ರೈತರ ಬೆಳೆ ವಿಮೆಗೆ ₹1,680 ಕೋಟಿ ಬಾಕಿ? ಬೆಳೆ ಕಳೆದುಕೊಂಡವರಿಗೆ ಸಿಗದ ಪರಿಹಾರ: ವಿಪಕ್ಷ ನಾಯಕ ಕಿಡಿ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಬರಗಾಲ ಉಂಟಾಗಿ, ಬೆಳೆ ವಿಮೆ ಕಟ್ಟಿದ್ದ ರೈತರು ಪರಿಹಾರದ ಮುಖ ನೋಡುತ್ತಿದ್ದಾರೆ. ರೈತರಿಗೆ ಬೆಳೆ ವಿಮೆ ಹಣ ಸಿಗುತ್ತಿಲ್ಲ. 'ಈ ರಾಜ್ಯ ಸರ್ಕಾರದ ಬಳಿ ಆಡಂಬರಕ್ಕೆ ಹಣವಿದೆ. ಅನ್ನದಾತನ ಬೆಳೆ ವಿಮೆ ಕಟ್ಟಲು ಹಣವಿಲ್ಲವೇ? ಇದೇನಾ ಕಾಂಗ್ರೆಸ್ ಸರ್ಕಾರದ ರೈತಪರ ಆಡಳಿತ? ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.
ಎಕ್ಸ್ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ರೈತರ ಹೆಸರಿನಲ್ಲಿ ಭಾಷಣ ಮಾಡುವುದು ಸುಲಭ. ಆದರೆ ಸಂಕಷ್ಟದಲ್ಲಿರುವ ರೈತನ ಬೆನ್ನಿಗೆ ನಿಲ್ಲಲು ಹಣ ಬಿಡುಗಡೆ ಮಾಡಲು ನಿಮ್ಮ ಸರ್ಕಾರಕ್ಕೆ ಮನಸ್ಸೂ ಇಲ್ಲ, ಯೋಗ್ಯತೆಯೂ ಇಲ್ಲ. ರಾಜ್ಯದ ಖಜಾನೆಯನ್ನು ಬರಿದು ಮಾಡಿ, ಈಗ ಅನ್ನದಾತನ ಬೆಳೆ ವಿಮೆಗೂ ಹಣ ನೀಡದೆ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವುದು ನಿಮ್ಮ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಹಿಡಿದ ಕನ್ನಡಿ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದ ಪಾಲು ರಾಜ್ಯದ ₹1,680 ಕೋಟಿ ಇನ್ನೂ ಬಾಕಿ!
ಇನ್ನೂ ರೈತರಿಗಾಗಿಯೇ ಇರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೇಂದ್ರ ಸರ್ಕಾರ ತನ್ನ ಪಾಲಿನ ₹1,342 ಕೋಟಿ ಪ್ರೀಮಿಯಂ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ₹1,680 ಕೋಟಿ ಪಾವತಿಸದೆ ವಿಳಂಬ ಮಾಡುತ್ತಿದೆ. ಇದಕ್ಕೆ ಕಾರಣವೇನು? ರಾಜ್ಯದ ಪಾಲಿನ ಹಣ ಪಾವತಿಯಾಗದ ಕಾರಣ ವಿಮಾ ಪ್ರಕ್ರಿಯೆಗೆ ಅಡ್ಡಿಯಾಗಿದ್ದು, ರೈತರಿಗೆ ಸಿಗಬೇಕಾದ 25% ಮಧ್ಯಂತರ ಪರಿಹಾರವೂ ವಿಳಂಬವಾಗುತ್ತಿದೆ ಎಂದು ಅವರು ವಿಷಾದಿಸಿದರು.
ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಬೇಕಾದ ಸರ್ಕಾರವೇ ಅವರ ಹಕ್ಕಿನ ಹಣಕ್ಕೆ ಅಡ್ಡಿಯಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇದು ಕೇವಲ ಹಣ ಪಾವತಿಯ ವಿಳಂಬವಲ್ಲ; ಸಂಕಷ್ಟದಲ್ಲಿರುವ ಅನ್ನದಾತನಿಗೆ ಮಾಡಿದ ಅನ್ಯಾಯ! ಅಂತಲೂ ಅವರು ಬಣ್ಣಿಸಿದ್ದಾರೆ.
ಅನ್ನದಾತರ ಕಣ್ಣೀರಿನ ಪ್ರಶ್ನೆಗಳಿಗೆ ಉತ್ತರ ಬೇಕು!
ರಾಜ್ಯದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಕಾಂಗ್ರೆಸ್ ನಾಯಕರಿಗೆ ಗಂಜಿ ಕೇಂದ್ರ ನಡೆಸಲು, ಸಾಧನಾ ಸಮಾವೇಶಗಳಿಗೆ, ನೆರೆ ರಾಜ್ಯಗಳ ಮುಖ್ಯಮಂತ್ರಿಗಳ ವೈಭವದ ಆತಿಥ್ಯಕ್ಕೆ, ಬ್ರೇಕ್ಫಾಸ್ಟ್ ಮೀಟಿಂಗ್ಗಳಿಗೆ, ಡಿನ್ನರ್ ಪಾರ್ಟಿಗಳಿಗೆ, ಸಚಿವರ ಬಂಗಲೆಗಳ ನವೀಕರಣಕ್ಕೆ ಮತ್ತು ವಿಶೇಷ ವಿಮಾನಗಳಲ್ಲಿ ದೆಹಲಿ ಯಾತ್ರೆಗಳಿಗೆ ಹಣ ಹೊಂದಿಸುವ ನಿಮ್ಮ ಸರ್ಕಾರಕ್ಕೆ ರೈತರ ಬೆಳೆ ವಿಮೆಯ ಪ್ರೀಮಿಯಂ ಪಾವತಿಸಲು ಹಣವಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಕೊಡಿ.
ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡಿದ್ದರೂ, ರಾಜ್ಯದ ಪಾಲಿನ ₹1,680 ಕೋಟಿ ಪಾವತಿಸಲು ವಿಳಂಬವಾಗುತ್ತಿರುವುದಕ್ಕೆ ಹೊಣೆ ಯಾರು?. ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ 25% ಮಧ್ಯಂತರ ಪರಿಹಾರ ಸಕಾಲದಲ್ಲಿ ತಲುಪದಿದ್ದರೆ, ಅದರ ಸಂಪೂರ್ಣ ಹೊಣೆಗಾರಿಕೆಯನ್ನು ನಿಮ್ಮ ಸರ್ಕಾರ ಹೊರಬೇಕಲ್ಲವೇ?.
ಸರ್ಕಾರಕ್ಕೆ ರೈತರ ಹಿತ ಬೇಕಾಗಿಲ್ಲ
ಕಾಂಗ್ರೆಸ್ ಸರ್ಕಾರಕ್ಕೆ ಆಡಂಬರದ ರಾಜಕಾರಣವೇ ಆದ್ಯತೆಯೇ ಹೊರತು ರೈತರ ಹಿತವಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಸಬೂಬು ಹೇಳಿದ್ದು ಸಾಕು, ಬಣ್ಣದ ಮಾತುಗಳು ಸಾಕು, ಬೊಗಳೆ ಭಾಷೆಗಳು! ರೈತರ ಬಾಕಿ ವಿಮಾ ಪ್ರೀಮಿಯಂ ಅನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ರೈತರಿಗೆ ಸಿಗಬೇಕಾದ ಪರಿಹಾರವನ್ನು ಖಚಿತಪಡಿಸಿ. ಇಲ್ಲದಿದ್ದರೆ, ಕಾಂಗ್ರೆಸ್ ಸರ್ಕಾರದ ರೈತವಿರೋಧಿ ಧೋರಣೆಗೆ ರಾಜ್ಯದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.


Click it and Unblock the Notifications
