ಶೋಭಾ ಕರಂದ್ಲಾಜೆಗೆ ಬಿಗ್ ರಿಲೀಫ್ ಕೊಟ್ಟ ಕೋರ್ಟ್
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನೀಡಿದ್ದ ಹೇಳಿಕೆಗೆ ಗಂಭೀರ ಆಕ್ಷೇಪ ವ್ಯಕ್ತವಾಗಿತ್ತು. ಈ ಹೇಳಿಕೆಗೆ ಸಂಬಂಧಿಸಿದಂತೆ ಶೋಭಾ ಕರಂದ್ಲಾಜಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ಸಹ ದಾಖಲಾಗಿತ್ತು. ಬಾಂಬ್ ಸ್ಫೋಟದ ಬೆನ್ನಲ್ಲೇ ಅವರು ನೀಡಿದ್ದ ಹೇಳಿಕೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತ್ತು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟವಾದ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರು, ಬಾಂಬ್ ಸ್ಫೋಟ ಮಾಡಿದವರು ಹಾಗೂ ತಮಿಳುನಾಡಿನ ನಿರ್ದಿಷ್ಟ ಪ್ರದೇಶದ ಬಗ್ಗೆ ಮಾತನಾಡಿದ್ದರು. ಈ ಹೇಳಿಕೆಗೆ ತಮಿಳುನಾಡಿನಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವೂ ಸಹ ದಾಖಲಾಗಿತ್ತು. ಹೇಳಿಕೆ ವಿವಾದ ಸ್ವರೂಪವನ್ನು ಪಡೆದುಕೊಂಡ ಮೇಲೆ ಶೋಭಾ ಕರಂದ್ಲಾಜೆ ಅವರು ಕ್ಷಮಾಪಣೆ ಕೇಳಿದ್ದರು. ಇದೀಗ ಹೈಕೋರ್ಟ್ ಶೋಭಾ ಕರಂದ್ಲಾಜೆಗೆ ರಿಲೀಫ್ ನೀಡಿದೆ. ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದು ಮಾಡಲಾಗಿದೆ.

ಅರ್ಜಿ ಸಲ್ಲಿಸಿದ್ದ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ ಅವರು ಶಾಸಕರ - ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವಿಶೇಷ ನ್ಯಾಯಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಕೋರಿದ್ದರು. ಶೋಭಾ ಅವರ ವಿರುದ್ಧ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಹಾಗೂ 5ನೇ ಎಸಿಎಂಎಂ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದರು.
ಹೇಳಿಕೆ ಖಂಡಿಸಿದ್ದ ಡಿಎಂಕೆ ಪಕ್ಷ
ಶೋಭಾ ಕರಂದ್ಲಾಜೆ ಅವರು ನೀಡಿದ್ದ ಹೇಳಿಕೆಯನ್ನು ತಮಿಳುನಾಡಿನ ಡಿಎಂಕೆ ಪಕ್ಷ ವಿರೋಧಿಸಿತ್ತು. ಅಲ್ಲದೇ ಇದನ್ನೇ ರಾಜಕೀಯ ಅಸ್ತ್ರವನ್ನಾಗಿಯೂ ಬಳಸಿಕೊಂಡಿತ್ತು. ಶೋಭಾ ಅವರ ಹೇಳಿಕೆ ತಮಿಳುನಾಡಿನಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಆದರೆ, ಬೆಂಗಳೂರಿನ ಪ್ರತಿಭಟನೆಯೊಂದರಲ್ಲಿ ಭಾಗವಹಿಸಿದ್ದ ಶೋಭಾ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಆದರೆ, ವಿವಾದ ದೊಡ್ಡದಾಗುತ್ತಿದ್ದಂತೆಯೇ ಅವರು ತಮಿಳಿಗರಲ್ಲಿ ಕ್ಷಮಾಪಣೆ ಕೇಳಿದರಾದರೂ, ವಿಷಯ ತಣ್ಣಗಾಗಿರಲಿಲ್ಲ.
ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದ ಶೋಭಾ
ಶೋಭಾ ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕ್ಷಮಾಪಣೆ ಕೇಳಿದ್ದರು. ನನ್ನ ತಮಿಳು ಸೋದರ ಹಾಗೂ ಸೋದರಿಯರೇ, ನಾನೂ ಯಾರನ್ನೂ ನೋವಿಸುವ ಉದ್ದೇಶದಿಂದ ಮಾತನಾಡಿರಲಿಲ್ಲ. ನಿರ್ದಿಷ್ಟವಾಗಿ ಒಂದು ವಿಷಯದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ನನ್ನದಾಗಿತ್ತು ಎನ್ನುವುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ.
To my Tamil brothers & sisters,
— Shobha Karandlaje (@ShobhaBJP) March 19, 2024
I wish to clarify that my words were meant to shine light, not cast shadows. Yet I see that my remarks brought pain to some - and for that, I apologize. My remarks were solely directed towards those trained in the Krishnagiri forest,
1/2
ನನ್ನ ಟೀಕೆಗಳು ಕೆಲವರಿಗೆ ನೋವಾಗಿರುವುದು ಗಮನಿಸಿದ್ದು, ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಟೀಕೆ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರ ಬಗ್ಗೆ ಮಾತ್ರ ಆಗಿತ್ತು. ತಮಿಳಿಗರ ಬಳಿ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದರು.












Click it and Unblock the Notifications