ನೀರು ಹರಿಸುವ ವಿಚಾರದಲ್ಲಿ ತಮಿಳುನಾಡು ಆತುರಪಡುವ ಅಗತ್ಯವಿಲ್ಲ: ಡಿ.ಕೆ. ಶಿವಕುಮಾರ್
ಬೆಂಗಳೂರು, ಆಗಸ್ಟ್ 14: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ನಾವು ನ್ಯಾಯಾಲಯದ ನೀರು ಹಂಚಿಕೆ ಸೂತ್ರವನ್ನು ಗೌರವಿಸುತ್ತೇವೆ. ತಮಿಳುನಾಡಿನವರು ಇಷ್ಟು ಆತುರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಅಗತ್ಯ ಇರಲಿಲ್ಲ ಎಂದು ಬೃಹತ್ ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕೆಂಪೇಗೌಡ ಬಡಾವಣೆ ಪರಿಶೀಲನೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ರಾಜ್ಯಗಳ ಹಿತ ಕಾಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಮಿಳುನಾಡು ಸರ್ಕಾರ ಕಾವೇರಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅಂಗೀಕಾರ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮಾತು ಮುಂದುವರಿಸಿದ ಅವರು, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಹಂಗಾಮಿನಲ್ಲಿ ಬೀಳುತ್ತಿರುವ ಮಳೆ ಹಾಗೂ ಆಣೆಕಟ್ಟುಗಳಿಗೆ ಒಳಹರಿವು ಪ್ರಮಾಣ ಆಧರಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಮಂಡ್ಯದ ರೈತರಿಗೆ ಯಾವುದೇ ರೀತಿಯ ಬಿತ್ತನೆ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಈಗಾಗಲೇ ಮನವಿ ಮಾಡಿದ್ದಾರೆ.
ನಮ್ಮ ಅಗತ್ಯ ಪ್ರಮಾಣದ ಕುಡಿಯುವ ನೀರು ಇಟ್ಟುಕೊಂಡು ತಮಿಳುನಾಡಿಗೆ ನೀರು ನೀಡಲು ಬದ್ಧರಾಗಿದ್ದೇವೆ. ನೀರು ಹರಿಸುವ ಸಂಪೂರ್ಣ ಅಧಿಕಾರ ಪ್ರಾಧಿಕಾರದ ಬಳಿ ಇದೆ. ನಾವು ಎರಡೂ ರಾಜ್ಯದ ರೈತರನ್ನು ಉಳಿಸಬೇಕಿದೆ. ಎಲ್ಲರೂ ವಾಸ್ತವಾಂಶ ಅರಿತು ಹೆಜ್ಜೆ ಇಡಬೇಕಿದೆ. ನಮ್ಮ ರೈತರ ಜಮೀನು ಒಣಗಬಾರದು. ಅದೇ ರೀತಿ ತಮಿಳುನಾಡಿನ ರೈತರ ಜಮೀನು ಒಣಗಬಾರದು. ಹಾಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.
ತಮಿಳುನಾಡಿನ ಅರ್ಜಿ ವಿಚಾರವಾಗಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ. ನಾವು ಯಾವುದೇ ಸಂಘರ್ಷಕ್ಕೆ ಮುಂದಾಗುವ ಮನಸ್ಥಿತಿ ಇಲ್ಲ. ನಾವೆಲ್ಲರೂ ಅಣ್ಣತಂಮ್ಮಂದಿರಂತೆ. ಸಂಘರ್ಷಕ್ಕೆ ಇಳಿಯದೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಕೆಂಪೇಗೌಡ ಲೇಔಟ್‌ಗೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್
ಕೆಂಪೇಗೌಡ ಲೇಔಟ್‌ನಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಈವರೆಗೂ ಯಾರೊಬ್ಬರಿಗೂ ಅನುಕೂಲವಾಗುವಂತೆ ಕಾಮಗಾರಿ ನಡೆದಿಲ್ಲ. ಕೆಂಪೇಗೌಡ ಲೇಔಟ್ ಕೆಲವು ಪ್ರದೇಶ ವೀಕ್ಷಣೆ ಮಾಡಿದ್ದು, ಇಲ್ಲಿನ ವ್ಯವಸ್ಥೆ ಬಗ್ಗೆ ಸಮಾಧಾನ ಇಲ್ಲ. ಇದುವರೆಗೂ ಭೂಮಿ ಕಳೆದುಕೊಂಡವರು, ನಿವೇಶನದಾರರು, ಬಿಡಿಎ ಸೇರಿದಂತೆ ಯಾರೊಬ್ಬರಿಗೂ ಅನುಕೂಲವಾಗುವಂತಹ ಕೆಲಸ ಆಗಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸ್ಥಳೀಯ ಶಾಸಕರು ಅನೇಕ ಸಮಸ್ಯೆ ಹೇಳಿದ್ದಾರೆ. ಈ ಭಾಗದಲ್ಲಿ ವಿದ್ಯುತ್ ಸಂಪರ್ಕ, ಚರಂಡಿ, ಕುಡಿಯುವ ನೀರು ಪೂರೈಕೆ ಸೌಲಭ್ಯ ನೀಡಬೇಕು ಎಂದು ಕೇಳಿದ್ದಾರೆ. ನಿವೇಶನದಾರರು ಕೂಡ ಮೂಲಭೂತ ಸೌಕರ್ಯ ಕೊರತೆಯಿಂದ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತಮ್ಮದೇ ಆದ ಉತ್ತರ ನೀಡಿದ್ದಾರೆ. ಈ ಲೇಔಟ್ ನಲ್ಲಿ ಸರ್ಕಾರದಿಂದ ಕೇವಲ 60% ಭೂಮಿ ಸ್ವಾಧೀನ ಆಗಿದೆ. ಪರಿಹಾರ ಕ್ರಮದ ಬಗ್ಗೆ ಕಂದಾಯ ಇಲಾಖೆ ಹಾಗೂ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇನೆ ಎಂದರು.
ಇಲ್ಲಿ ಅನೇಕ ಸಮಸ್ಯೆಗಳಿವೆ, ಅವುಗಳನ್ನು ಬಗೆಹರಿಸಬೇಕು ಎಂದು ಜನರು ಮನವಿ ಮಾಡಿದ ಹಿನ್ನೆಲೆಯಲ್ಲಿ ನಾನು ಇಂದು ಕೆಂಪೇಗೌಡ ಲೇಔಟ್‌ಗೆ ಭೇಟಿ ನೀಡಿದ್ದೇನೆ. ಇಲ್ಲಿನ ಜನ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಭೂಮಿ ಕಳೆದುಕೊಂಡವರು, ಅಪಾರ್ಟ್ ಮೆಂಟ್, ನಿವೇಶನದಾರರು ಎಲ್ಲರಿಗೂ ನ್ಯಾಯ ಒದಗಿಸಿಕೊಡಬೇಕಿದೆ. ಈ ಪ್ರದೇಶ ವೀಕ್ಷಣೆ ಮಾಡಿ ನಂತರ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತೇನೆ. ಯಶವಂತಪುರ ಕ್ಷೇತ್ರದ ಮಹಾಜನತೆ ಮುಂದೆ ಒಂದು ವಿಚಾರ ಹೇಳಲು ಇಚ್ಛಿಸುತ್ತೇನೆ. ನೀವು ನಿಮ್ಮ ಶಾಸಕರನ್ನು ಆಯ್ಕೆ ಮಾಡಿದ್ದೀರಿ. ಆದರೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಏನೆಲ್ಲಾ ಸಹಕಾರ ನೀಡಬೇಕೋ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
ಇಲ್ಲಿರುವ ಅನೇಕರ ಜೊತೆ ನಮಗೆ ಹಳೇ ಸಂಬಂಧವಿದೆ. ಕೆಲವು ಸಂದರ್ಭದಲ್ಲಿ ಹೆಚ್ಚು ಕಮ್ಮಿ ಆಗಿದ್ದು, ಅದನ್ನು ಸರಿ ಮಾಡೋಣ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕೆಂಪೇಗೌಡ ನಗರವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಕೆ.ಎಂ ನಾಗರಾಜು ಅವರು ಈ ಭಾಗದಲ್ಲಿ ಸೇವೆ ಮಾಡಲು ದೇವಸ್ಥಾನಕ್ಕೆ ಹೊಸ ರೂಪ ನೀಡಿದ್ದಾರೆ. ದೊಡ್ಡ ಕಟ್ಟಡ ಬೇಡ, ಕೃಷ್ಣನಿಗೆ ಅತಿ ಪ್ರಿಯವಾದದ್ದು ಬೃಂದಾವನ. ಹೀಗಾಗಿ ಗಿಡಗಳ ಮಧ್ಯೆ ಚಿಕ್ಕ ದೇವಾಲಯ ಕಟ್ಟಲು ಮುಂದಾಗಿದ್ದಾರೆ ಎಂದರು.












Click it and Unblock the Notifications