Cyclone Asani; ಕರ್ನಾಟಕ ವಿವಿಧ ಜಿಲ್ಲೆಯಲ್ಲಿ 3 ದಿನ ಮಳೆ
ಬೆಂಗಳೂರು, ಮಾರ್ಚ್ 20; ಬಂಗಾಳಕೊಲ್ಲಿಯಲ್ಲಿರುವ ರೂಪಗೊಳ್ಳಲಿರುವ 'ಅಸನಿ' ಚಂಡಮಾರುತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಳೆ, ಗಾಳಿ, ಸಿಡಿಲಿನ ಅಬ್ಬರಕ್ಕೆ ಮೂವರು ಮೃತಪಟ್ಟಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಸಹ ಏರಿಕೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಸೋಮವಾರದಿಂದ 'ಅಸನಿ' ಚಂಡಮಾರತು ತೀವ್ರ ಸ್ವರೂಪ ಪಡೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಇದರ ಪರಿಣಾಮದಿಂದ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.
ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಮಾತನಾಡಿ, "ಚಂಡಮಾರುತದ ಪರಿಣಾಮ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಳೆಯಾಗಲಿದೆ. ಚಂಡಮಾರುತ ಅಂಡಮಾನ್ ನಿಕೋಬಾರ್ ಪೂರ್ವಭಾಗದಿಂದ ಆರಂಭವಾಗಿ ಬಾಂಗ್ಲಾದೇಶ ಮತ್ತು ಮಯನ್ಮಾರ್ ಉತ್ತರ ಕರಾವಳಿಯತ್ತ ಚಲಿಸಲಿದೆ" ಎಂದು ಹೇಳಿದ್ದಾರೆ.
ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಶನಿವಾರ ತುಂತುರು ಮಳೆಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಕಲಬುರಗಿ 40 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶನಿವಾರವೂ ಮಳೆಯಾಗಿದೆ. ಸಿಡಿಲಿಗೆ ಮೈಸೂರುರಿನಲ್ಲಿ ಒಬ್ಬರು, ಕೊಪ್ಪಳದಲ್ಲಿ ಒಬ್ಬರು ಬಲಿಯಾಗಿದ್ದಾರೆ. ಮಂಡ್ಯದಲ್ಲಿ ಮರ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ. ಮಳೆಯ ಜೊತೆ ಗಾಳಿಯ ಅಬ್ಬರಕ್ಕೆ ಜನರು ಹೈರಾಣಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಶನಿವಾರ ಸಂಜೆ ತುಂತುರು ಮಳೆಯಾಗಿದೆ. ರಾಯಚೂರು, ದಕ್ಷಿಣ ಕನ್ನಡ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರದಲ್ಲಿ ಅಕಾಲಿಕ ಮಳೆಗೆ ಅಪಾರ ಹಾನಿಯಾಗಿದೆ.

ಆಲಿಕಲ್ಲು ಮಳೆ, ಗಾಳಿ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ದೊಡ್ಡಪಾಳ್ಯ ಗ್ರಾಮದಲ್ಲಿ ತೆಂಗಿನಮರ ಬಿದ್ದು 12 ವರ್ಷದ ಪ್ರಿಯಾಂಕ ಮೃತಪಟ್ಟಿದ್ದಾಳೆ, ಇಬ್ಬರು ಗಾಯಗೊಂಡಿದ್ದಾರೆ. ಚಾಮರಾಜನಗರ ಕಿಲಗೆರೆ, ಕೊತ್ತಲವಾಡಿ, ಮಾದಲವಾಡಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಆಲಿಕಲ್ಲು ಸಹಿತ ಮಳೆಯಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರದ ಹೊಸಹಳ್ಳಿಯಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಹಸಸೋಗೆ ಗ್ರಾಮದ ರೈತ ಸಿದ್ದಲಿಂಗ ನಾಯಕ ಜಮೀನಿನ ಬಳಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಗಾಳಿಯ ಅಬ್ಬರ ಮೀನುಗಾರರಿಗೆ ಎಚ್ಚರ
ಮಾರ್ಚ್ 20ರ ಭಾನುವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಗೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ 55 ರಿಂದ 65 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಬಳಿಕ ಗಾಳಿಯ ಅಬ್ಬರ ಗಂಟೆಗೆ 75 ಕಿ. ಮೀ. ಆಗುವ ಸಾಧ್ಯತೆ ಇದೆ. ಇದರಿಂದಾಗಿ ಮೀನುಗಾರರು ಎಚ್ಚರಿಕೆಯಿಂದ ಇರಬೇಕು ಎಂದು ಮುನ್ಸೂಚನೆ ನೀಡಲಾಗಿದೆ.
ಚಂಡಮಾರುತ ಮಳೆಯ ಅಬ್ಬರದ ನಡುವೆಯೂ ದೇಶದ 10 ರಾಜ್ಯಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿಯೂ ತಾಪಮಾನ ಏರಿಕೆಯಾಗಿದ್ದು, ಬಿಸಿಲಿನಿಂದ ಜನರು ಹೈರಾಣಾಗಿದ್ದಾರೆ.
Recommended Video

ಕರಾವಳಿಯಲ್ಲಿ ಮಳೆ
ಬಿರುಬೇಸಗೆಯಿಂದ ತತ್ತರಿಸಿ ಹೋಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಇಡೀಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಶನಿವಾರ ಮಧ್ಯಾಹ್ನ ಮತ್ತು ರಾತ್ರಿ ಜಿಲ್ಲೆಯ ಹಲವೆಡೆ ಭಾರೀ ಗಾಳಿಯಿಂದ ಕೂಡಿದ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರದಿಂದ ಶಿರಸಿ ಜಾತ್ರೆಗೆ ಅಡ್ಡಿ ಉಂಟಾಗಿದೆ. ಜಾತ್ರೆಗೆ ಬಂದಿದ್ದ ಜನರು ಮಳೆಯಿಂದಾಗಿ ಸಂಕಷ್ಟ ಅನುಭವಿಸಿದ್ದರು. ಉತ್ತರ ಕನ್ನಡ, ಗದಗ, ಹಾವೇರಿ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗಿದೆ.












Click it and Unblock the Notifications