ಯಾವ ಪವರ್ರೂ ಇಲ್ಲ, ಯಾವ ಶೇರಿಂಗೂ ಇಲ್ಲ, ಸಿದ್ದರಾಮಯ್ಯರೇ ಸಿಎಂ: ಏಕಾಏಕಿ ಡಿ ಕೆ ಶಿವಕುಮಾರ್ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಜನವರಿ 11: ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಪಟ್ಟದ ಆಟಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಡಿಸಿಎಂ ಡಿ ಕೆ ಶಿವಕುಮಾರ್ ಪವರ್ ಶೇರಿಂಗ್, ಡಿನ್ನರ್ ಪಾಲಿಟಿಕ್ಸ್ ಹಾಗೂ ಸಿಎಂ ಬದಲು ಚರ್ಚೆಗೆ ಫುಲ್ ಸ್ಟಾಪ್ ಹಾಕುವ ಪ್ರಯತ್ನವನ್ನ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವ ಪವರ್ ಇಲ್ಲ, ಯಾವ ಶೇರಿಂಗ್ ಇಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪವರ್ ಶೇರಿಂಗ್ ಬಗ್ಗೆ ಚರ್ಚೆ ಆಗುತ್ತಿರುವಾಗ ಈ ಹೇಳಿಕೆ ಬಂದಿದೆ ಎಂಬ ಬಗ್ಗೆಯೂ ಮಾತನಾಡಿ, ಯಾವ ಪವರ್ ಇಲ್ಲ, ಶೇರು ಇಲ್ಲ.

ಐದು ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ ಎಂದರು. ಇದೇ ಅವಧಿಯಲ್ಲಿ ನೀವು ಸಿಎಂ ಆಗುತ್ತೀರಿ ಎಂಬ ವಿನಯ್ ಗುರೂಜಿ ಅವರ ಹೇಳಿಕೆ ಬಗ್ಗೆ ಮಾತನಾಡಿ, ನಮ್ಮ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಸ್ವಾಮೀಜಿಗಳು ನಮ್ಮ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುವುದು ಬೇಡ ಎಂದು ಮನವಿ ಮಾಡುತ್ತೇನೆ.
ಕೇಂದ್ರದ ಬಳಿ ನಮ್ಮ ತೆರಿಗೆ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇ ಬೇಕು. ನಮ್ಮ ರಾಜ್ಯದ ಹಿತವನ್ನು ಕಾಪಾಡಲೇಬೇಕು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು. ಬಿಜೆಪಿಯ ಇಷ್ಟೊಂದು ಜನ ಸಂಸದರು ಏಕೆ ಮೌನವಾಗಿ ಇದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನೀರಾವರಿ ಮತ್ತು ನಗರಾಭಿವೃದ್ಧಿಗೆ ನೀಡುವ ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ರಾಜ್ಯದ ಪಾಲಿನ ತೆರಿಗೆ ಅನ್ಯಾಯವನ್ನು ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬುದನ್ನು ನಮ್ಮ ಮುಖ್ಯಮಂತ್ರಿಗಳು ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯ ಬಜೆಟ್ ಮಂಡನೆ ವೇಳೆಗೆ ಈ ಅಸಮಾನ ಹಂಚಿಕೆಗೆ ನಾವು ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಸಿ ಟಿ ರವಿ ಒಬ್ಬ ದೊಡ್ಡ ಡ್ರಾಮಾ ಮಾಸ್ಟರ್. ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸೀಮ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಟೀಕಿಸಿದ್ದಾರೆ. ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್ ಆಗಿದ್ದಾರೆ. ಅವರನ್ನು ರಾಷ್ಟ್ರೀಯ ನಾಯಕರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ಎಂದು ಭಾವಿಸಿದ್ದೆ. ಅವರ ಮಾತು, ವಿಚಾರ ನೋಡಿದ ನಂತರ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.
ಈ ಪ್ರಕರಣದಲ್ಲಿ ಅವರು ಬೇರೆ ಯಾರ ಮಾತು ಕೇಳಬೇಕಿಲ್ಲ. ಅವರ ಆತ್ಮಸಾಕ್ಷಿ ಮಾತನ್ನು ಕೇಳಲಿ. ಆ ರೀತಿ ಮಾತನಾಡಬಾರದಿತ್ತು ಎಂದು ಅವರ ಪಕ್ಷದ ನೂರು ನಾಯಕರು ನನ್ನ ಬಳಿ ಹೇಳಿದ್ದಾರೆ. ಅಚಾತುರ್ಯವಾಗಿ ಆ ರೀತಿ ಮಾತಾಡಿದ್ದೇನೆ ಕ್ಷಮೆ ಕೇಳುತ್ತೇನೆ ಎಂದಿದ್ದರೆ ಪ್ರಕರಣ ಮುಗಿಯುತ್ತಿತ್ತು. ಅದನ್ನು ಬಿಟ್ಟು ಸುಳ್ಳಿಗೆ ಸುಳ್ಳು ಸೇರಿಸಿಕೊಂಡು ಹೋದರೆ ಪ್ರಯೋಜನವಿಲ್ಲ. ಅವರ ಆರೋಪ ಸುಳ್ಳು. ಅವರದ್ದೇ ಅನೇಕ ತನಿಖಾ ತಂಡಗಳಿವೆಯಲ್ಲ ತನಿಖೆ ಮಾಡಿಸಲಿ ಎಂದು ಕಿಡಿಕಾರಿದರು.
ನಕ್ಸಲರ ಶಸ್ತ್ರಾಸ್ತ್ರ ವಿಚಾರವಾಗಿ ರವಿ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಯಾರಾದರೂ ಮುಖ್ಯಮಂತ್ರಿಗಳ ಬಳಿ ಬಂದು ಶರಣಾಗುವಾಗ ಯಾರಾದರೂ ಬಂದೂಕು ಹಿಡಿದುಕೊಂಡು ಬರುತ್ತಾರಾ? ರವಿಗೆ ಇಷ್ಟು ಸಾಮಾನ್ಯ ಪ್ರಜ್ಞೆ ಇಲ್ಲವೇ? ವೀರಪ್ಪನ್ ಅವರಿಂದ ರಾಜಕುಮಾರ್ ಅವರನ್ನು ಕರೆ ತಂದಾಗ ಬಂದೂಕು ಸಮೇತ ಕರೆತರಲಾಗಿತ್ತೆ? ಈ ವಿಚಾರವನ್ನು ನಿಭಾಯಿಸಲು ಪೊಲೀಸ್ ಇಲಾಖೆ ಇದೆ. ಅವರು ಕೆಲವು ವಿಚಾರಗಳನ್ನು ಗೌಪ್ಯವಾಗಿತ್ತುಕೊಂಡು ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರ ಕರ್ತವ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವಂತಿಲ್ಲ. ರಾಜ್ಯವನ್ನು ನಕ್ಸಲ್ ಮುಕ್ತ ಮಾಡಿರುವುದಕ್ಕೆ ಸಂತೋಷಪಡಬೇಕು. ಆದರೆ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ಚುನಾವಣೆಗೆ ಇನ್ನು ಸಮಯವಿದೆ. ಚುನಾವಣೆ ಬಂದಾಗ ರಾಜಕೀಯ ಮಾಡಲಿ. ಈಗ ರಾಜ್ಯದ ಪ್ರಗತಿ ಬಗ್ಗೆ ಚರ್ಚೆ ಮಾಡಿ, ರಾಜ್ಯ ಹಾಗೂ ದೇಶ ಉಳಿಸುವ ಕೆಲಸ ಮಾಡೋಣ ಎಂದು ತಿರುಗೇಟು ನೀಡಿದರು.












Click it and Unblock the Notifications