ಪಾಂಡವಪುರ ತಹಶೀಲ್ದಾರ್‌ಗೆ 3 ಲಕ್ಷ ರೂ. ದಂಡ ಹಾಕಿದ ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 13; ಎಂಟು ವರ್ಷದ ಹಿಂದೆ ಜಮೀನಿನ ಸರ್ವೇ ಮಾಡಿ ಪೋಡಿ, ದುರಸ್ತಿ ಮಾಡುವಂತೆ ನೀಡಿದ್ದ ಆದೇಶವನ್ನು ಪಾಲಿಸಿದ ತಹಶೀಲ್ದಾರ್‌ಗೆ ಕರ್ನಾಟಕ ಹೈಕೋರ್ಟ್ 3 ಲಕ್ಷ ರೂ. ದಂಡ ವಿಧಿಸಿದೆ.
ಈ ರೀತಿ ದಂಡನೆಗೆ ಗುರಿಯಾಗಿರುವವರೆಂದರೆ ಮಂಡ್ಯ ಜಿಲ್ಲೆ ಪಾಂಡವಪುರದ ತಹಶೀಲ್ದಾರ್. 71 ವರ್ಷದ ವೃದ್ಧೆಗೆ ಸೇರಿದ ಭೂ ಪ್ರಕರಣದಲ್ಲಿ ನ್ಯಾಯಾಲಯ ದಂಡದ ರುಚಿ ತೋರಿಸಿದೆ. ಅಲ್ಲದೆ, ಅಧಿಕಾರಿಗಳ ನಡೆಯನ್ನು ಕಟುವಾಗಿ ಟೀಕಿಸಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕುರಹಳ್ಳಿ ಗ್ರಾಮದ ವೃದ್ಧೆ ಪಾರ್ವತಮ್ಮ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಮತ್ತು ನ್ಯಾ. ಕೆ. ಎಸ್. ಹೇಮಲೇಖಾ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?; ಏಕಸದಸ್ಯಪೀಠದ ಆದೇಶದ ನಂತರವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳದ್ದು ದಪ್ಪಚರ್ಮದ ಕಾರ್ಯವೈಖರಿಯ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಹೈಕೋರ್ಟ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾದ ನಂತರ ನ್ಯಾಯಪೀಠದ ನೋಟಿಸ್ ಆಧರಿಸಿ ಸರಕಾರದ ಮುಖ್ಯ ಕಾರ್ಯದರ್ಶಿ 2022ರಲ್ಲಿ ಜನವರಿಯಲ್ಲಿ ಜನರ ಭೂಮಿಯ ಸರ್ವೇ, ಪೋಡಿ ಮತ್ತು ದುರಸ್ತಿಗೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿ ಹೊರಡಿಸಿದ್ದಾರೆ. ಅದನ್ನೂ ಸಹ ಅಧಿಕಾರಿಗಳು ಪಾಲನೆ ಮಾಡದಿರುವುದು ದುರದೃಷ್ಟಕರ ಎಂದು ಹೇಳಿದೆ.
ಅಲ್ಲದೆ, 2014ರ ಜು.24ರಿಂದ 2022ರ ಫೆ.10ರವರೆಗೆ ಪಾಂಡವಪುರ ತಾಲೂಕಿನಲ್ಲಿ ತಹಶೀಲ್ದಾರ್‌ಗಳಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಂದ ಈ ದಂಡದ ಮೊತ್ತವನ್ನು ವಸೂಲು ಮಾಡಬೇಕು, ಈ ವಿಚಾರವನ್ನು ಅವರ ಸೇವಾದಾಖಲೆಯಲ್ಲೂ ನಮೂದಿಸಬೇಕು ಎಂದು ಆದೇಶಿಸಿದೆ.
ಕ್ರಮ ಜರುಗಿಸದಿದ್ದರೆ ಎಚ್ಚರಿಕೆ: ಒಂದು ತಿಂಗಳಲ್ಲಿಅರ್ಜಿದಾರರಿಗೆ ದಂಡದ ಮೊತ್ತವನ್ನು ಪಾವತಿಸಬೇಕು, ಆ ಕುರಿತು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು, ಇಲ್ಲವಾದರೆ ಜಿಲ್ಲಾಧಿಕಾರಿಯವರ ವಿರುದ್ಧ ಗಂಭೀರ ಕ್ರಮ ಜರುಗಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಪ್ರಕರಣದ ಹಿನ್ನೆಲೆ: ತಮಗೆ ಸೇರಿದ ಭೂಮಿಯ ಸರ್ವೇ ಹಾಗೂ ಪೋಡಿ ಮಾಡಿಕೊಡಲು ನಿರ್ದೇಶನ ನೀಡುವಂತೆ ಕೋರಿ 2014ರಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕುರಹಳ್ಳಿ ಗ್ರಾಮದ ವೃದ್ಧಿ ಪಾರ್ವತಮ್ಮ ಹೈಕೋರ್ಟ್ ಏಕಸದಸ್ಯಪೀಠದ ಮೊರೆ ಹೋಗಿದ್ದರು.
ಅರ್ಜಿ ಆಲಿಸಿದ ನ್ಯಾಯಪೀಠ 2014ರ ಜು.24ರಂದು 9 ತಿಂಗಳಲ್ಲಿ ಅರ್ಜಿದಾರರಿಗೆ ಸೇರಿದ ಜಮೀನಿನ ಪೋಡಿ, ದುರಸ್ತಿ ಮಾಡಿಕೊಡಬೇಕು ಎಂದು ಕಂದಾಯಾಧಿಕಾರಿಗಳಿಗೆ ಆದೇಶ ನೀಡಿದ್ದರು.
ಆ ಆದೇಶವನ್ನು ಅಧಿಕಾರಿಗಳು ಪಾಲನೆ ಮಾಡಿರಲಿಲ್ಲ. ಆನಂತರ 2018ರಲ್ಲಿಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಹೂಡಿದ್ದರು. ಆನಂತರ ಎಚ್ಚೆತ್ತುಕೊಂಡ ಕಂದಾಯ ಅಧಿಕಾರಿಗಳು 2022ರ ಫೆ.10ರಂದು ಸರ್ವೇ ಮಾಡಿದ್ದರು.












Click it and Unblock the Notifications