D. K. Shivakumar: ಡಿ.ಕೆ ಶಿವಕುಮಾರ್ ಶಕ್ತಿ ಕುಗ್ಗಿಸಲು ಪಕ್ಷದೊಳಗೆ ನಡೆಯುತ್ತಿದೆಯಾ ತಂತ್ರ?

ಬೆಂಗಳೂರು, ಫೆಬ್ರವರಿ 12: ಒಂದೆಡೆ ರಾಜ್ಯ ಬಿಜೆಪಿಯಲ್ಲಿ ಬಣಜಗಳಗಳು ತಾರಕಕ್ಕೇರಿ ಹಾದಿ ಬೀದಿಯಲ್ಲಿ ನಿಂತು ನಾಯಕರು ಒಬ್ಬರನೊಬ್ಬರು ಬೈದಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಆಡಳಿತರೂಢ ಕಾಂಗ್ರೆಸ್ ನಲ್ಲಿಯೂ ಬಣಬಡಿದಾಟ ಬಹಳ ಜೋರಾಗಿಯೇ ನಡೆಯುತ್ತಿದೆ. ಕೈನಾಯಕರು ಕಮಲ ನಾಯಕರಂತೆ ಬೈದಾಡಿಕೊಳ್ಳದಿದ್ದರೂ ಒಳಗಿನೊಳಗೆ ಏನೆಲ್ಲ ಮಾಡಬೇಕೋ ಅದೆಲ್ಲವನ್ನು ಮಾಡುತ್ತಿದ್ದು, ಅದು ಅವರು ಅಂದುಕೊಂಡಂತೆ ರಹಸ್ಯವಾಗಿಯೇ ಇದೆಯಾದರೂ ಅದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಕ್ಕರ್ ಕೊಡಲು ಮಾಡುತ್ತಿರುವ ಸರ್ಕಸ್ ಎಂಬುದು ಗೊತ್ತಾಗುತ್ತಿದೆ.

2023ರಲ್ಲಿ ಅಂದಿನ ಆಡಳಿತರೂಢ ಬಿಜೆಪಿಯನ್ನು ಗುಡಿಸಿ ಹಾಕಿ ಅತ್ಯಧಿಕ ಬಹುಮತದೊಂದಿಗೆ ಕಾಂಗ್ರೆಸ್ ವಿಜೃಂಭಿಸಿದಾಗ ಮುಖ್ಯಮಂತ್ರಿ ಆಗುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಈ ವೇಳೆ ಹೈಕಮಾಂಡ್ ದೆಹಲಿಗೆ ಕರೆಯಿಸಿಕೊಂಡು ಇಬ್ಬರು ನಾಯಕರನ್ನು ಒಟ್ಟಿಗೆ ಕೂರಿಸಿ ಸಂಧಾನ ಮಾಡಿತ್ತು. ಈ ವೇಳೆ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕುರಿತಂತೆ ಮಾತುಕತೆಯಾಗಿತ್ತು ಎನ್ನಲಾಗಿದ್ದು, ಆ ನಂತರ ಎರಡೂವರೆ ವರ್ಷಗಳ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರು ಹಸ್ತಾಂತರ ಮಾಡಬೇಕು ಎಂಬ ಅಂತೆ ಸುದ್ದಿಗಳು ಹರಿದಾಡಿತ್ತು.

D K Shivakumar Navigates Internal Power Struggle in Congress Party Amidst Political Challenges

ಕಾಂಗ್ರೆಸ್ ವಲಯದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿಗಳು ಯಾರ ಬಳಿಯೂ ಇಲ್ಲ. ಅವತ್ತು ಹೈಕಮಾಂಡ್ ಏನು ತೀರ್ಮಾನ ಕೈಗೊಂಡಿತು ಎಂಬುದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ತಿಳಿದಿದೆ. ಆದರೆ ಅಂತಹದೊಂದು ನಿರ್ಧಾರ ಆಗಿದೆ ಎಂಬುದನ್ನು ಸೂಕ್ಷ್ಮವಾಗಿ ರಾಷ್ಟ್ರೀಯ ಚಾನೆಲ್‌ವೊಂದಕ್ಕೆ ಸಂದರ್ಶನ ವೇಳೆ ಡಿ.ಕೆ.ಶಿವಕುಮಾರ್ ಬಾಯಿ ಬಿಟ್ಟಿದ್ದರು. ಆದರೆ ಅದಕ್ಕೂ ಮುನ್ನವೇ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸಿಎಂ ಆಗಿರುವಾಗಲೇ ಸಿಎಂ ಸ್ಥಾನದ ಕುರಿತಂತೆ ಚರ್ಚೆಗಳು, ಹೇಳಿಕೆಗಳು ಶುರುವಾಗಿದ್ದವು. ಡಿ.ಕೆ.ಶಿವಕುಮಾರ್ ಬಣದವರು ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಮಾಡಿದರೆ ಮತ್ತೊಂದು ಕಡೆ ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮಯ್ಯರವರೇ ಪೂರ್ಣಾವಧಿಯ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿದ್ದರು. ಇದೆಲ್ಲವನ್ನು ನಾವೆಲ್ಲರೂ ನೋಡಿದ್ದೇವೆ.

ಡಿಕೆಶಿಗೆ ಕಾಂಗ್ರೆಸ್ ಸಾರಥ್ಯದಲ್ಲಿ ಯಶಸ್ಸು

ರಾಜಕೀಯವಾಗಿ ಡಿ.ಕೆ.ಶಿವಕುಮಾರ್ ಅವರನ್ನು ವಿರೋಧಿಸುವವರು ಇರಬಹುದು. ಆದರೆ ಕಾಂಗ್ರೆಸ್ ಹೊರತಾಗಿಯೂ ಬೇರೆ ಪಕ್ಷದ ನಾಯಕರು ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿದ್ದಾರೆ ಎನ್ನುವುದನ್ನು ತಳ್ಳಿಹಾಕಲಾಗದು. ಇನ್ನು ಒಕ್ಕಲಿಗರು ನಮ್ಮ ಸಮುದಾಯದ ನಾಯಕ ಸಿಎಂ ಆಗಲಿ ಎಂದೇ ಒತ್ತಾಯ ಮಾಡುತ್ತಾ ಬರುತ್ತಿದ್ದಾರೆ. ಇವತ್ತು ಕಾಂಗ್ರೆಸ್ ನಲ್ಲಿ ಡಿಕೆಶಿ ಬೆಂಬಲಿಸುವ ದೊಡ್ಡ ನಾಯಕರ ಪಡೆಯಿದೆ. ಅವರೆಲ್ಲರೂ ಹೋದಲ್ಲಿ ಬಂದಲ್ಲಿ ಡಿಕೆಶಿ ಮುಂದಿನ ಸಿಎಂ ಎಂಬ ಹೇಳಿಕೆ ನೀಡುವ ಮೂಲಕ ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ. ಸಿದ್ದರಾಮಯ್ಯರಿಗೂ ಮುಜುಗರ ತರುತ್ತಿದ್ದಾರೆ.

D K Shivakumar Navigates Internal Power Struggle in Congress Party Amidst Political Challenges

ಇನ್ನು ಸಿಎಂ ಆಗುವುದು ಡಿಕೆಶಿ ಅವರ ರಾಜಕೀಯದ ಕನಸಿನಲ್ಲಿ ಒಂದು ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಸುಮಾರು ನಲ್ವತ್ತು ವರ್ಷಗಳ ರಾಜಕೀಯ ಬದುಕಿನಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಪಕ್ಷ ಸಂಘಟನೆಯಾಗುವಲ್ಲಿ ಅವರ ಶ್ರಮವಿದೆ. ಅದರಲ್ಲೂ 2023ರಲ್ಲಿ ಅತ್ಯಧಿಕ ಬಹುಮತ ಪಡೆದು ಪಕ್ಷ ಅಧಿಕಾರ ಹಿಡಿಯುವಲ್ಲಿಯೂ ಅವರ ರಾಜಕೀಯ ತಂತ್ರಗಾರಿಕೆ ಕೆಲಸ ಮಾಡಿದೆ. ಅದಕ್ಕಿಂತ ಹೆಚ್ಚಾಗಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವಲ್ಲಿಯೂ ಅವರು ಸಂಪನ್ಮೂಲಗಳನ್ನು ಚೆಲ್ಲಿದ್ದಾರೆ. ಕಷ್ಟಕಾಲದಲ್ಲಿ ಪಕ್ಷದ ಸಾರಥ್ಯವಹಿಸಿಕೊಂಡ ಅವರು ಅದನ್ನು ಅಧಿಕಾರಕ್ಕೇರುವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಲ್ಲಿ ಯಾರು ಏನೇ ಹೇಳಿದರೂ ಅವರ ಶ್ರಮವಂತು ಇದ್ದೇ ಇದೆ.

ರಾಜಕೀಯ ತಂತ್ರಗಾರಿಕೆಯ ನಾಯಕ

ಒಂದು ವೇಳೆ ಸಿಎಂ ಅಧಿಕಾರ ಹಸ್ತಾಂತರದ ಒಪ್ಪಂದ ಆಗಿದೆ ಎನ್ನುವುದಾದರೇ ಈ ವರ್ಷದ ಅಂತ್ಯದೊಳಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ ಅದಕ್ಕೂ ಮುನ್ನ ಈಗಿನ ಪರಿಸ್ಥಿತಿ ಮತ್ತು ಕಾಂಗ್ರೆಸ್ ನೊಳಗೆ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದರೆ ಶೀಘ್ರದಲ್ಲಿಯೇ ಅವರ ಬಳಿಯಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದು ಬೇರೆ ನಾಯಕರನ್ನು ಪ್ರತಿಷ್ಠಾಪಿಸಬೇಕೆನ್ನುವ ಹಪಾಹಪಿ ಎದ್ದು ಕಾಣಿಸುತ್ತಿದೆ. ಪಕ್ಷದ ವಿಚಾರಕ್ಕೆ ಸಂಬಂಧಿಸಿದಂತೆ ನೋಡಿದ್ದೇ ಆದರೆ ಡಿಸಿಎಂ ಸ್ಥಾನಕ್ಕಿಂತ ಹೆಚ್ಚಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಜವಬ್ದಾರಿ ಮತ್ತು ಅಧಿಕಾರವಿದೆ.

D K Shivakumar Navigates Internal Power Struggle in Congress Party Amidst Political Challenges

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ಡಿ.ಕೆ.ಶಿವಕುಮಾರ್ ಅವರಿಂದ ಪಡೆದುಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಒಂದು ವೇಳೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟರೂ ಪಕ್ಷಕ್ಕೆ ಸಂಬಂಧಿಸಿದ ಅಧಿಕಾರವು ಸಿದ್ದರಾಮಯ್ಯ ಅವರ ಬಣದ ನಾಯಕರ ಬಳಿ ಉಳಿಯಲಿದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆಯುವ ಸಲುವಾಗಿ ಸಿದ್ದರಾಮಯ್ಯ ಬಣದ ನಾಯಕರು ದೆಹಲಿ ಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಬಣದ ನಾಯಕರು ಶಕ್ತಿ ಪ್ರದರ್ಶನ ಮಾಡಲು ಹಲವು ರೀತಿಯಲ್ಲಿ ಪ್ರಯತ್ನವನ್ನು ಮಾಡಿದರೂ ಅದೆಲ್ಲವನ್ನೂ ಕಾಂಗ್ರೆಸ್ ಕಾರ್ಯಕ್ರಮವಾಗಿ ಪರಿವರ್ತಿಸುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ!

ಇದು ಸಿದ್ದರಾಮಯ್ಯ ಬಣದ ನಾಯಕರನ್ನು ಕೆರಳಿಸಿದೆ. ಹೀಗಾಗಿಯೇ ಘಟಾನುಘಟಿ ನಾಯಕರು ದೆಹಲಿ ಯಾತ್ರೆ ಮಾಡಿ ಹೈಕಮಾಂಡ್ ನ ನಾಯಕರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸುತ್ತಿದ್ದಾರೆ. ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ದೇಶದಾದ್ಯಂತ ಕೆಲವು ರಾಜ್ಯಗಳಲ್ಲಿ ಹೊಸದಾಗಿ ರಾಜ್ಯಾಧ್ಯಕ್ಷರ ನೇಮಕ ಮಾಡುತ್ತಿರುವ ಬಗ್ಗೆ ಹೇಳಿದ್ದಾರೆ. ಆದರೆ ಅದರಲ್ಲಿ ಕರ್ನಾಟಕ ಇದೆಯಾ ಗೊತ್ತಿಲ್ಲ. ಇಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅವರ ಸ್ವ ಇಚ್ಚೆಯಿಂದ ಬಿಟ್ಟುಕೊಡುವ ಬದಲಿಗೆ ಅವರಿಂದ ಬಲತ್ಕಾರವಾಗಿ ಕಸಿದುಕೊಳ್ಳಲು ನಡೆಯುತ್ತಿರುವ ಕಸರತ್ತು ನೋಡಿದರೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಮುಂದಿನ ಬೆಳವಣಿಗೆ ಏನು ಎಂಬುದನ್ನು ಕಾದುನೋಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+