವಕುಮಾರ್ ಬಂಧಿಸಿತ್ತು. ಇಡಿ ವಿಶೇಷ ನ್ಯಾಯಾಲಯ ಅವರಿಗೆ ಜಾಮೀನು ನೀಡುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು. ಆದರೆ, ನ್ಯಾಯಾಲಯ ಜಾಮೀನು ನೀರಾಕರಿಸಿತ್ತು.
2017ರ ಆಗಸ್ಟ್ 2ರಂದು ಡಿ. ಕೆ. ಶಿವಕುಮಾರ್ ದೆಹಲಿ ನಿವಾಸ ಮತ್ತು ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಆಗ 8.59 ಕೋಟಿ ರೂ. ಹಣ ಸಿಕ್ಕಿತ್ತು. ಈ ಹಣಕ್ಕೆ ಯಾವುದೇ ದಾಖಲೆ ಇಲ್ಲ. ಅಕ್ರಮ ಹಣ ವರ್ಗಾವಣೆ ಮೂಲಕ ದೆಹಲಿಗೆ ಹಣ ಸಾಗಣೆ ಮಾಡಲಾಗಿತ್ತು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.












Click it and Unblock the Notifications