ನಾವು ಕುರ್ಚಿಗೆ ಹೋರಾಟ ಮಾಡಿದರೆ, ನೀವು ಸಮಾಜಕ್ಕಾಗಿ ಹೋರಾಟ ಮಾಡುತ್ತೀರಿ- ಭೀಮ ಸಂಕಲ್ಪದಲ್ಲಿ ಡಿಕೆಶಿ ಮಾತು
ಬೆಂಗಳೂರು, ಜೂನ್ 09: ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದ ದಲಿತ ಸಂಘರ್ಷ ಸಮಿತಿ ಹೋರಾಟಗಳನ್ನು ನೋಡಿದ್ದೇನೆ. ನಿಮ್ಮ ಹೋರಾಟ ರಸ್ತೆಯಲ್ಲಿ ಜನರಿಗಾಗಿ ಜನರ ಮಧ್ಯೆ ನಡೆದುಕೊಂಡು ಬಂದಿದೆ. ನಾವು ಕುರ್ಚಿಗೆ ಹೋರಾಟ ಮಾಡಿದರೆ, ನೀವು ಸಮಾಜ ಹಾಗೂ ಮಾನವೀಯ ಬದಲಾವಣೆಗೆ ಹೋರಾಟ ಮಾಡುತ್ತೀರಿ. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಭೀಮ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಕೊಟ್ಟಿರುವ ದೀಕ್ಷೆ ಉಳಿಸಿಕೊಳ್ಳಲು ನಾವು ನೀವು ಹೋರಾಟ ಮಾಡುತ್ತಿದ್ದೇವೆ. ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡಾಗ 11 ಸಾವಿರ ಪಂಚಾಯ್ತಿಗಳಲ್ಲಿ ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞೆ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಬಗ್ಗೆ ಬದ್ಧತೆ ಇದೆ. ಪಕ್ಷ ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡಿದೆ. ಸಂವಿಧಾನ ನಮ್ಮ ಪಾಲಿನ ಭಗವದ್ಗೀತೆ, ಕುರಾನ್, ಬೈಬಲ್ ಆಗಿದೆ ಎಂದರು.

ದೇಶದ ಉದ್ದಗಲದಲ್ಲಿ ಅತಿ ಹೆಚ್ಚು ಪ್ರತಿಮೆ ಇರುವ ನಾಯಕ ಎಂದರೆ ಅದು ಬಾಬಾ ಸಾಹೇಬ ಅಂಬೇಡ್ಕರ್ ಅವರದು ಮಾತ್ರ. ನಾವು ದೇವರಲ್ಲಿ ಕೇಳಿಕೊಳ್ಳುವುದನ್ನು ಅಂಬೇಡ್ಕರ್ ಅವರು ಸಂವಿಧಾನ ಮೂಲಕ ನಮಗೆ ಕೊಟ್ಟಿದ್ದಾರೆ. ಆ ಕಾರಣಕ್ಕೆ ಅವರ ಪ್ರತಿಮೆ ಇಟ್ಟು, ಅವರಿಗೆ ಗೌರವ ನೀಡುತ್ತಾ ಬಂದಿದ್ದೇವೆ. ಅಂಬೇಡ್ಕರ್ ಎಂದರೆ ಹೋರಾಟದ ಕಿಡಿ, ಅಂಬೇಡ್ಕರ್ ಎಂದರೆ ಜ್ಞಾನ, ಅಂಬೇಡ್ಕರ್ ಎಂದರೆ ಆತ್ಮವಿಶ್ವಾಸ, ಅಂಬೇಡ್ಕರ್ ಎಂದರೆ ಸಮಾನತೆ, ಅಂಬೇಡ್ಕರ್ ಎಂದರೆ ಸಾಮಾಜಿಕ ನ್ಯಾಯ ಎಂದು ಹೇಳಿದರು.
'ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ನೀನು ಏನೂ ಮಾಡದಿದ್ದರೂ ನಿನ್ನನ್ನು ನೀನು ಮಾರಿಕೊಳ್ಳಬೇಡ' ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಅವರು ಹೇಳಿಕೊಟ್ಟಿರುವ ಸಮಾನತೆ, ಮಾನವೀಯತೆ ತತ್ವ ಪಾಲಿಸಬೇಕು. ಆ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಗಾಂಧಿ, ನೆಹರೂ, ಬಾಬು ಜಗಜೀವನ ರಾಮ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಕೂತಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇಂದು ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ಕೂತಿದ್ದಾರೆ ಎಂದರು.

ಅವರ ನಾಯಕತ್ವದಲ್ಲಿ ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡಿ ದೇಶದಲ್ಲಿ ಬದಲಾವಣೆ ತಂದಿದ್ದೀರಿ. ರಾಜಕಾರಣದಲ್ಲಿ 49 ಸಂಖ್ಯೆ ಶೂನ್ಯಕ್ಕೆ ಸಮ, 51 ಸಂಖ್ಯೆ ನೂರಕ್ಕೆ ಸಮ. ಈ ಮಹತ್ವದ 2 ಸಂಖ್ಯೆಗಳು ನೀವೇ ಆಗಿದ್ದೀರಿ. ನೀವು ನಾವು ಹೋರಾಟ ಮಾಡಿ ಒಂದು ಗೋಲ್ ಹೊಡೆಯಲಾಗಿದೆ. ನಮ್ಮೆಲ್ಲರ ಮುಂದಿನ ಗುರಿ 2024. ಅದಕ್ಕಾಗಿ ನೀವು, ನಾವು ಸಜ್ಜಾಗಬೇಕು ಎಂದು ಕರೆ ನೀಡಿದರು.
ನಿಮ್ಮ ಬೇಡಿಕೆ, ಆಕಾಂಕ್ಷೆಗಳನ್ನು ನಾವು ಸಾಕಾರಗೊಳಿಸುತ್ತೇವೆ. ನಾವು ದಲಿತರ ಕಲ್ಯಾಣಕ್ಕೆ ಅನೇಕ ಕ್ರಾಂತಿಕಾರಕ ಯೋಜನೆ ನೀಡಿದ್ದು, ದೇಶಕ್ಕೆ ಮಾದರಿ ಆಗಿದ್ದೇವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸ್ಕಿಪ್, ಕಾಯ್ದೆ ಮೂಲಕ ದಲಿತರ ಕಲ್ಯಾಣಕ್ಕೆ ಆರಂಭದಲ್ಲಿ 30 ಸಾವಿರ ಕೋಟಿ ಮೀಸಲಿಟ್ಟಿದ್ದು ಇತಿಹಾಸ. ನಮ್ಮ ಮೇಲೆ ನೀವು ಇಟ್ಟಿರುವ ಪ್ರೀತಿ ವಿಶ್ವಾಸವನ್ನು ನಾವು ಉಳಿಸಿಕೊಂಡು ಹೋಗುತ್ತೇವೆ. ನಿಮ್ಮ ವಿಚಾರದಲ್ಲಿ ನಮಗೆ ಬದ್ಧತೆ ಇದೆ ಎಂದರು.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ನಾವು ದಲಿತ ನಾಯಕರಿಗೆ ಉನ್ನತ ಸಚಿವ ಸ್ಥಾನಗಳನ್ನು ನೀಡಿ ಸಮುದಾಯಕ್ಕೆ ಆದ್ಯತೆ ಹಾಗೂ ಸಮಾನತೆ ಕೊಟ್ಟಿದ್ದೇವೆ. ಮಾನವೀಯತೆ ಆಧಾರದ ಮೇಲೆ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತೇವೆ. ನೊಂದವರಿಗೆ ಧೈರ್ಯ ತುಂಬಲು ನಾವು ಬದ್ಧವಾಗಿದ್ದೇವೆ. ನಿಮ್ಮ ಋಣ ತೀರಿಸುತ್ತೇವೆ ಎಂದು ಹೇಳಿದರು.












Click it and Unblock the Notifications