ಸಿ ಪಿ ಯೋಗೇಶ್ವರ್ ರಾಜೀನಾಮೆ; ಕಾಂಗ್ರೆಸ್ ಸೇರ್ಪಡೆಯಾಗ್ತಾರಾ ಸೈನಿಕ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 22: ರಾಜ್ಯದಲ್ಲಿ ಉಪಚುನಾವಣಾ ಕಾವು ಜೋರಾಗಿದೆ. ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಹೆಚ್ಚು ಮಹತ್ವವನ್ನ ಪಡೆದುಕೊಂಡಿದ್ದು, ಟಿಕೆಟ್ ವಿಚಾರವಾಗಿ ಮೈತ್ರಿಯಲ್ಲಿ ಬಿರುಕು ಮೂಡಿದೆ.
ಚನ್ನಪಟ್ಟಣ ಕ್ಷೇತ್ರದಿಂದ ಈ ಬಾರಿ ಸ್ಪರ್ಧೆ ನಡೆಸಲು ಸಿ ಪಿ ಯೋಗೇಶ್ವರ್ ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ರು. ಆದರೆ, 2+1 ಅನುಪಾತದಲ್ಲಿ ಮೈತ್ರಿ ಟಿಕೆಟ್ ಹಂಚಿಕೆಯಾಗಿದ್ದು, ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ನಡೆಸಲಿದ್ದು, ಸಿ ಪಿ ಯೋಗೇಶ್ವರ್ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಇತ್ತ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಸೆರ್ಪಡೆಯಾಗಲಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕ ಸಂಪರ್ಕದಲ್ಲಿದ್ದು, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಸೇರ್ಪಡೆಯಾಗ್ತಾರಾ ಎನ್ನುವ ಕುತೂಹಲ ಹೆಚ್ಚಿಸಿದೆ.
ಸಿ ಪಿ ಯೋಗೇಶ್ವರ್ ರಾಜೀನಾಮೆ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಈ ವಿಚಾರ ನನಗೆ ಗೊತ್ತಿಲ್ಲ. ಮಾಧ್ಯಮ ಪ್ರತಿನಿಧಿಗಳ ಮಾತಿನ ಮೂಲಕ ತಿಳಿದಿದೆ. ಅವರ ಮುಂದಿನ ನಡೆ, ನುಡಿ ಬಗ್ಗೆ ಮುಂದೆ ಕಾದು ನೋಡೋಣ" ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಕೇಳಿದಾಗ, "ಅವರ ಪಕ್ಷದ ಸಭೆ ಅವರು ಮಾಡುತ್ತಾರೆ. ಅವರ ಕ್ಷೇತ್ರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅವರ ಸಭೆ ತಪ್ಪು ಎಂದು ಹೇಳಲು ಸಾಧ್ಯವೇ? ನಾವು ನಿನ್ನೆ ಸಿಎಂ ನಿವಾಸದಲ್ಲಿ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಸಭೆ ಮಾಡಿದ್ದೇವೆ. ಅವರು ಅದೇರೀತಿ ಸಭೆ ಮಾಡುತ್ತಿದ್ದು,ಉಪಚುನಾವಣೆಯಲ್ಲೂ ವಿಧಾನಸಭೆ ಚುನಾವಣೆಯಷ್ಟೇ ಆತ್ಮವಿಶ್ವಾಸದಲ್ಲಿದ್ದೇವೆ ಎಂದರು.
ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಸಂಪರ್ಕಿಸಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ಈ ಚುನಾವಣೆಯಲ್ಲಿ ನೀವು ಎಷ್ಟು ಆತ್ಮವಿಶ್ವಾಸದಲ್ಲಿದ್ದೀರಿ ಎಂದು ಕೇಳಿದಾಗ ಈ ರೀತಿ ಉತ್ತರಿಸಿದರು. "ಕುಮಾರಸ್ವಾಮಿ ಅವರಿಗೆ ಏನೇನೋ ಮಾಹಿತಿ ಬರುತ್ತಿರುತ್ತವೆ. ನನ್ನ ಜತೆ ಯೋಗೇಶ್ವರ್ ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಡಿಸಿಎಂ ಅವರು ಕನ್ನಡಕ ಹಾಕಿಕೊಂಡು ನೈಟ್ ರೌಂಡ್ಸ್ ಮಾಡಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಕನ್ನಡ ಹಾಕಿಕೊಳ್ಳುವುದು ಹಗಲು ವೇಳೆ ಹಾಗೂ ಓದುವಾಗ ಮಾತ್ರ. ಕನ್ನಡಕ ಹಾಕಿಕೊಂಡು ಯಾರಾದರೂ ನೈಟ್ ರೌಂಡ್ಸ್ ಮಾಡುತ್ತಾರಾ? ಅಶೋಕ್ ಅವರು ನೈಟ್ ರೌಂಡ್ಸ್ ವೇಳೆ ಯಾಕೆ ಕನ್ನಡಕ ಹಾಕಿಕೊಳ್ಳುತ್ತಾರೋ ಗೊತ್ತಿಲ್ಲ" ಎಂದು ತಿರುಗೇಟು ನೀಡಿದರು.
ರಾಜ್ಯಾದ್ಯಂತ ಮಳೆ ಹಾನಿ ಬಗ್ಗೆ ಕೇಳಿದಾಗ, "ಮಳೆ ಬರಲಿ, ನಂತರ ಪರಿಹಾರದ ಬಗ್ಗೆ ಯೋಚಿಸೋಣ. ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ನಾವು ಕೂಡ ಏನು ಸಹಾಯಬೇಕೋ ಅದನ್ನು ಮಾಡುತ್ತೇವೆ" ಎಂದು ತಿಳಿಸಿದರು.












Click it and Unblock the Notifications