ಕರೆಂಟ್ ಕದ್ದ ಆರೋಪ; ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂಬ ಫೋಸ್ಟರ್ ಅಂಟಿಸಿದ್ದು ಯಾರು?
ಬೆಂಗಳೂರು, ನವೆಂಬರ್ 15: ರಾಜ್ಯ ರಾಜಕಾರಣದಲ್ಲಿ ಇದೀಗ ಪವರ್ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಿವಾಸದ ದೀಪಾಲಂಕಾರಕ್ಕೆ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ನೇರವಾಗಿ ವಿದ್ಯುತ್ ಪಡೆದಿರುವ ಆರೋಪ ಕೇಳಿ ಬಂದಿದ್ದು, ಜೆಪಿ ಭವನದ ಜೆಡಿಎಸ್ ಕಚೇರಿ ಗೋಡೆಯಲ್ಲಿ ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂದಬ ಪೋಸ್ಟರ್ ಗಳು ಕಂಡು ಬಂದಿವೆ.
ಹೌದು, ಮಂಗಳವಾರ ತಡರಾತ್ರಿ ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂಬ ಪೋಸ್ಟರ್ ಗಳನ್ನ ಕಾರ್ಯಕರ್ತರು ಆಂಟಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕುಮಾರಸ್ವಾಮಿ ಅವರು ವಿದ್ಯುತ್ ಕದ್ದ ಆರೋಪದ ಕುರಿತು ಈ ಕೆಲಸವನ್ನ ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ ಎನ್ನಲಾಗಿದೆ. ಕರೆಂಟ್ ಕದ್ದರೂ ಹೆಚ್ಡಿಕೆ ಪ್ರಮಾಣಿಕತೆಯನ್ನು ಮೆಚ್ಚಲೇಬೇಕು. ಕುಮಾರಸ್ವಾಮಿಯವರೇ 200 ಯುನಿಟ್ ಉಚಿತವಾಗಿದೆ ನೆನಪಿಟ್ಟುಕೊಳ್ಳಿ ಹೆಚ್ಚು ಕದಿಯಬೇಡಿ. ಕರೆಂಟ್ ಕಳ್ಳ ಕುಮಾರಸ್ವಾಮಿ ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ.

ಕರೆಂಟ್ ಕದ್ದ ಆರೋಪಕ್ಕೆ ಕುಮಾರಸ್ವಾಮಿ ಹೇಳಿದ್ದೇನು?
ದೀಪಾವಳಿ ಹಬ್ಬದ ನಿಮಿತ್ತ ಜೆಪಿ ನಗರದ ತಮ್ಮ ನಿವಾಸಕ್ಕೆ ವಿದ್ಯುತ್ ದೀಪಗಳ ಅಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂಬ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಸೋಮವಾರ ನಾನು ಬಿಡದಿಯ ತೋಟದಲ್ಲಿದ್ದೆ. ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ. ಇದನ್ನೇ ರಾಜ್ಯ ಕಾಂಗ್ರೆಸ್ ಪಕ್ಷ ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ಕ್ಷುಲ್ಲಕ ಮನಃಸ್ಥಿತಿಯ ಬಗ್ಗೆ ನನಗೆ ಮರುಕ ಇದೆ ಎಂದು ಅವರು ಟೀಕಿಸಿದ್ದಾರೆ.
ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಇನ್ನೊಬ್ಬರ ರಕ್ತ ಕುಡಿದು ಧನದಾಹ ತೀರಿಸಿಕೊಂಡಿಲ್ಲ. ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ, ಬೆಸ್ಕಾಂ ಕ್ರಮ ಕೈಗೊಳ್ಳಲಿ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಬೆಸ್ಕಾಂ ಅಧಿಕಾರಿಗಳು ಬರಲಿ. ಅವರ ಯಾವುದೇ ಕ್ರಮಕ್ಕೆ ನಾನು ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.












Click it and Unblock the Notifications