ಕೊರೊನಾ ವೈರಸ್ ಅಪ್ಡೇಟ್; ನಾಲ್ಕು ಜಿಲ್ಲೆಗಳ ಇಂದಿನ ವರದಿ...
ರಾಮನಗರ, ಜೂನ್ 22: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ವೈರಸ್ ನ ಮೂಲ ಪತ್ತೆ ಹಚ್ಚುವುದೂ ಜಿಲ್ಲಾಡಳಿತಗಳಿಗೆ ಸವಾಲಾಗಿ ಪರಿಣಮಿಸುತ್ತಿದೆ. ಈ ನಡುವೆ ವಾರದಿಂದ ಹೆಚ್ಚು ಪ್ರಕರಣಗಳನ್ನು ಕಂಡಿರುವ ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ತಾಲೂಕನ್ನು ಲಾಕ್ ಡೌನ್ ಮಾಡಲಾಗಿದೆ.
ನಾಳೆಯಿಂದ ಮಾಗಡಿ ಪಟ್ಟಣವನ್ನು ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಮಾಗಡಿಯನ್ನು ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡುತ್ತಿರುವುದಾಗಿ ಮಾಗಡಿ ಶಾಸಕ ಎ ಮಂಜು ಸಭೆ ನಡೆಸಿ ಘೋಷಿಸಿದ್ದಾರೆ. ಇಂದು ನಡೆದ ಸಭೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಕುರಿತು ಚರ್ಚೆ ನಡೆಸಲಾಗಿದ್ದು, ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
Recommended Video

ನಾಳೆಯಿಂದ ಸ್ವಯಂಪ್ರೇರಿತವಾಗಿ ಮಾಗಡಿ ಲಾಕ್ ಡೌನ್
ರಾಮನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೂ ಮಾಗಡಿ ಪಟ್ಟಣದಲ್ಲಿ 15 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣಗಳು ಮತ್ತಷ್ಟು ಹೆಚ್ಚುವ ಆತಂಕದಿಂದ ಇಂದು ನಡೆದ ಸಭೆಯಲ್ಲಿ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಘೋಷಿಸಲಾಗಿದೆ. ಸಭೆಯಲ್ಲಿ ವರ್ತಕರ ಸಂಘ ಹಾಗೂ ತಹಶೀಲ್ದಾರ್ ಮಾಗಡಿ ಸರ್ಕಲ್ ಇನ್ ಸ್ಪೆಕ್ಟರ್, ನಗರಸಭೆ ಆಯುಕ್ತರು ಹಾಗೂ ಶಾಸಕ ಎ ಮಂಜು ಭಾಗಿಯಾಗಿದ್ದರು. ಮಾಗಡಿಯಲ್ಲಿ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆರೆಯುವಂತೆ ಸೂಚಿಸಲಾಗಿದೆ.

ಶಿವಮೊಗ್ಗದ ಖವಾಸಪುರ ಸೀಲ್ ಡೌನ್ ಸಾಧ್ಯತೆ
ಶಿಕಾರಿಪುರದಲ್ಲಿ ಕೊರೊನಾ ವೈರಸ್ ಪ್ರಕರಣ ಕಂಡುಬಂದಿದೆ. ಶಿಕಾರಿಪುರ ತಾಲೂಕಿನ ಖವಾಸಪುರ ಗ್ರಾಮದ ಮಹಿಳೆಯೊಬ್ಬರು ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಗೆ ಉಸಿರಾಟ ತೊಂದರೆ ಹಾಗೂ ಹೃದಯ ಸಂಬಂಧಿ ಸಮಸ್ಯೆಯಿಂದ ಜೂನ್ 20ರ ಶನಿವಾರ ರಾತ್ರಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಖವಾಸಪುರ ಗ್ರಾಮವನ್ನು ಸೀಲ್ ಡೌನ್ ಮಾಡುವ ಸಾಧ್ಯತೆ ಇದ್ದು, ಸದ್ಯ ಮೃತ ಮಹಿಳೆ ವಾಸವಿದ್ದ ಒಂದು ಬೀದಿಯನ್ನು ಸೀಲ್ ಡೌನ್ ಮಾಡಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ. ಮೃತ ಮಹಿಳೆಯ ಕುಟುಂಬದವರು ಹಾಗೂ ಅವರ ಸಂಪರ್ಕದಲ್ಲಿ ಇದ್ದವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಪಿ ಕವಿರಾಜ್ ತಿಳಿಸಿದ್ದಾರೆ.

ದಾವಣಗೆರೆ; ಹರಿಹರದ ಶಿವಮೊಗ್ಗ ರಸ್ತೆ ಸೀಲ್ ಡೌನ್
ಹರಿಹರ ನಗರದ ಶಿವಮೊಗ್ಗ ರಸ್ತೆಯಲ್ಲಿನ ಆರು ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ತಾಲ್ಲೂಕಿನ ಜನ ಆತಂಕಕ್ಕೆ ಒಳಗಾಗಿದ್ದಾರೆ. ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಒಬ್ಬ ಮಹಿಳೆಗೆ ವೈರಸ್ ದೃಢಪಟ್ಟಿದ್ದು, ಅವರಿಂದ ಹರಿಹರ ಶಿವಮೊಗ್ಗ ರಸ್ತೆಯಲ್ಲಿರುವ ಆಕೆಯ ಪತಿಯ ಮನೆಯಲ್ಲಿನ ಆರು ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ರಸ್ತೆಯಲ್ಲಿ ನೂರು ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ರಾಜನಹಳ್ಳಿ, ಹರಿಹರದಲ್ಲಿ ಒಟ್ಟು 10 ಪ್ರಕರಣಗಳಿವೆ.

ಚಿಕ್ಕಮಗಳೂರಿನಲ್ಲಿ ಇಂದು ಐವರಿಗೆ ಸೋಂಕು
ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಇಂದು ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ರೋಗಿ ನಂಬರ್ 8885 ರಿಂದ ನಾಲ್ವರಿಗೆ ಸೋಂಕು ಹರಡಿದೆ. ನಾಲ್ಕು ಪ್ರಕರಣಗಳೂ ಅಜ್ಜಂಪುರ ತಾಲೂಕಿಗೆ ಸೇರಿದ್ದಾಗಿದೆ. ಮುಂಬೈನಿಂದ ಹಿಂದಿರುಗಿದ ಓರ್ವನಿಗೆ ಸೋಂಕು ಕಾಣಿಸಿಕೊಂಡಿದ್ದು, ನಾಲ್ವರಿಗೆ ಹರಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 42 ಪಾಸಿಟಿವ್ ಪ್ರಕರಣಗಳು ದಾಖಲಾದಂತಾಗಿದೆ.












Click it and Unblock the Notifications