ಸಿ.ಟಿ.ರವಿ ಪ್ರಾಣ ಉಳಿಸಿರುವುದೇ ಹೆಚ್ಚು ಎಂದರ್ಥನಾ?: ಡಿಕೆಶಿ ಹೇಳಿಕೆಗೆ ಅಶೋಕ್ ಕೆಂಡ
ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿರುವ ವಿಚಾರವಾಗಿ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ಸಿ.ಟಿ.ರವಿ ಅವರನ್ನ ಬಿಟ್ಟಿದ್ದೇ ಪುಣ್ಯ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ಸಿ.ಟಿ.ರವಿ ಅವರನ್ನ ಬಿಟ್ಟಿದ್ದೇ ಪುಣ್ಯ ಅಂದರೆ ತಮ್ಮ ಮಾತಿನ ಅರ್ಥವೇನು? ಜೀವಂತವಾಗಿ ಬಿಟ್ಟಿದ್ದೇ ಪುಣ್ಯ ಅಂತಲಾ? ಇನ್ನೂ ಪ್ರಾಣ ತೆಗೆಯದೆ ಉಳಿಸಿರುವುದೇ ಪುಣ್ಯ ಅಂತಾನಾ? ಅಥವಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರ ತಾಲಿಬಾನಿಗೆ ಸೇರಿದ್ದು ಎಂದಾ? ಅಥವಾ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ತಾಲಿಬಾನಿಗಳು ಎಂದಾ? ಕಾನೂನು ಕೈಗೆತ್ತುವ ರೌಡಿಗಳಿಗೆ, ಗೂಂಡಾಗಳಿಗೆ ನಿಮ್ಮ ಮಾತಿನಿಂದ ಏನು ಸಂದೇಶ ಹೋಗುತ್ತದೆ ಎನ್ನುವ ಪ್ರಜ್ಞೆ ತಮಗಿದೆಯೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ತಾವೊಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು, ರಾಜ್ಯದ ಉಪಮುಖ್ಯಮಂತ್ರಿಗಳು. ಮುಂದೊಂದು ದಿನ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿರುವವರು. ತಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು. ತಾವು ಮುಖ್ಯಮಂತ್ರಿ ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಏನಾಗುತ್ತೆ ಅಂತ ತಮ್ಮ ಮಾತುಗಳೇ ಸೂಚನೆ ಕೊಡುತ್ತಿವೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎನ್ನುವುದನ್ನ ಮರೆಯಬೇಡಿ. ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ. ಕನಿಷ್ಠ ಪಕ್ಷ ಸಾರ್ವಜನಿಕವಾಗಿ ಮಾತನಾಡುವಾಗ ಆದ್ರೂ ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಿ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕ ಅಕ್ಷರಶಃ ರೌಡಿಗಳ ರಾಜ್ಯವಾಗಿದೆ. ಸಿಎಂ ಸಿದ್ದರಾಮಯ್ಯನವರೇ..ಬಂಧನವಾಗಿ ಪೊಲೀಸ್ ವಶದಲ್ಲಿರುವ ಒಬ್ಬ ಪರಿಷತ್ ಸದಸ್ಯನಿಗೆ ತಮ್ಮ ಸರ್ಕಾರ ರಕ್ಷಣೆ ಕೊಡಲು ಆಗುತ್ತಿಲ್ಲ ಅಂದ ಮೇಲೆ ನಿಮ್ಮ ಸರ್ಕಾರವನ್ನು ರೌಡಿಗಳು, ಗೂಂಡಾಗಳು ಹೈಜಾಕ್ ಮಾಡಿರಬೇಕು ಅಥವಾ ಸರ್ಕಾರದ ಭಾಗವಾಗಿರುವವರೇ ರೌಡಿಗಳು, ಗೂಂಡಾಗಳಾಗಿರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ದೇಶದ್ರೋಹಿಗಳು ಯಾವುದೇ ಕಾನೂನು ಕ್ರಮವಿಲ್ಲದೆ ಹೊರಗಿದ್ದಾರೆ. ಆ ದೇಶದ್ರೋಹಿಗಳನ್ನ ಸಮರ್ಥನೆ ಮಾಡಿಕೊಂಡು, ಸುದ್ದಿ ಬಿತ್ತರಿಸಿದ ಮಾಧ್ಯಮಗಳ ಮೇಲೆ ಹೌಹಾರಿದವರು ಇನ್ನೂ ರಾಜಾರೋಷವಾಗಿ ಮಂತ್ರಿಗಳಾಗಿ ಗೂಟದ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಎರಡನೇ ವಿಭಾಗದ ಸಹಾಯಕ (ಎಸ್‌ಡಿಎ) ರುದ್ರೇಶ್ ಯಾದವಣ್ಣನವರ್ ಅವರ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಿಎ ವಿರುದ್ಧ ದೂರಿದೆ. ಆ ತನಿಖೆ ಎಲ್ಲಿವರೆಗೆ ಬಂತು? ಎಷ್ಟು ಜನರ ಬಂಧನವಾಗಿದೆ? ನಾಚಿಕೆ ಆಗಬೇಕು ಈ ಗೂಂಡಾಗಳ, ರೌಡಿಗಳ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ಅಧಿವೇಶನದ ಕಲಾಪದ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ದೂರಿನ ಮೇರೆಗೆ ಸಿಟಿ ರವಿ ಅವರನ್ನು ಬಂಧಿಸಲಾಗಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧವೂ ಸಿ.ಟಿ.ರವಿ ಅವರು ಪ್ರತಿದೂರು ನೀಡಿದ್ದಾರೆ.












Click it and Unblock the Notifications