ಸಿದ್ದರಾಮಯ್ಯ ಅವರಿಗೆ ಅಧಿಕಾರದಲ್ಲಿದ್ದಾಗ ಜಿಲೆಬಿ ಕಂಡರೆ ಆಗಲ್ಲ ಎಂಬ ಆರೋಪ ಇತ್ತು; ಇದು ತಿನ್ನುವ ಜಿಲೆಬಿ ಅಲ್ಲ: ಸಿ.ಟಿ ರವಿ
ಹಿಂದೂ ಆದವರೂ ರಾಮಮಂದಿರ ಕಟ್ಟಲು ವಿರೋಧ ಮಾಡ್ತಾರಾ.? ಹಿಂದೂ ಆದವರೂ ಟಿಪ್ಪು ಜಯಂತಿ ಆಚರಿಸಲ್ಲ ಎಂದು ಸಿ ಟಿ ರವಿ ಕಿಡಿಕಾರಿದರು.
ರಾಮನಗರ, ಜನವರಿ31: ಸಿದ್ದರಾಮಯ್ಯಗೆ ಸುಳ್ಳು ಹೇಳುವುದು ಹುಟ್ಟು ಗುಣ. ಹಳೇ ಕಾಯಿಲೆ, ಅಧಿಕಾರಕ್ಕಾಗಿ ಅಹಿಂದ ರಾಜಕಾರಣ ಮಾಡಿದರು ಎಂದು ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಿಡಿಕಾರಿದರು.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಅಹಿಂದ ರಾಜಕಾರಣ ಮಾಡಿದರು, ಸಿದ್ದರಾಮಯ್ಯ ಅವರಿಗೆ ಅಧಿಕಾರದಲ್ಲಿದ್ದಾಗ ಜಿಲೆಬಿ ಕಂಡರೆ ಆಗಲ್ಲ ಎಂಬ ಆರೋಪ ಇತ್ತು. ಜಿಲೆಬಿ ಅಂದ್ರೆ ತಿನ್ನುವ ಜಿಲೆಬಿ ಅಲ್ಲ, ಗೌಡ, ಲಿಂಗಾಯತ, ಬ್ರಾಹ್ಮಣ ಅಂತಾ.! ಆ ರಾಜಕಾರಣವನ್ನ ಅವರು ಮಾಡ್ತಿದ್ದರು. ಅದು ಜನರನ್ನ ಪ್ರೀತ್ಸೋ ರಾಜಕಾರಣನಾ.? ಎಂದು ಪ್ರಶ್ನಿಸಿದರು.
ನಾನು ಕೂಡಾ ಹಿಂದೂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಹಿಂದೂ ಆದವರೂ ರಾಮಮಂದಿರ ಕಟ್ಟಲು ವಿರೋಧ ಮಾಡ್ತಾರಾ.? ಹಿಂದೂ ಆದವರೂ ಟಿಪ್ಪು ಜಯಂತಿ ಆಚರಿಸಲ್ಲ ಎಂದು ಕಿಡಿಕಾರಿದರು. ನಾಲ್ವಡಿ ಕೃಷ್ಣರಾಜ ಜಯಂತಿ ಆಚರಣೆ ಮಾಡ್ತಾರೆ. ಕುಂಕುಮ ಕಂಡರೆ ಆಗದವರು ಯಾವ ಸೀಮೆ ಹಿಂದೂ. ಕೇಸರಿ ಕಂಡರೆ ಅಲರ್ಜಿ ಇರೋರು ಎಲ್ಲರನ್ನ ಪ್ರೀತ್ಸೋ ಜನರಾ.? ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಇದೇ, ಅದನ್ನು ದೂರ ಇಡ್ತಾರಾ.? ನಮ್ಮ ಎಲ್ಲಾ ಸ್ವಾಮೀಜಿಗಳು ಧರಿಸುವ ಬಟ್ಟೆಯೂ ಕೇಸರಿ.ಇವರಿಗೆ ಅವರ ಆರ್ಶೀವಾದ ಬೇಕು, ಆದ್ರೆ ಕೇಸರಿ ಕಂಡ್ರೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.

ನನ್ನ ಹೆಣ ಸಹ ಬಿಜೆಪಿಗೆ ಹೋಗಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಮನುಷ್ಯನ ಹೆಣಕ್ಕೆ ಮೂರು ಕಾಸಿನ ಬೆಲೆಯಿಲ್ಲ ಎಂದು ಅವರಿಗೂ ಗೊತ್ತಿದೆ. ಹೆಣ ತಗೊಂಡು ರಾಜಕಾರಣ ಮಾಡಲು ಆಗಲ್ಲ. ಹೆಣ ಎದ್ದು ಬಂದು ಓಟ್ ಹಾಕುತ್ತಾ.? ಹೆಣನಾ ಯಾರು ಸಹ ಅವರ ಮನೆಯಲ್ಲೂ ಮೂರು ದಿನ ಇಟ್ಟುಕೊಳ್ಳಲ್ಲ.ಆದರೆ ಅವರು ನೂರು ವರ್ಷ ಬದುಕಿರಲಿ.
ನಮಗೆ ಅವರ ಅವಶ್ಯಕತೆ ಇಲ್ಲ. ಅವರು ಇಲ್ಲದೇ ಕೇಂದ್ರದಲ್ಲಿ ಬಿಜೆಪಿ 4 ನೇ ಬಾರಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ 3 ನೇ ಬಾರಿ ಅಧಿಕಾರಕ್ಕೆ ಬಂದಿದೆ. ಇನ್ನೂ ಸಿದ್ದರಾಮಯ್ಯ ಹತಾಷೆಯಿಂದ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ನಾನು ಸಿದ್ರಾಮುಲ್ಲಾಖಾನ್ ಎಂದು ಇಟ್ಟಿಲ್ಲ.ಜನರು ಅವರಿಗೆ ಇಟ್ಟಿರುವ ಹೆಸರು, ಅವರನ್ನು ಹುಲಿಯಾ ಅಂತಾರೆ, ಆ ಹೆಸರು ಅವರ ತಂದೆ ತಾಯಿ ಇಟ್ಟಿದ್ದರಾ.? ನನ್ನನ್ನ ಹಿಂದೂ ಹುಲಿ ಅಂತಾರೆ.
ನಮ್ಮಪ್ಪ ಇಟ್ಟ ಹೆಸರಲ್ಲ ಅದು, ಪ್ರೀತಿಯಿಂದ ಜನ ಇಟ್ಟಿದ್ದು. ಎಸ್ ಡಿ ಪಿ ಐ, ಪಿಎಫ್ ಐ ಗೆ ಬೆಂಬಲ ಕೊಟ್ರು. ಅವರು ಯಾರ ಮೇಲೆ ಕತ್ತಿ ಇಟ್ಟರು.? ನಮ್ಮ ಬಿಜೆಪಿ ಶಾಸಕರ ಮೇಲೆ ಕತ್ತಿ ಇಟ್ರಾ.? ಇಲ್ಲ, ಅವರ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಕತ್ತಿ ಇಟ್ಟರು. ಡಿಜೆ ಹಳ್ಳಿ - ಕೆಜೆ ಹಳ್ಳಿ ಗ್ಯಾಂಗ್ ಗೆ ಬೆಂಬಲ ಕೊಡೋದು ಕಾಂಗ್ರೆಸ್ ನೀತಿ. ಆ ನೀತಿ ಮತ್ತೆ ಬರಬೇಕಾ, ವಿಸ್ತರಣೆ ಆಗಬೇಕಾ.?
ಅದು ಬರಬಾರದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.

ರಾಮದೇವರ ಬೆಟ್ಟ ಅಭಿವೃದ್ಧಿ ಚುನಾವಣಾ ಗಿಮಿಕ್ ಎಂಬ ವಿಚಾರವಾಗಿ ಮಾತನಾಡಿ, ಶುದ್ಧ ಹಿಂದೂಗಳು ಯಾರೂ ರಾಮಮಂದಿರಕ್ಕೆ ವಿರೋಧ ಮಾಡಲ್ಲ. ಇವರು ಯಾಕೆ ವಿರೋಧ ಮಾಡ್ತಿದ್ದಾರೋ ಗೊತ್ತಿಲ್ಲ. ಇಲ್ಲಿಯವರೆಗೆ ರಾಮಮಂದಿರ ಕಟ್ಟಬೇಡಿ ಅಂತ ಅವರನ್ನ ಕಟ್ಟಾಕಿದ್ರಾ.? ಇಲ್ಲಿ ಅಧಿಕಾರದಲ್ಲಿದ್ದವರು ಇವರೇ ತಾನೆ. ರಾಮದೇವರ ಬೆಟ್ಟ ಅಭಿವೃದ್ಧಿ ಮಾಡಿ ತೋರಿಸ ಬೇಕಿತ್ತು. ನಾವೂ ಹಿಂದೂಗಳು ಅಂತ ಹೇಳಿ ಕೊಳ್ಳುವವರು ಇಷ್ಟುದಿನ ಏನು ಮಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications