ಈ ಬೆಂಬಲ ಸಿಗದೆ ಇದ್ದರೆ ಎಚ್.ಡಿ ದೇವೇಗೌಡ ಮುಖ್ಯಮಂತ್ರಿ ಆಗುತ್ತಿದ್ದರೇ: ಡಿ.ಕೆ ಶಿವಕುಮಾರ್ ಪ್ರಶ್ನೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಒಕ್ಕಲಿಗ ಸಮುದಾಯದ ಪಾತ್ರ ಮತ್ತು ಎಚ್.ಡಿ. ದೇವೇಗೌಡರ ಮುಖ್ಯಮಂತ್ರಿ ಸ್ಥಾನದ ಕುರಿತು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಚರ್ಚೆಗೆ ನಾಂದಿ ಹಾಡಿವೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್, "ಕುಮಾರಸ್ವಾಮಿ ದೊಡ್ಡವರು, ಅವರಿಗೆ ಯಾರ ಬೆಂಬಲವೂ ಬೇಕಿಲ್ಲ. ಒಕ್ಕಲಿಗರ ಮಠ, ಒಕ್ಕಲಿಗರ ಸಂಘ ಅಥವಾ ಒಕ್ಕಲಿಗ ಜಾತಿಯನ್ನು ಅವರು ಎಂದಿಗೂ ಬಳಸಿಕೊಂಡವರೇ ಅಲ್ಲ," ಎಂದು ವ್ಯಂಗ್ಯವಾಡಿದ್ದಾರೆ.

ಸ್ವಾಮೀಜಿಗಳ ಬೆಂಬಲದ ಕುರಿತು ಕುಮಾರಸ್ವಾಮಿ ಹೇಳಿದ್ದ "ಯಾರ ಬೆಂಬಲವನ್ನೂ ಕೇಳಿಲ್ಲ" ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, "ನಾನು ಬೆಂಬಲ ಕೊಡಿ ಎಂದು ಕೇಳಿದ್ದೇನಾ? ನಾನು ಕೂಡ ಯಾರ ಬೆಂಬಲವನ್ನೂ ಕೇಳಿಲ್ಲ. ಪ್ರೀತಿಯಿಂದ ಯಾರಾದರೂ ಮಾತನಾಡಿದರೆ ಬೇಡ ಎನ್ನಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.
ತಾನು ಒಂದು ಸಮುದಾಯದಲ್ಲಿ ಜನಿಸಿದ್ದರೂ, ಎಲ್ಲಾ ಸಮುದಾಯಗಳನ್ನು ಪ್ರೀತಿಸಿ ಗೌರವಿಸುವುದಾಗಿ ಶಿವಕುಮಾರ್ ಹೇಳಿದ್ದಾರೆ. "ಬಾಳೆಹೊನ್ನೂರು ಸ್ವಾಮೀಜಿ, ಶ್ರೀಶೈಲ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ನನ್ನ ಪರವಾಗಿ ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಪ್ರೀತಿ, ವಿಶ್ವಾಸ ಇದೆ. ಹಾಗಾಗಿಯೇ ಅವರು ಮಾತನಾಡಿದ್ದಾರೆ," ಎಂದು ವಿವರಿಸಿದರು.
ಜೈನ ಸ್ವಾಮೀಜಿಗಳು ಸಾರ್ವಜನಿಕ ಸಮಾವೇಶದಲ್ಲಿ ತಮಗೆ ಆಶೀರ್ವದಿಸಿದ್ದು, ಧರ್ಮಸ್ಥಳಕ್ಕೂ ಭೇಟಿ ನೀಡಿದಾಗ ಬೆಂಬಲ ಸಿಕ್ಕಿದ್ದನ್ನು ಅವರು ಸ್ಮರಿಸಿದ್ದಾರೆ. "ಅದನ್ನು ತಪ್ಪು ಎನ್ನಲು ಸಾಧ್ಯವೇ?" ಎಂದು ಶಿವಕುಮಾರ್ ಪ್ರಶ್ನಿಸಿದರು.
ಸ್ವಾಮೀಜಿಗಳು ತಮ್ಮ ಪರವಾಗಿ ಧ್ವನಿ ಎತ್ತಿದ್ದಕ್ಕೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಕೇಳಿದಾಗ, "ಪಾಪ ಕುಮಾರಣ್ಣನಿಗೆ ಒಕ್ಕಲಿಗರ ಎರಡನೇ ಮಠ ಹೇಗೆ ಆಯಿತು ಎನ್ನುವುದು ಗೊತ್ತಿಲ್ಲವೇ? ಅದನ್ನು ಕಟ್ಟಿದವರು ಯಾರು? ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳ ಬೆಂಬಲ ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿತ್ತೇ?" ಎಂದು ಶಿವಕುಮಾರ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಮುಂದುವರಿದು, ದೇವೇಗೌಡರ ಪರವಾಗಿ ಅಂದು ಸ್ವಾಮೀಜಿಗಳು ರಸ್ತೆಗೆ ಇಳಿದಿರಲಿಲ್ಲವೇ ಎಂದು ಶಿವಕುಮಾರ್ ನೆನಪಿಸಿದ್ದಾರೆ. "ಮುಂದೆ ಸದಾನಂದ ಗೌಡರಿಗೆ ತೊಂದರೆಯಾದಾಗ ಸ್ವಾಮೀಜಿಗಳು ಸುಮ್ಮನೆ ಕೂತಿದ್ದರಾ? ಕೆಲವು ಸಂದರ್ಭಗಳಲ್ಲಿ ಸ್ವಾಮೀಜಿಗಳು ಮಾತನಾಡುತ್ತಾರೆ. ಅದರಲ್ಲಿ ತಪ್ಪೇನಿದೆ?" ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು. ಅಲ್ಲದೆ, "ಬೇರೆ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿದಾಗ ನಾನು ಬೇಸರ ಮಾಡಿಕೊಂಡಿದ್ದೇನಾ?" ಎಂದೂ ಅವರು ಕೇಳಿದ್ದಾರೆ.












Click it and Unblock the Notifications