ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಾಧ್ಯತೆ, ಲಾಯರ್ ಜಗದೀಶ್‌ಗೂ ಸಂಕಷ್ಟ ?!
ಕರ್ನಾಟಕದಲ್ಲಿ ಸೋಮವಾರ (ಆಗಸ್ಟ್ 18)ದಂದು ವಿಧಾನಸಭೆಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಅದರಲ್ಲಿ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಆದೇಶ ಹಾಗೂ ಲಾಯರ್ ಜಗದೀಶ್ ಅವರ ವಿಚಾರಗಳು ಪ್ರಮುಖವಾಗಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶವಗಳ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದರ ಸಂಪೂರ್ಣ ವಿವರ ಮುಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಮಹೇಶ್ ತಿಮರೋಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅರೆಸ್ಟ್ ಮಾಡುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ. ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಗುರುತಿಸಿಕೊಂಡಿದ್ದಾರೆ. ಹಲವು ಜನಪರ ಹೋರಾಟಗಳಲ್ಲೂ ಅವರು ಕಾಣಿಸಿಕೊಂಡಿರುವುದು ಇದೆ. ಈಚೆಗೆ ವಿವಿಧ ಮಾಧ್ಯಮ ಹಾಗೂ ಯೂಟ್ಯೂಬ್ ಚಾನೆಲ್‌ಗಳಿಗೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಕೊಲೆಗಳನ್ನು ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಅಥವಾ ಹೇಳಿಕೆಯನ್ನು ನೀಡಿದ್ದಾರೆ ಎನ್ನುವ ಆರೋಪವು ಇವರ ಮೇಲೆ ಇದೆ.

ಈ ವಿಚಾರವು ಕರ್ನಾಟಕ ವಿಧಾನಸಭೆಯಲ್ಲಿ ಸೋಮವಾರ ಭಾರೀ ಚರ್ಚೆಗೆ ಕಾರಣವಾಯಿತು. ವಿರೋಧ ಪಕ್ಷಗಳು ಈ ವಿಚಾರವಾಗಿ ಸರ್ಕಾರದ ಮೇಲೆ ಮುಗಿಬಿದ್ದವು. ಇದೇ ಸಂದರ್ಭದಲ್ಲಿ ಲಾಯರ್ ಜಗದೀಶ್ ಅವರ ವಿಚಾರವೂ ಪ್ರಸ್ತಾಪವಾಗಿದೆ. ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದು. ಹಕ್ಕುಚ್ಯುತಿ ಮಂಡನೆ ಮಾಡಿದ್ದಾರೆ. ಈ ವಿಷಯ ಬಗ್ಗೆ ಮಾತನಾಡಿರುವ ಕಾನೂನು ಸಚಿವ ಎಚ್.ಕೆ ಪಾಟೀಲ ಅವರು ನಿಯಮಾನುಸಾರ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೌದು ಅವರ ಏನೆಲ್ಲಾ ಮಾತನಾಡಿದ್ದಾರೆ ಎಂದು ನನಗೂ ತಿಳಿದಿದೆ. ನಾನೂ ನೋಡಿದ್ದೇನೆ ಆದರೆ ಅವರ ಹೆಸರನ್ನು ಇಲ್ಲಿ ತೆಗೆದುಕೊಂಡು ಯಾಕೆ ಫೇಮಸ್ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಗೃಹ ಸಚಿವ ಜಿ. ಪರಮೇಶ್ವರ್ ಅವರು ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.
ಇದೀಗ ಸದನದಲ್ಲಿ ತಿಮರೋಡಿ ಹೇಳಿಕೆ ಬಗ್ಗೆ ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪ್ರಕರಣ ದಾಖಲಿಸಿಕೊಂಡು, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿರುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಿಮರೋಡಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ. ಲಾಯರ್ ಜಗದೀಶ್ ವಿಚಾರವೂ ಚರ್ಚೆಯಾಗಿದ್ದು ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಜಿ. ಪರಮೇಶ್ವರ್ ಅವರು ಅವರ ಬಗ್ಗೆ ಯಾವುದೇ ಕ್ರಮದ ಬಗ್ಗೆ ಮಾತನಾಡಿಲ್ಲ.
ಮೂಲ ಹೇಳಿಕೆ ತಿಮರೋಡಿಯವರದ್ದಲ್ಲ ?
ಇನ್ನು ಸಿಎಂ ಸಿದ್ದರಾಮಯ್ಯ ಅವರು 24 ಜನರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬಂಧಿಸುವಂತೆ ಗೃಹಸಚಿವರು ಸೂಚಿಸಿದ್ದರು. ಆದರೆ 24 ಮಂದಿಯನ್ನು ಸಿದ್ದರಾಮಯ್ಯ ಕೊಲೆ ಮಾಡಿದ್ದಾರೆ ಎಂದು ಹೇಳಿರುವುದು ತಿಮರೋಡಿಯಲ್ಲ ಶಾಸಕ ಹರೀಶ್ ಪೂಂಜ ಎಂಬ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎರಡು ವರ್ಷಗಳ ಹಿಂದೆ ಕರ್ನಾಟಕ ವಿಧಾನಸಭೆಯ ಚುನಾವಣೆ ಸಂದರ್ಭ ಹರೀಶ್ ಪೂಂಜಾ ಅವರು ತುಳುವಿನಲ್ಲಿ ಮಾತನಾಡಿರುವ ಭಾಷಣದ ತುಣುಕು ವೈರಲ್ ಆಗಿದೆ. ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ರಾಮಯ್ಯ ಪರ ಭಾಷಣ ಮಾಡಿದ್ದರು. ಆದ್ದರಿಂದ ಅವರಿಗೆ ಹರೀಶ್ ಪೂಂಜ ಅವರು "ನೀವು 24 ಹಿಂದೂ ಕಾರ್ಯಕರ್ತರನ್ನು ಕೊಲೆಗೈದ ಸಿದ್ದರಾಮಯ್ಯರಿಗೆ ಮತದಾನ ಕೇಳಿದ್ದೀರಲ್ಲ" ಎಂದು ಹೇಳಿದ್ದರು ಎನ್ನಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಮಾಡುವುದಾದರೆ ಮೊದಲು ಶಾಸಕರನ್ನೂ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದು. ಈ ವಿಚಾರ ಬಿಜೆಪಿಗೆ ತಿರುಗುಬಾಣವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications