R Dhruvanarayan : ಧ್ರುವ ನನ್ನ ಸಹೋದರನಂತಿದ್ದರು: ಧ್ರುವನಾರಾಯಣ ನೆನೆದು ಗಳಗಳನೆ ಅತ್ತ ಡಿ.ಕೆ ಶಿವಕುಮಾರ್
ಬೆಂಗಳೂರು, ಮಾರ್ಚ್ 11: ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ದೇಶದ ರಾಜಕಾರಣದ ಇತಿಹಾಸಕ್ಕೆ ಧ್ರುವನಾರಾಯಣ ಅವರ ಜನಸೇವೆ ಮತ್ತು ರಾಜಕಾರಣ ಒಂದು ಇತಿಹಾಸ. ಧ್ರುವನಾರಾಯಣ ಅವರು ನಿನ್ನೆ ಅವರ ಜೊತೆ ಮಾತನಾಡಿದ್ದೇನೆ. ಡಾಕ್ಟರ್ ಬೆಳಗ್ಗೆ ನನಗೆ ಕರೆ ಮಾಡಿ ವಿಷಯ ತಿಳಿಸಿದರು. ಮೊದಲು ಆಸ್ಪತ್ರೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತಾ ತಿಳಿಸಿದ್ದರು. ರಕ್ತಸ್ರಾವದಿಂದ ಅವರು ಕೊನೆಯುಸಿರೆಳೆದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದು:ಖ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವಿಗೂ ಹುಟ್ಟಿಗೂ ನಡುವೆ ಒಂದು ಮುಕ್ತ ಜೀವನವನ್ನು ಧ್ರುವನಾರಾಯಣ ನಡೆಸಿದ್ದಾರೆ. ಹೊರಲಾರದಷ್ಟು ಜವಾಬ್ದಾರಿ ಕೊಟ್ಟು, ಮರೆಯಲಾಗದಷ್ಟು ಬಾಂಧವ್ಯ ಕೊಟ್ಟು, ಅದೆಷ್ಟು ಆಟವನ್ನು ಆಡುತ್ತಿದ್ದಾನೆ ಈ ಭಗವಂತ ಎನಿಸುತ್ತಿದೆ. ದೇವರು ಇಷ್ಟೊಂದು ಕ್ರೂರಿ ಆಗಬಾರದಿತ್ತು. ದೇವರು ಇದ್ದಾನೋ ಇಲ್ಲವೋ ಅನ್ನುವಷ್ಟು ಅನುಮಾನವನ್ನು ಧ್ರುವನಾರಾಯಣ ಸಾವು ತಂದಿದೆ. ಧ್ರುವ ನಮ್ಮ ಕಾರ್ಯಾಧ್ಯಕ್ಷ ಎಂಬುದಕ್ಕಿಂತ ನಮ್ಮ ಕುಟುಂಬದ ಸದಸ್ಯ, ಸಹೋದರನಂತಿದ್ದರು. ನಮ್ಮ ಹೃದಯಕ್ಕೆ ಹತ್ತಿರವಾಗಿದ್ದಾರೆ. ಅವರ ಅಗಲಿಕೆ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಹುಟ್ಟು ಸಾವಿನ ನಡುವೆ ಇರುವ ಸಮಯವನ್ನು ಹೇಗೆ ಸದ್ಬಳಕೆ ಮಾಡಬಹುದು ಎನ್ನುವುದಕ್ಕೆ ಧ್ರುವನಾರಾಯಣ್ ಉತ್ತಮ ಸಾಕ್ಷಿ. ಒಳ್ಳೆಯತನಕ್ಕೆ ಅವರು ಮತ್ತೊಂದು ಉದಾಹರಣೆ. ಅವರ ಸಾರ್ಥಕ ಬದುಕು ಆದರ್ಶಪ್ರಾಯ. ಅವರ ಅಗಲಿಕೆ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ರಾಜಕೀಯ ರಂಗಕ್ಕೆ ಬಹುದೊಡ್ಡ ನಷ್ಟ.
ಅವರು ಯಾವುದೇ ಜವಾಬ್ದಾರಿ ತೆಗೆದುಕೊಂಡರೂ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಬಹಳ ಸಜ್ಜನ ರಾಜಕಾರಣಿ. ಮಾನವೀಯತೆ, ಸ್ನೇಹ, ಬೇರೆಯವರನ್ನು ನೋಯಿಸದ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ. ಎಲ್ಲ ಸಮಾಜ, ಧರ್ಮದವರನ್ನು ಸಮಾನವಾಗಿ ಪ್ರೀತಿಯಿಂದ ಕಾಣುತ್ತಿದ್ದರು. ಎಷ್ಟೇ ಕಷ್ಟವಿದ್ದರೂ ಬಹಳ ತಾಳ್ಮೆಯಿಂದ ಕೆಲಸ ಮಾಡುತ್ತಿದ್ದರು. ಅವರು ಪಕ್ಷದ ದೊಡ್ಡ ಆಸ್ತಿ ಆಗಿದ್ದರು. ರಾಜ್ಯ ರಾಜಕೀಯದ ಇತಿಹಾಸದಲ್ಲಿ ಧ್ರುವನಾರಾಯಣ ಅವರ ಸೇವೆ ಒಂದು ಉತ್ತಮ ಅಧ್ಯಾಯ ಎಂದರು.
ಅವರ ಅಗಲಿಕೆ ಸುದ್ದಿ ತಿಳಿದ ಸೋನಿಯಾ ಗಾಂಧಿ ಅವರು ನನಗೆ ಕರೆ ಮಾಡಿ ನಂಬಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವಿಚಾರ ನಮಗೂ ನಂಬಲು ಸಾಧ್ಯವಾಗುತ್ತಿಲ್ಲ. ಇಂದು ನಡೆಯಬೇಕಿದ್ದ ರಾಮನಗರದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಿದ್ದೇವೆ. ಈ ನಷ್ಟವನ್ನು ತಡೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಮಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಸೇವೆ, ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ರಾಜ್ಯ ಪ್ರವಾಸ ಮಾಡಿದ್ದರು. ಚಾಮರಾಜನಗರ ಆಕ್ಸಿಜನ್ ದುರಂತ ಸಂದರ್ಭದಲ್ಲಿ ಅವರ ಸ್ಪಂದನೆ, ಬದ್ಧತೆ ಎಲ್ಲವೂ ಇತಿಹಾಸ ಪುಟ ಸೇರಲಿದೆ ಎಂದರು.
ಇನ್ನು ಅವರ ಅಗಲಿಕೆ ನೋವು ನನ್ನನ್ನು ಆವರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನಮ್ಮೆಲ್ಲರಿಗೂ ಭಗವಂತ ನೀಡಲಿ ಎಂದು ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಮೈಸೂರಿನಲ್ಲಿ ಧ್ರುವನಾರಾಯಣ ವಿಧಿವಶ
ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ ಹೃದಯಾಘಾತದಿಂದ ಶನಿವಾರ ಮೈಸೂರಿನಲ್ಲಿ ನಿಧನರಾದರು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರದ ಧ್ರುವನಾರಾಯಣ ಅವರು ಶನಿವಾರ ಬೆಳಗ್ಗೆ ಏಕಾಏಕಿ ಸಂಭವಸಿದ ಹೃದಯಾಘಾತದಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯಲ್ಲೇ ವಿಧಿವಶರಾಗಿದ್ದಾರೆ.












Click it and Unblock the Notifications