"ಸುಳ್ಳಿನ ಶೂರ ಡಿ.ಕೆ ಶಿವಕುಮಾರ್" : ಒಕ್ಕಲಿಗ ನಾಯಕರ ನಡುವೆ ವಾಕ್ಸಮರ, ಕಾರಣವೇನು ?
ಒಕ್ಕಲಿಗ ಸ್ವಾಮೀಜಿಯ ಬಗ್ಗೆ ಕಾಂಗ್ರೆಸ್‌ನ ಒಕ್ಕಲಿಗ ಸಮುದಾಯದ ನಾಯಕರು ಹಾಗೂ ಜೆಡಿಎಸ್‌ನ ಒಕ್ಕಲಿಗ ಸಮುದಾಯದ ನಾಯಕರು ಹೇಳಿಕೆ ಕೊಡುವುದು ಹಾಗೂ ಸಮರ್ಥನೆ ಮಾಡಿಕೊಳ್ಳುವುದು ಮುಂದುವರಿದಿದೆ. ಇದರ ಭಾಗವಾಗಿ ಈ ಎರಡೂ ಪಕ್ಷದ ನಾಯಕರು ಪರಸ್ಪರ ವಾಕ್ಸಮರ ನಡೆಸುವುದು ಸಹ ಮುಂದುವರಿದಿದೆ. ಒಕ್ಕಲಿಗ ಸ್ವಾಮೀಜಿ ವಿಚಾರವಾಗಿ ಈಗಾಗಲೇ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಡುವೆ ವಾಕ್ಸಮರ ಜೋರಾಗಿದ್ದು, ಇದೀಗ ಅಖಾಡಕ್ಕೆ ಜೆಡಿಎಸ್ ಸಹ ಪ್ರವೇಶಿಸಿದೆ. ಚಂದ್ರಶೇಖರ ಸ್ವಾಮೀಜಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪರ - ವಿರೋಧ ಚರ್ಚೆ ಶುರುವಾಗಿದೆ. ಸ್ವಾಮೀಜಿಯ ಹೇಳಿಕೆಯನ್ನು ರಾಜ್ಯದ ಆಡಳಿತರೂಢ ಪಕ್ಷದ ನಾಯಕರು ಖಂಡಿಸಿದ್ದರೆ, ವಿರೋಧ ಪಕ್ಷಗಳು ಸಮರ್ಥನೆ ಮಾಡಿಕೊಂಡಿವೆ.
ಇದೀಗ ಈ ಸಂಬಂಧ ಜೆಡಿಎಸ್ ಸಹ ಪ್ರತಿಕ್ರಿಯಿಸಿದ್ದು, ಒಕ್ಕಲಿಗ ಸಮುದಾಯ ಮತ್ತು ಪೂಜ್ಯ ಸ್ವಾಮೀಜಿ ಅವರಿಗೆ ನಿಮ್ಮ ಸರ್ಕಾರ ಮಾಡಿರುವ ಅಪಚಾರ ಮುಚ್ಚಿಟ್ಟುಕೊಳ್ಳಲು ಇನ್ನೊಬ್ಬರ ಮೇಲೆ ಕೆಸರೆರೆಚುತ್ತಿದ್ದೀರಿ, ಯಾಕೆ ಎಂದು ಪ್ರಶ್ನೆ ಮಾಡಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಸಂಬಂಧ ಪೋಸ್ಟ್ ಮಾಡಲಾಗಿದ್ದು, ಪೂಜ್ಯ ಸ್ವಾಮೀಜಿ (ಚಂದ್ರಶೇಖರ ಸ್ವಾಮೀಜಿ) ಅವರ ಮೇಲೆ ನೀವು ಎಫ್ಐಆರ್ ಹಾಕಿದ್ದೀರಿ. ಇದರಿಂದ ಈಗ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ. ಒಕ್ಕಲಿಗರ ಆಕ್ರೋಶಕ್ಕೆ ನೀವು ಗುರಿಯಾಗಿದ್ದೀರಿ. ಬೀಸುವ ದೊಣ್ಣೆಯಿಂದ ಪಾರಾಗಲು ಜೆಡಿಎಸ್ ಬಗ್ಗೆ ಹೊಸ ಹುಳುಕು ಹುಡುಕುತ್ತಿದ್ದೀರಿ ಎಂದು ಕಿಡಿಕಾರಿದೆ.

ಜೆಡಿಎಸ್ ಸರ್ಕಾರವಿದ್ದಾಗ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಕೇಸು ಹಾಕಲಾಗಿತ್ತು ಎಂದು ಬಾಲಬುದ್ಧಿಯ ನೀವು ಬಡಬಡಿಸಿದ್ದೀರಿ. ಹಳೆಯ ವಿಷಯ ಕೆದಕಿದ ನಿಮಗೆ ಆ ಪ್ರಕರಣ ಏನು, ಅದು ಮುಂದೇನಾಯಿತು? ಎನ್ನುವ ಮಾಹಿತಿ ಇಲ್ಲವೇ. ಆ ಪ್ರಕರಣಕ್ಕೂ ಜೆಡಿಎಸ್ ಪಕ್ಷಕ್ಕೂ ಸಂಬಂಧವೇನು ಮುಂದೆ ಆ ಪ್ರಕರಣ ರದ್ದಾಯಿತು, ನಿಮಗೆ ಗೊತ್ತಿಲ್ಲವೇ ಎಂದು ಕೇಳಿದೆ.
ಪೂಜ್ಯ ಸ್ವಾಮೀಜಿ ಅವರ ವಿರುದ್ಧ ನಿಮ್ಮ ಇಡೀ ಕಾಂಗ್ರೆಸ್ ಸರ್ಕಾರ ತೊಡೆತಟ್ಟಿ ನಿಂತಿದೆ. ಸಚಿವರುಗಳೆಲ್ಲ ಅವರ ಮೇಲೆ ರಕ್ಕಸರಂತೆ ಮುಗಿಬಿದ್ದಿದ್ದಾರೆ. ಹೇಳಿಕೆಯ ಬಗ್ಗೆ ಪರಮಪೂಜ್ಯರು ವಿಷಾದ ವ್ಯಕ್ತಪಡಿಸಿದ ಮೇಲೆಯೂ ಅವರ ಮೇಲೆ ಸರ್ಕಾರ ಯಾರದೋ ನಿರ್ದಿಷ್ಟ ಚಿತಾವಣೆಗೆ ಒಳಗಾಗಿ ಕಾಲು ಕೆರೆದು ಜಗಳಕ್ಕೆ ನಿಂತಿದೆ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅಪಮಾನಕರವಾಗಿ ವರ್ತಿಸುತ್ತಿದೆ. ಓಲೈಕೆ ರಾಜಕೀಯ, ತುಷ್ಟೀಕರಣದ ಪರಾಕಾಷ್ಠೆ ಇದು. ಒಕ್ಕಲಿಗರಿಗೆ ಇದೆಲ್ಲಾ ಅರ್ಥವಾಗುತ್ತಿದೆ ಎಂದು ಹೇಳಿದೆ.

ಒಕ್ಕಲಿಗ ವಿರೋಧಿ ಡಿಕೆಶಿಯವರೇ.. ನಿಮಗಿದು ತರವೇ ಎಂದು ಕೇಳಲಾಗಿದ್ದು, ಮಿಸ್ಟರ್ ಡಿಕೆಶಿಯವರೇ.. ಒಕ್ಕಲಿಗರ ಅಸ್ಮಿತೆಯನ್ನು ಕೆಣಕಿದ್ದೀರಿ.. ನಿಮ್ಮ ಸರಕಾರ, ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರುಗಳಿಗೆ ಬುದ್ಧಿ ಹೇಳುವ ಕನಿಷ್ಠ ಧೈರ್ಯವನ್ನಾದರೂ ಮಾಡಿ. ಅಧಿಕಾರಕ್ಕಾಗಿ ಸಮುದಾಯದಿಂದ ಪೆನ್ನು ಪೇಪರ್ ಭಿಕ್ಷೆ ಬೇಡಿದ ನಿಮಗೆ ಈಗ ಸಮುದಾಯ ಕಾಲ ಕಸವಾಗಿದೆ. ಇದಕ್ಕೆ ನೀವು ಬೆಲೆ ತೆರುತ್ತೀರಿ ಎಂದೂ ಎಚ್ಚರಿಸಿದೆ.
ಆರ್. ಅಶೋಕ್ ಮೇಲೆ ಕಡಿಕಾರಿದ್ದ ಡಿ.ಕೆ ಶಿವಕುಮಾರ್
ಇನ್ನು ಒಕ್ಕಲಿಗ ಸ್ವಾಮೀಜಿ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆರ್. ಅಶೋಕ್ ಮೇಲೆ ಕಡಿಕಾರಿದ್ದರು. ಅಶೋಕ್ ಅವರು ಈ ಹಿಂದೆ ಯಾಕೆ ಮಾತನಾಡಲಿಲ್ಲ. ಸ್ವಾಮೀಜಿಗಳ ಪೋನ್ ಟ್ಯಾಪ್ ಮಾಡಿದಾಗ ಸುಮ್ಮನಿದ್ದರೇಕೆ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಅದಕ್ಕೆ ಜೆಡಿಎಸ್ ತಿರುಗೇಟು ಕೊಟ್ಟಿದೆ.












Click it and Unblock the Notifications