ಬುದ್ಧ, ಬಸವ, ಅಂಬೇಡ್ಕರ್ ಕುರಿತು ಬಿಎಲ್ ಸಂತೋಷ್‌ಗೆ ತಿಳಿಹೇಳಿದ ಪ್ರಿಯಾಂಕ್ ಖರ್ಗೆ- ಗಂಭೀರವಾಗುತ್ತಿದೆ ಸನಾತನ ಧರ್ಮದ ಚರ್ಚೆ
ಬೆಂಗಳೂರು, ಸೆಪ್ಟೆಂಬರ್ 06: ಸನಾತನ ಧರ್ಮದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ. ಅದರಲ್ಲೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ( ಸಂಘಟನೆ ) ಬಿಎಲ್ ಸಂತೋಷ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಬಿರುಸಿನ ಮಾತುಕತೆಗಳು ನಡೆಯುತ್ತಿವೆ.
ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಯಾಕೆ ಬಿಡಲಿಲ್ಲ ಎಂದು ಬಿಎಲ್ ಸಂತೋಷ್ ಅವರು ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಶ್ನಿಸಿದ್ದಾರೆ.

ಇದಕ್ಕೆ ಸುದೀರ್ಘವಾಗಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, 'ನಿಮ್ಮ ಸಂದೇಹಗಳನ್ನು ನಿವಾರಿಸಲು ಯಾವಾಗಲೂ ಸಂತೋಷವಾಗುತ್ತದೆ ಸರ್. ನೀವು ಬಾಬಾಸಾಹೇಬರ ಬರಹಗಳನ್ನು ಓದಿದ್ದರೆ ಈ ರೀತಿಯ ಕ್ಷುಲ್ಲಕ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ. ನೈಜ ವಿಷಯದಿಂದ ಎಂದಿನಂತೆ ದೂರು ಓಡಿಹೋಗುವುದು ಮತ್ತು ಆರಾಮದಾಯಕ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸುವುದು ನಿಮಗೆ ಯಾವಾಗಲೂ ಸಹಾಯ ಮಾಡುವುದಿಲ್ಲ' ಎಂದು ತಿಳಿಸಿದ್ದಾರೆ.
ನಾನು ಕೆಲವು ಐತಿಹಾಸಿಕ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ. ನಿಮ್ಮ ವಾಟ್ಸಾಪ್ ವಿಶ್ವವಿದ್ಯಾಲಯದ ಆರ್ಕೈವ್‌ಗಳಲ್ಲಿ ಇವು ನಿಮಗೆ ಕಾಣಸಿಗುವುದಿಲ್ಲವೆಂದು ಅವರು ವ್ಯಂಗ್ಯವಾಡಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದವು. ಈ ಕುರಿತು ಅವರೇ ಒಂದು ಪುಸ್ತಕವನ್ನು ಬರೆದಿದ್ದಾರೆ. ನೀವು ಅದನ್ನು ಓದಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಅಂಬೇಡ್ಕರ್ ಅವರು ಬಾಂಬೆ ನಾರ್ತ್ ಸೆಂಟ್ರಲ್ ಕ್ಷೇತ್ರದಿಲ್ಲಿ ಸೆಡ್ಯುಲ್ಡ್ ಕಾಸ್ಟ್ ಫೆಡರೇಶನ್ ಪಕ್ಷದಿಂದ ಸ್ಪರ್ಧಿಸಿದ್ದರು. ಹಿಂದೂ ಮಹಾಸಭಾ ಕೂಡ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿತ್ತು ಎಂದು ಹೇಳಿದ್ದಾರೆ.
ಆ ನಂತರ ಡಾ. ಅಂಬೇಡ್ಕರ್ ಅವರು ಬಂಗಾಳದ ವಿಭಜನೆಯಿಂದಾಗಿ ತಮ್ಮ ಅಸೆಂಬ್ಲಿ ಸ್ಥಾನವನ್ನು ಕಳೆದುಕೊಂಡರು. ಪಶ್ಚಿಮ ಬಂಗಾಳದ ಅಸೆಂಬ್ಲಿಗೆ ಹೊಸ ಚುನಾವಣೆಯ ಅಗತ್ಯವಿತ್ತು. ಬಾಬಾಸಾಹೇಬರು ಅಸೆಂಬ್ಲಿಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಕಾಂಗ್ರೆಸ್ ಪಕ್ಷವು ಅವರ ಮೌಲ್ಯವನ್ನು ಗುರುತಿಸಿ ಅವರಿಗಾಗಿ ಕೆಲಸ ಮಾಡಲು ನಿರ್ಧರಿಸಿತು ಎಂದು ಖರ್ಗೆ ತಿಳಿಸಿದ್ದಾರೆ.
ಜೂನ್ 30, 1947ರಂದು ಡಾ. ರಾಜೇಂದ್ರ ಪ್ರಸಾದ್ ಅವರು ಅಂದಿನ ಬಾಂಬೆ ಪ್ರಧಾನಿಯಾಗಿದ್ದ ಬಿಜಿ ಖೇರ್ ಅವರಿಗೆ ಪತ್ರ ಬರೆದರು. ಡಾ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಟಿಕೆಟ್‌ನಲ್ಲಿ ಅಸೆಂಬ್ಲಿಗೆ ಆಯ್ಕೆ ಮಾಡುವಂತೆ ಮನವಿ ಮಾಡಿದರು ಎಂದು ಹೇಳಿದ್ದಾರೆ.
ಡಾ. ರಾಜೇಂದ್ರ ಪ್ರಸಾದ್ ಅವರು ಬರೆದಿರುವ ಪ್ರಕಾರ, 'ಸಂವಿಧಾನ ರಚನಾ ಸಭೆ ಮತ್ತು ವಿವಿಧ ಸಮಿತಿಗಳಲ್ಲಿ ಡಾ. ಅಂಬೇಡ್ಕರ್ ಅವರ ಕೆಲಸವನ್ನು ನಾವು ಗಮನಿಸಿದ್ದೇವೆ. ಅವರ ಸೇವೆಗಳಿಂದ ನಾವು ವಂಚಿತರಾಗಬಾರದು ಎಂಬ ಆಶಯ ನಮಗಿದೆ. ನಿಮಗೆ ತಿಳಿದಿರುವಂತೆ, ಅವರು ಬಂಗಾಳದಿಂದ ಚುನಾಯಿತರಾಗಿದ್ದರು. ಪ್ರಾಂತ್ಯದ ವಿಭಜನೆಯ ನಂತರ ಸಂವಿಧಾನ ರಚನಾ ಸಭೆಯ ಸದಸ್ಯ ಸ್ಥಾನದಿಂದ ಹೊರನಡೆದರು. ಆದ್ದರಿಂದ ಅವರನ್ನು ತಕ್ಷಣವೇ ಚುನಾಯಿಸಬೇಕಾಗಿದೆ' ಎಂದು ಖರ್ಗೆ ತಿಳಿಸಿದ್ದಾರೆ.
ಹಾಗಾಗಿ, ದೇಶವು ಬಾಬಾಸಾಹೇಬರ ಬುದ್ಧಿ ಶಕ್ತಿಯನ್ನು ಕಳೆದುಕೊಳ್ಳದಂತೆ ನಾವು ನೋಡಿಕೊಂಡಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಿಮ್ಮ ( ಬಿಎಲ್ ಸಂತೋಷ್ ) ಸೈದ್ಧಾಂತಿಕ ಗುರುಗಳು ಬಾಬಾಸಾಹೇಬರನ್ನು ವಿರೋಧಿಸಿದರು. ಮಾತ್ರವಲ್ಲದೆ ಬಂಗಾಳ ಮತ್ತು ಸಿಂಧ್‌ನ ವಾಯವ್ಯ ಗಡಿ ಪ್ರಾಂತ್ಯದಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಸಮ್ಮಿಶ್ರ ಸರ್ಕಾರಗಳನ್ನು ರಚಿಸಿದ್ದರು ಎಂದು ಖರ್ಗೆ ತಿಳಿಸಿದ್ದಾರೆ.
ದತ್ತೋಪಂತ್ ಥೇಂಗಡಿ ಮತ್ತು ಬಾಬಾಸಾಹೇಬರ ಸಂಬಂಧವು ಆರ್‌ಎಸ್‌ಎಸ್‌ನ ಕಲ್ಪನೆ ಮತ್ತು ವಾಟ್ಸಾಪ್ ವಿಶ್ವವಿದ್ಯಾನಿಲಯದ ಪ್ರಕಟಿಸಿದ ಸಂದೇಶವಾಗಿದೆ ಎಂದೂ ಖರ್ಗೆ ಆರೋಪಿಸಿದ್ದಾರೆ.
ಬಾಬಾಸಾಹೇಬರು ಮತಾಂತರ ನಿರ್ಧಾರಕ್ಕೆ ಬಂದರು. ಇದಕ್ಕೆ ಸಾವರ್ಕರ್ ಮತ್ತು ಆರೆಸ್ಸೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಬಾಬಾಸಾಹೇಬರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ವಿರೋಧಿಸಿದ್ದರು. ಅವರ ಮತಾಂತರವನ್ನು ನಿಷ್ಪ್ರಯೋಜಕ ಕೃತ್ಯ ಎಂದು ಕರೆದಿದ್ದರು ಎಂದು ಖರ್ಗೆ ತಿಳಿಸಿದ್ದಾರೆ.
ಬಾಬಾಸಾಹೇಬರು ಬೌದ್ಧ ಧರ್ಮಕ್ಕೆ ಮತಾಂತರವಾದ ನಂತರ ಸಾವರ್ಕರ್ ಹೇಳಿದ್ದೇನು ಗೊತ್ತಾ? ಎಂದು ಪ್ರಶ್ನಿಸಿರುವ ಖರ್ಗೆ ಸಾವರ್ಕರ್ ಬರಹವನ್ನು ಪ್ರಕಟಿಸಿದ್ದಾರೆ.
'ಸನಾತನ ಹಿಂದೂಗಳು ಬಹುಸಂಖ್ಯಾತರಿರುವ ಹಳ್ಳಿಗಳಿಂದ ಬರುವ ಈ ಮಹಾರ್ 'ಅಸ್ಪೃಶ್ಯ' ಜನರು ನಾಗ್ಪುರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ. ಅವರು ಈಗ ತಮ್ಮ ಹಳ್ಳಿಗಳಿಗೆ ಹಿಂದಿರುಗಿದಾಗ ಅವರನ್ನು 'ಸ್ಪೃಶ್ಯರು' ಎಂದು ಪರಿಗಣಿಸಬಹುದೇ? ಇದು ಅಸಾಧ್ಯ' ಎಂದು ಸಾವರ್ಕರ್ ಹೇಳಿದ್ದಾರೆ ಎಂಬುದಾಗಿ ಖರ್ಗೆ ತಿಳಿಸಿದ್ದಾರೆ.
ಬಾಬಾಸಾಹೇಬರು ಬೌದ್ಧ ಧರ್ಮಕ್ಕೆ ಮತಾಂತರವಾದರು. ಏಕೆಂದರೆ ಅದು ಅತ್ಯಂತ ವೈಜ್ಞಾನಿಕ ಧರ್ಮವೆಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಡಾ ಅಂಬೇಡ್ಕರ್ ಅವರು ಬರೆದಿರುವ ಪ್ರಕಾರ, 'ಋಗ್ವೇದದ ಸ್ತೋತ್ರಗಳಲ್ಲಿ ಮನುಷ್ಯನ ಆಲೋಚನೆಗಳು ತನ್ನಿಂದ ದೂರವಾಗಿ, ದೇವತೆಗಳ ಜಗತ್ತಿಗೆ ತಿರುಗಿರುವುದನ್ನು ನಾವು ನೋಡುತ್ತೇವೆ' ಎಂದು ತಿಳಿಸಿದ್ದಾರೆ.
'ಬೌದ್ಧ ಧರ್ಮವು ಮನುಷ್ಯನ ಹುಡುಕಾಟವನ್ನು ಒಳಮುಖವಾಗಿ ನೋಡುತ್ತದೆ. ಸನಾತನ ಧರ್ಮದ ವೇದಗಳು ಪ್ರಾರ್ಥನೆ, ಸ್ತುತಿ ಮತ್ತು ಆರಾಧನೆಯಿಂದ ತುಂಬಿವೆ. ಬೌದ್ಧ ಧರ್ಮವು ಮನುಷ್ಯರನ್ನು ನೀತಿವಂತರಾಗಿ ಮಾಡಲು ತರಬೇತಿ ನೀಡುವ ಗುರಿಯನ್ನು ಹೊಂದಿದೆ' ಎಂದು ಖರ್ಗೆ ಹೇಳಿದ್ದಾರೆ.
ನಿಮ್ಮ ಸಿದ್ಧಾಂತವು ಗುರುನಾರಾಯಣ, ಬಸವಣ್ಣ, ಬಾಬಾಸಾಹೇಬರನ್ನು ವಿರೋಧಿಸಿದೆ ಮತ್ತು ಅದನ್ನು ಮುಂದುವರೆಸಿದೆ. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದರಲ್ಲಿ ನಮ್ಮದು ತಪ್ಪು ಇದೆ ಎಂದು ಸಾಬೀತುಪಡಿಸಿ. ಆರ್‌ಎಸ್‌ಎಸ್ ಬದಲಾಗಿದೆ ಮತ್ತು ಸಮಾನ ಸಮಾಜವನ್ನು ನಂಬುತ್ತದೆ ಎಂದು ನಮಗೆ ತಿಳಿಸಿಕೊಡಿ. ಆರ್‌ಎಸ್‌ಎಸ್‌ಗೆ ದಲಿತ ಅಥವಾ ಮಹಿಳೆ ಯಾವಾಗ ಸರಸಂಚಾಲಕರಾಗುತ್ತಾರೆ ಎಂಬುದನ್ನು ನಮಗೆ ತಿಳಿಸಿ ಎಂದು ಖರ್ಗೆ ಹೇಳಿದ್ದಾರೆ.












Click it and Unblock the Notifications