ಹೊಸ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆಗೆ ದಿನಾಂಕ ಫಿಕ್ಸ್!
ಲೋಕಸಭೆ ಚುನಾವಣೆ ಸಮಯದಿಂದಲೂ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎನ್ನುವ ಬಗ್ಗೆ ಒಂದು ಬಣ ಒತ್ತಾಯ ಮಾಡುತ್ತಲ್ಲೇ ಇದೆ. ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿದಾಗಿನಿಂದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಾಗೂ ಬಿಜೆಪಿಯ ಕೆಲವು ಶಾಸಕರು ಮತ್ತು ಮುಖಂಡರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದೀಗ ದೆಹಲಿ ವಿಧಾನಸಭೆ ಚುನಾವಣೆ ಸಹ ಮುಕ್ತಾಯವಾಗಿದ್ದು, ಬಿಜೆಪಿ ಹೈಕಮಾಂಡ್ ರಾಜ್ಯದ ಕಡೆ ಗಮನ ಕೊಡುವುದಕ್ಕೆ ಫ್ರೀಯಾಗಿದೆ. ಹೀಗಾಗಿ ಹೊಸ ರಾಜ್ಯಾಧ್ಯಕ್ಷರ ಘೋಷಣೆಗೆ ದಿನಾಂಕ ಫಿಕ್ಸ್ ಆಗುತ್ತಿದೆ.
ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಇದೀಗ ರಾಜ್ಯಾಧ್ಯಕ್ಷರ ಜೊತೆ ಜೊತೆಗೆ ವಿರೋಧ ಪಕ್ಷದ ನಾಯಕರನ್ನೂ ಬದಲಾಯಿಸಬೇಕು ಎನ್ನುವ ಆಗ್ರಹ ಶುರುವಾಗುತ್ತಿದೆ. ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿದ್ದರೂ ವಿವಿಧ ರಾಜ್ಯಗಳಲ್ಲಿನ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಹೆಚ್ಚು ಗಮನಹರಿಸಲು ಸಾಧ್ಯವಾಗಿರಲಿಲ್ಲ. ಇನ್ನು ದೆಹಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶ ಫೆಬ್ರವರಿ 8ಕ್ಕೆ ಪ್ರಕಟವಾಗಲಿದೆ.

ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಹೊಸ ಜೋಶ್‌ನಲ್ಲಿ ಇದೆ. ಇದೇ ಹುಮ್ಮಸ್ಸಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ / ಘೋಷಣೆಗೆ ದಿನಾಂಕ ಫಿಕ್ಸ್ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದಿಂದ ಬಿ.ವೈ ವಿಜಯೇಂದ್ರ ಅವರನ್ನು ಹೇಗಾದರೂ ಮಾಡಿ ಕೆಳಗೆ ಇಳಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಬಣದಿಂದ ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಆದರೆ, ಬಿಜೆಪಿ ಹೈಕಮಾಂಡ್ ಇದಕ್ಕೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ದೇಶದ ಪ್ರಮುಖ ರಾಜ್ಯಗಳ ಎಲ್ಲಾ ಚುನಾವಣೆಗಳು ಮುಕ್ತಾಯವಾಗಿವೆ. ಈ ವರ್ಷಾಂತ್ಯದಲ್ಲಿ ಬಿಹಾರದ ಚುನಾವಣೆ ಇದೆಯಾದರೂ ಅದಕ್ಕೆ ಸಾಕಷ್ಟು ಸಮಯವಿದೆ.
ಹೊಸ ಅಧ್ಯಕ್ಷರ ಘೋಷಣೆಗೆ ದಿನಾಂಕ ಫಿಕ್ಸ್
ಬಿಜೆಪಿಯ ಹೊಸ ಅಧ್ಯಕ್ಷರ ಘೋಷಣೆಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಫೆಬ್ರವರಿ 8ರಂದು ದೆಹಲಿ ವಿಧಾನಸಭೆ ಚುನಾವಣೆಯ ರಿಸಲ್ಟ್ ಬರಲಿದೆ. ಫೆಬ್ರವರಿ 9 ಅಥವಾ 10 ರಂದು ಕರ್ನಾಟಕ ಬಿಜೆಪಿಯ ಹೊಸ ರಾಜ್ಯಾಧ್ಯಕ್ಷರನ್ನು ಸರ್ವಾನುಮತದಿಂದ ಘೋಷಿಸುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯಾಧ್ಯಕ್ಷರ ಹುದ್ದೆಗೆ ಬಿಜೆಪಿಯಲ್ಲಿ ಚುನಾವಣೆ ನಡೆಸುವ ಪದ್ಧತಿ ಇಲ್ಲದೆ ಇರುವುದು ಸವಾಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಾಜ್ಯ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕರ್ನಾಟಕಕ್ಕೆ ಬಂದು ಹೈಕಮಾಂಡ್ ನಿರ್ಧಾರ ತಿಳಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಬಿಜೆಪಿಯ ಬಣಗಳ ಅಧ್ಯಕ್ಷರನ್ನು ದೆಹಲಿಗೆ ಬಿಜೆಪಿ ಹೈಕಮಾಂಡ್ ಕರೆಸಿಕೊಂಡಿದೆ.
ವಿಜಯೇಂದ್ರ ಮುಂದುವರಿಯುವ ಸಾಧ್ಯತೆ: ಇನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಕೇಂದ್ರದ ಬಿಜೆಪಿ ನಾಯಕರು ವಿಜಯೇಂದ್ರ ಪರವಾದ ಒಲವು ಹೊಂದಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.












Click it and Unblock the Notifications