ಕರ್ನಾಟಕ: ಕಾಲೇಜುಗಳ ಆರಂಭಕ್ಕೂ ಮುನ್ನ ಕೊವಿಡ್ ನೆಗೆಟಿವ್ ವರದಿ ಕಡ್ಡಾಯ
ಬೆಂಗಳೂರು, ನವೆಂಬರ್ 14: ಕರ್ನಾಟಕದ ಎಲ್ಲಾ ಕಾಲೇಜುಗಳನ್ನು ತೆರೆಯಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊವಿಡ್ 19 ನೆಗೆಟಿವ್ ವರದಿ ಕಡ್ಡಾಯವಾಗಿರಬೇಕು ಎಂದು ಸೂಚಿಸಲಾಗಿದೆ.
ಹಾಸ್ಟೆಲ್‌ಗಳು ಕೂಡ ಮಂಗಳವಾರದಿಂದ ತೆರೆಯಲಿವೆ. 72 ಗಂಟೆಗಳ ಒಳಗೆ ನೀಡಿರುವ ಕೊರೊನಾ ನೆಗೆಟಿವ್ ವರದಿಯನ್ನು ಪಡೆದು ಕಾಲೇಜಿಗೆ ಅಥವಾ ಹಾಸ್ಟೆಲ್‌ಗಳಿಗೆ ತೆರಳಬೇಕು.
ಪ್ರತಿಯೊಬ್ಬರು ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಗಂಟಲು ದ್ರವದ ಮಾದರಿಯನ್ನು ತೆಗೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಸಾಧ್ಯವಾದಷ್ಟು ಬೇಗ ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆಯ ವರದಿ ಎಸ್‌ಎಂಎಸ್ ಮೂಲಕ ಬರುತ್ತದೆ. ಲ್ಯಾಬ್ ವರದಿಗಾಗಿ www.covidwar.karnataka.gov.in/service ಭೇಟಿ ನೀಡಿ.
ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪದವಿ, ಎಂಜನಿಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳ ತರಗತಿಗಳನ್ನು ಇದೇ ನವೆಂಬರ್ 17ರಿಂದ ಪುನರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸರ್ಕಾರಿ, ತಾಂತ್ರಿಕ, ಡಿಪ್ಲೊಮಾ, ಅನುದಾನಿತ, ಅನುದಾನರಹಿತ ಕಾಲೇಜು, ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆಫ್‌ಲೈನ್ ತರಗತಿಗಳ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಎಸ್‌ಒಪಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸೂಚನೆಗಳಿದ್ದು, ಅವುಗಳ ಪ್ರಕಾರವೇ ತರಗತಿಗಳು ನಡೆಯುತ್ತವೆ. ಹಾಗೆಯೇ, ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ನಿಗದಿತ ಸೂಚನೆಗಳಿವೆ ಎಂದು ತಿಳಿಸಿದ್ದಾರೆ.
ನ. 17ರಿಂದ ಭೌತಿಕ ತರಗತಿಗಳು ಆರಂಭಗೊಳ್ಳಲಿದೆ. ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಅವರ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಹಾಕಿದ ಒಪ್ಪಿಗೆ ಪತ್ರ ಸಲ್ಲಿಸಬೇಕು.
ತರಗತಿಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ಕೊಠಡಿಗಳ ಅನುಸಾರ, ದೈಹಿಕ ಅಂತರ ಕಾಪಾಡಿಕೊಂಡು ತರಗತಿ ವೇಳಾಪಟ್ಟಿ ಸಿದ್ಧಪಡಿಸಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications