ನಾನು ಗೆದ್ದರು, ಸೋತರೂ ಇಲ್ಲೇ ಇರ್ತಿನಿ, ಸತ್ತರು ಇಲ್ಲೇ ಇರ್ತಿನಿ, ಆದ್ರೆ ಬೇರೆಯವರ ಕಥೆ ಅಂಗಲ್ಲ: ಸಿ ಪಿ ಯೋಗೇಶ್ವರ್
ರಾಮನಗರ, ಮೇ 17: ನಾನು ಚುನಾವಣೆಯಲ್ಲಿ ಗೆದ್ದರು, ಸೋತರೂ ಇಲ್ಲೇ ಇರ್ತಿನಿ, ಸತ್ತರು ಇಲ್ಲೇ ಇರ್ತಿನಿ. ಆದರೆ, ಬೇರೆಯವರ ಕಥೆ ಅಂಗಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಕಿಡಿಕಾರಿದ್ದಾರೆ.
ಈ ಕುರಿತು ರಾಮನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕ್ಷೇತ್ರಕ್ಕೆ ಬಂದು ಕಣ್ಣೀರಿಟ್ಟರು. ಅತಂತ್ರ ಫಲಿತಾಂಶಕ್ಕಾಗಿ ಕಾಯುತ್ತಿದ್ದರು, ನನ್ನ ಮಗ ಕೊನೆಯದಾಗಿ ಮುಖ್ಯಮಂತ್ರಿ ಆಗ್ತೀನಿ ಅಂತ ಅವರ ಅಪ್ಪ ಆಸೆ ಇಟ್ಕೊಂಡಿದ್ರು. ಅದಕ್ಕೆ ಅತಂತ್ರ ಆಗುತ್ತೆ ಅಂತ ಸಿಂಗಾಪುರ್ ಗರ ಹೋಗಿ ಕೂತಿದ್ರು.ಆದರೆ, ಈಗ ಕಾಂಗ್ರೆಸ್ ಗೆ ಬಹುಮತ ಬಂದಿದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ದ ವ್ಯಂಗ್ಯವಾಡಿದರು.

ನಾವು ಪ್ರಮಾಣಿಕವಾಗಿ ದುಡಿದು ಮತ ಪಡೆದಿದ್ದೇವೆ. ಆದರೆ, ಅವರು ಜಾತಿ ವಿಚಾರ ಮತ್ತೊಂದು ಸೇರಿ ಅನೇಕ ಕುತಂತ್ರ ನಡೆಸಿ ಗೆದ್ದಿದ್ದಾರೆ.ನನ್ನನ್ನು ಒಂದು ಸಾರಿ ಸೋಲಿಸಿ ಮತ್ತೆ ಗೆಲ್ಲಿಸಿದ್ದಾರೆ. ಆದಾದ ಬಳಿಕ ಎರಡು ಸಾರಿ ಸೋಲಿಸಿರೋದು ಯಾಕೆ ಅಂತ ಗೊತ್ತಾಗ್ತಿಲ್ಲ. ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದೆ, ಚೆನ್ನಾಗಿ ಆಡಳಿತ ನಡೆಸಲಿ ಅಂತ ಶುಭ ಹಾರೈಸುತ್ತೇನೆ. ನಾವು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡ್ತೀವಿ.
ಈ ತಾಲೂಕಿನ ಬಹುಸಂಖ್ಯಾತ ಒಕ್ಕಲಿಗರು ಹೆಚ್ ಡಿ ಕುಮಾರಸ್ವಾಮಿಯನ್ನ ಕೈಹಿಡಿದ್ರು. ಆದರೆ, ಜೆಡಿಎಸ್ ಅಧಿಕೃತ ವಿರೋಧ ಪಕ್ಷವೂ ಅಲ್ಲ. ಜೆಡಿಎಸ್ ಕನಿಷ್ಠ ಸ್ಥಾನಕ್ಕೆ ಕುಸಿದಿದೆ. ನೀವ್ಯಾರು ಆತಂಕ ಪಡಬೇಕಿಲ್ಲ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗುತ್ತಿದೆ ಎಂದರು.
ಮಂಡ್ಯದಲ್ಲಿ ಬಿಜೆಪಿ ಬೆಳವಣಿಗೆ ಪ್ರಾರಂಭ ಆಯ್ತು, ಆದರೆ ಅದರ ಲಾಭ ಕಾಂಗ್ರೆಸ್ ಗೆ ಆಯ್ತು, ನಮ್ಮ ಬೆಳವಣಿಗೆ ಕಾಂಗ್ರೆಸ್ ಗೆ ಲಾಭ ಆಯ್ತು. ನಾನು ಇನ್ನೂ ಮೂರು ವರ್ಷ ಎಂಎಲ್ಸಿ ಆಗಿ ಇರ್ತಿನಿ. ಮುಂದೆ ಏನಾಗುತ್ತೋ ನೋಡೋಣ. ಇನ್ನ ಮೂರು ವರ್ಷದಲ್ಲಿ ಏನಾಗುತ್ತೋ ಕಾದುನೋಡೊಣ ಎಂದು ಹೇಳಿದರು.

ಬಿಜೆಪಿಯ ಕೆಲ ನಾಯಕರನ್ನ ನಾನು ಕೇಳಿದ್ದೆ. ನೀವು ಐದಾರು ಇಲಾಖೆ ಖಾಲಿ ಬಿಟ್ಕೊಂಡು ಸುಮ್ಮನೆ ಇದ್ದರು. ನಮಗೆ ಅದನ್ನ ನೀಡಿ ಶಕ್ತಿ ತುಂಬಿದ್ರೆ ಅನುಕೂಲ ಆಗ್ತಿತ್ತು, ಆದರೆ ಸಮಯ ಮೀರಿಹೋಗಿದೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅವರು ಕೊಟ್ಟಿರೋ ಭರವಸೆಗಳನ್ನ ಈಡೇರಿಸಲಿ. ಚನ್ನಪಟ್ಟಣದ ಗಬ್ಬೆದ್ದು ನಾರುತ್ತಿದೆ. ಅದನ್ನ ಇಲ್ಲಿ ಗೆದ್ದವರು ಸರಿ ಮಾಡಲ್ಲ, ನಾನೇ ಅದನ್ನ ಸರಿಮಾಡಬೇಕು ಎಂದು ವಾಗ್ದಾಳಿ ನಡೆಸಿದರು.
ನಾನೊಬ್ಬ ಸೀನಿಯರ್, ಎಲ್ಲಾ ಪಕ್ಷದ ಮಂತ್ರಿ ಸೇರಿ ಎಲ್ಲರೂ ಗೊತ್ತು. ಕ್ಷೇತ್ರಕ್ಕೆ ಅನುದಾನ ತರುವ ಪ್ರಯತ್ನವನ್ನ ನಿರಂತರವಾಗಿ ಮಾಡುತ್ತೇನೆ. ಪರೀಕ್ಷೆ ಬರೆದು ಫೇಲ್ ಆಗಿದ್ದೇನೆ.ಆದರೆ, ಕೈಕಟ್ಟಿ ಕೂರಲ್ಲ, ಮತ್ತೆ ಓದಿ ಎಕ್ಸಾಂ ಬರೆದು ಪಾಸ್ ಆಗ್ತೀನಿ. ಸೋತಿದಕ್ಕೆ ದುಃಖ ಪಡಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಬಂದು ಪಕ್ಷವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಈ ಬಾರಿ ಸೋತಿದ್ದೇವೆ ಆದರೆ, ಮುಂದಿನ ದಿನ ಒಳ್ಳೆಯ ಕಾಲ ಬರುತ್ತೆ. ಎಲ್ಲಾ ನೋವನ್ನು ಮರೆಯೋಣ, ಇದೊಂದು ಕೆಟ್ಟಕನಸು. ನನ್ನಿಂದ ಯಾವುದೇ ತಪ್ಪುಆಗಿದ್ರೂ ಅದನ್ನ ಕ್ಷಮಿಸಿ.
ಮುಂದೆ ಎಲ್ಲಾ ಗ್ರಾಮಗಳಿಗೂ ಹೋಗಿ ಜನರನ್ನ ಭೇಟಿ ಮಾಡೋಣ. ನಿಮ್ಮೆಲ್ಲರ ಶ್ರಮದಿಂದ 80 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದೇನೆ. ಕ್ಷೇತ್ರದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಿ. ಈ ಬಾರಿ ನನ್ನ ರಾಜಕೀಯ ಜೀವನದಲ್ಲಿ ಹೆಚ್ಚು ಮತ ಗಳಿಸಿದ್ದೇನೆ. ಚುನಾವಣೆಯಲ್ಲಿ ಸೋತಿದ್ದೇನೆ ಆದರೆ ನಿಮ್ಮ ಪ್ರೀತಿ ವಿಶ್ವಾಸ ಗೆದ್ದಿದ್ದೇನೆ ಎಂದು ಹೇಳಿದರು.
ಯಾವುದೋ ಉದ್ದೇಶದಿಂದ ಸೋತಿರಬಹದು. ಆದರೆ, ಜನ ಯಾಕೆ ಓಟ್ ಹಾಕಲಿಲ್ಲ ಎಂಬ ಪ್ರಶ್ನೆ ಉತ್ತರ ಸಿಗ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳವಣಿಗೆ ಗುಣಮಟ್ಟದಿಂದ ಆಗಬೇಕಿತ್ತು. ಇದು ನನ್ನ ಬಿಜೆಪಿಯ ನಾಲ್ಕನೇ ಸೋಲು. ನಾನು ಬೇರೆ ಬೇರೆ ಪಕ್ಷಗಳ ಆಶ್ರಯ ಪಡೆಯಬಹುದಿತ್ತು, ಸ್ವತಂತ್ರವಾಗಿ ಸ್ಪರ್ಧೆಗೆ ಕೆಲವರು ಒತ್ತಾಯಿಸಿದ್ರು. ಇನ್ನೂ ಕೆಲವರು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ ಅಂತ ಹೇಳಿದರು. ಸೋತ ಬಳಿಕ ಸಾಕಷ್ಟು ವಿಶ್ಲೇಷಣೆ ನಡೆಯುತ್ತಿದೆ.ಆದರೆ ಈಗಾಗಲೇ ಚುನಾವಣೆ ಮುಗಿದು ಸೋತಿದ್ದೇನೆ ಎಂದು ಹೇಳಿದರು.












Click it and Unblock the Notifications