ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಶಾಕಿಂಗ್ ಹೇಳಿಕೆ ನೀಡಿದ ಸಿ ಟಿ ರವಿ
ಬೆಂಗಳೂರು, ಜನವರಿ 27: ಬಿಜೆಪಿಯಲ್ಲಿ ಯಾರಿಗೂ ಶಾಶ್ವತ ಹುದ್ದೆಯಿಲ್ಲ. ಕಾಲ ಕಾಲಕ್ಕೆ ತಕ್ಕಂತೆ ನಾಯಕರು ಬದಲಾಗುತ್ತಾರೆ. ಪಕ್ಷವನ್ನು ಬಲಪಡಿಸುವವರಿಗೆ ವರಿಷ್ಠರು ಮಣೆ ಹಾಕುತ್ತಾರೆ. ಇಂತಹ ಅನೇಕ ಸಂಗತಿಗಳನ್ನು ಬಿಜೆಪಿ ನಾಯಕರು ಬಗೆಹರಿಸಿದ್ದಾರೆ, ಇದ್ದನ್ನೂ ಬಗೆಹರಿಸುತ್ತಾರೆ. ನಾವು ಪಕ್ಷದ ಜೊತೆ ಇದ್ದೇವೆ. ಯಾರೇ ಅಧ್ಯಕ್ಷರಾದ್ರೂ ಅವರ ಜೊತೆ ಕೆಲಸ ಮಾಡುತ್ತೇವೆ. ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ಕಾರ್ಯಕರ್ತರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಕ್ಷದ ಸಂಸದೀಯ ಮಂಡಳಿಯು ರಾಜ್ಯವನ್ನು ಯಾರು ಮುನ್ನಡೆಸಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತದೆ. ಜಿಲ್ಲೆಯನ್ನು ಯಾರು ಮುನ್ನಡೆಸಬೇಕು ಅಂತ ರಾಜ್ಯ ಕೋರ್ ಕಮಿಟಿ ತೀರ್ಮಾನ ಮಾಡುತ್ತದೆ. ವಿಜಯೇಂದ್ರ ಹಾಗೂ ಯತ್ನಾಳ್ ಇಬ್ಬರೂ ಪಕ್ಷವನ್ನೇ ಬಲಪಡಿಸುವುದು ಅಲ್ವಾ? ಪಕ್ಷ ಬಲಪಡಿಸುವ ಕೆಲಸವನ್ನು ಯಾರೇ ಅಧ್ಯಕ್ಷರಾದರೂ ಮಾಡಲೇಬೇಕು
ಯಾರಿಗೆ ಹೈಕಮಾಂಡ್ ಅವಕಾಶ ಕೊಡುತ್ತದೆ ಅಂತ ನೋಡೋಣ. ನಾವಂತೂ ಪಕ್ಷದ ಜತೆಗೆ ಇರುತ್ತೇವೆ ಎಂದು ತಿಳಿಸಿದರು.

ಪಕ್ಷ ಯಾರಿಗೆ ಜವಾಬ್ದಾರಿ ಕೊಡುತ್ತದೋ ಅವರ ಜೊತೆ ನಾವು ಕೆಲಸ ಮಾಡುತ್ತೇವೆ. ಇಂತಹ ಪರಿಸ್ಥಿತಿಯನ್ನು ಹಿಂದೆ ನಮ್ಮ ಹಿರಿಯ ನಾಯಕರು ನಿರ್ವಹಿಸಿದ್ದಾರೆ, ಇದನ್ನೂ ನಿರ್ವಹಿಸುವ ಕೆಲಸ ಮಾಡುತ್ತಾರೆ, ಆ ವಿಶ್ವಾಸ ನಮಗಿದೆ. ನಾವೂ ಕೂಡಾ ನಮ್ಮ ಕೈಲಾದ ಮಟ್ಟಿಗೆ ಸಹಮತ ಮೂಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ನಮ್ಮ ಹೆಚ್ಚಿನ ಕಾರ್ಯಕರ್ತರು ಸಿದ್ಧಾಂತಕ್ಕಾಗಿ ಕೆಲಸ ಮಾಡುತ್ತಾರೆ, ಪಕ್ಷ ಬಲಗೊಳಿಸುವ ಸಂಗತಿಯ ನೇತೃತ್ವ ವಹಿಸಿದರೆ ಕಾರ್ಯಕರ್ತರಿಗೆ ಸಂತೋಷ ಆಗುತ್ತದೆ. ಪಕ್ಷ ಬಲಗೊಳಿಸುವ ಕೆಲಸಕ್ಕೆ ನಾವಿದ್ದೇವೆ, ಕಾರ್ಯಕರ್ತರ ಭಾವನೆಗಳನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಕೆಲಸ ಮಾಡುವ ಅವಶ್ಯಕತೆ ಇದೆ.
ಮುಡಾದಲ್ಲಿ ಹಗರಣ ನಡೆದಿರುವುದು ಸ್ಪಷ್ಟ, ಹಗರಣದಲ್ಲಿ ಯಾರ‍್ಯಾರ ಪಾತ್ರ ಏನು ಎಂಬುದು ಸಮಗ್ರ ತನಿಖೆಯಿಂದ ಹೊರಬರಲಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ. ಇಡಿ ಸೈಟ್‌ಗಳನ್ನು ಮುಟ್ಟುಗೋಲನ್ನು ಹಾಕಿಕೊಳ್ಳುತ್ತದೆ. ಲೋಕಾಯುಕ್ತಕ್ಕೆ ಯಾಕೆ ಇದು ಆಗಲ್ಲ. ಜಿಲ್ಲಾಧಿಕಾರಿಗಳು ಪತ್ರದ ಮೇಲೆ ಪತ್ರ ಬರೆದರು ಕ್ರಮ ಯಾಕೆ ತೆಗೆದುಕೊಳ್ಳಲಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಏನು ವರದಿ ಕೊಟ್ಟಿದೆ ಅಂತ ನನ್ನ ಬಳಿ ಮಾಹಿತಿ ಇಲ್ಲ. ಆದರೆ, ಮುಡಾದಲ್ಲಿ ಅಕ್ರಮ ನಡೆದಿರೋದನ್ನು ಬಹುತೇಕ ಎಲ್ಲರೂ ಒಪ್ಪಿಕೊಂಡಿದ್ದಾರೆ. ಮುಡಾದಿಂದ ಯಾರಿಗೆ ಲಾಭ ಆಯ್ತು? ಯಾರು ಅಕ್ರಮದ ಫಲಾನುಭವಿ ಎನ್ನುವುದೂ ಸಾಬೀತಾಗಬೇಕು. ಸಿಎಂ ಪತ್ನಿ ಬದಲಿ ನಿವೇಶನ ಪಡೆದುಕೊಂಡಿರುವುದು ಅಕ್ರಮ ಅಲ್ವಾ? ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅಗತ್ಯ ಇಲ್ಲ. ಅಕ್ರಮ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದರು.
ಯಾವುದೋ ಶಕ್ತಿ ಲೋಕಾಯುಕ್ತವನ್ನು ತಡೆಯುತ್ತಿದೆಯಾ? ಮುಡಾದಲ್ಲಿ ಹಗರಣ ನಡೆದಿರುವುದು ಸ್ಪಷ್ಟ. ಯಾರ್ಯಾರ ಪಾತ್ರ ಏನೇನು ಅಂತ ಸಾಬೀತಾಗುವುದಷ್ಟೇ ಬಾಕಿ ಇದೆ, ಸಬ್ ರಿಜಿಸ್ಟ್ರಾರ್ ಕಚೇರಿ ಇಡಿ ಪ್ರಾಪರ್ಟಿ ಲಿಸ್ಟ್ ಕಳಿಸಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಹೇಳಿದರು.
ಇಡಿಯಿಂದ ಸಿಎಂ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್ ಗೆ ನೋಟೀಸ್ ವಿಚಾರವಾಗಿ ಮಾತನಾಡಿ, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಆಪಾದನೆ ಬಂದ ಮೇಲೆ ತನಿಖೆಗೆ ಸ್ಪಂದಿಸುವುದು ಅವರ ಕರ್ತವ್ಯ. ಅದನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡುವ ಅವಕಾಶವೂ ಅವರಿಗೆ ಇದೆ. ನೋಡೋಣ ಏನಾಗುತ್ತದೆ ಅಂತ, ಆಪಾದನೆಯ ಸತ್ಯಾಸತ್ಯತೆಗಳ ಪರಿಶೀಲನೆ ಆಗಬೇಕಲ್ಲಾ, ಅದಕ್ಕೆ ನೊಟೀಸ್ ಕೊಟ್ಟಿದ್ದಾರೆ. ಕೋರ್ಟಿನಲ್ಲಿ ಏನು ತೀರ್ಮಾನ ಬರುತ್ತದೆ ಅಂತ ನೋಡಬೇಕು ಎಂದು ತಿಳಿಸಿದರು.












Click it and Unblock the Notifications