ಕಾಂಗ್ರೆಸ್ 22 ಸ್ಥಾನ ಗೆಲ್ಲುವುದಿಲ್ಲ: ಬಿಜೆಪಿ ವಿಪಕ್ಷ ಸ್ಥಾನ ಆಯ್ಕೆ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ
ನವದೆಹಲಿ, ಆಗಸ್ಟ್ 08: ಲೋಕಸಭಾ ಚುನಾವಣೆ 2024ಕ್ಕೆ ಕೆಲವೇ ತಿಂಗಳುಗಳ ಬಾಕಿ ಇದೆ. ಈ ಸಂಬಂಧ ಪ್ರಮುಖ ರಾಜಕೀಯ ಪಕ್ಷಗಳು ಅಗತ್ಯ ಸಿದ್ಧತೆ ಆರಂಭಿಸಿವೆ. ಈ ಮಧ್ಯೆ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿರುವ ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವುದು ಕನಸಿನ ಮಾತು ಎಂದು ಭವಿಷ್ಯ ನುಡಿದಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 1996 ರಿಂದ ಲೋಕಸಭೆ ದೊಡ್ಡ ಪ್ರಮಾಣದಲ್ಲಿ ಗೆದ್ದಿಲ್ಲ. 2018 ರಲ್ಲಿ ನಾವು ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿಲ್ಲ ಆದರೆ, ನಾವು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೆವು. ಲೋಕಸಭೆ ಚುನಾವಣೆಯ ವಿಚಾರಗಳು ಬೇರೆ ಇರುತ್ತವೆ ಎಂದ ಅವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಒಟ್ಟು ಸ್ಥಾನಗಳ ಪೈಕಿ 25 ಸೀಟು ಉಳಿಸಿಕೊಳ್ಳಲು ತಯಾರಿ ನಡೆಸಿದ್ದೇವೆ ಎಂದು ಅವರು ಹೇಳಿದರು.

ನಾನು ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ದೆಹಲಿಗೆ ಆಗಮಿಸುವಂತೆ ಸಂಸದರು ಮನವಿ ಮಾಡಿದ್ದರು. ಈ ಹಿನ್ನಲೆ ದೆಹಲಿಗೆ ಆಗಮಿಸಿದ್ದೇನೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದೆ. ಅಮಿತ್ ಶಾ ಭೇಟಿಗೂ ಪ್ರಯತ್ನ ಮಾಡಿದ್ದೇನೆ. ಅವರು ಸಂಸತ್ ಕಲಾಪ ಹಿನ್ನಲೆ ಸಮಯ ಸಿಗದ ಕಾರಣ ಅವರನ್ನು ಬೇಟಿ ಮಾಡಲ ಆಗಲ್ಲಿಲ್ಲ. ಸಮಯ ಸಿಕ್ಕ ಬಳಿಕ ನಾನು ಬೇಟಿ ಮಾಡಲಿದ್ದೇನೆ ಎಂದರು.
ವಿರೋಧ ಪಕ್ಷ ನಾಯಕ ಆಯ್ಕೆ: ಬೊಮ್ಮಾಯಿ ಪ್ರತಿಕ್ರಿಯೆ
ಪ್ರತಿಪಕ್ಷದ ನಾಯಕನ ಸ್ಥಾನದ ಕುರಿತು ಹೈಕಮಾಂಡ್ ಸೂಕ್ತ ನಿರ್ಣಯ, ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಬೇಕು. ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದೆ, ಇಲ್ಲಿ ಸೋಲು ಗೆಲುವು ಸಹಜ. ಇದರಲ್ಲಿ ರಾಜ್ಯ ನಾಯಕರ ಮೇಲೆ ಬೇಸರ ಮಾಡಿಕೊಳ್ಳುವುದು ಏನು ಇಲ್ಲ. ನಾಳೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ ಎನ್ನುವ ಮೂಲಕ ವಿಪಕ್ಷ ಸ್ಥಾನ ಆಯ್ಕೆ ಕುರಿತು ಹೈಕಮಾಂಡ್ ಬುಲಾವ್ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನು ಕಾಂಗ್ರೆಸ್ ನಾಯಕ ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರದ ಆರೊಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪತ್ರದ ಬಗ್ಗೆ ಮಾಹಿತಿ ಇಲ್ಲ. ರಾಜ್ಯಪಾಲರಿಂದ ಪತ್ರ ಬಂದ ಬಳಿಕ ಪ್ರಕರಣ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ರಾಜ್ಯಭವನ ಪತ್ರ ಬರೆದಿದಿದೆಯೊ ಇಲ್ಲ ಸ್ಪಷ್ಟಪಡಿಸಬೇಕು, ಆ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ ಎಂದು ಅವರು ಹೇಳಿದರು.

ಭಿನ್ನಮತ ಶಮನ: ಚುನಾವಣೆ ಸಂಬಂಧ ಸೂಕ್ತ ಸೂಚನೆ
ಕಾಂಗ್ರೆಸ್ ಶಾಸಕರು ಮತ್ತು ಸಚಿವರ ಮಧ್ಯೆದಲ್ಲಿ ಸಮನ್ವಯ ಕೊರತೆ ಹಿನ್ನೆಲೆಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಇತ್ತ ಲೋಕಸಭೆ ಚುನಾವಣೆಗಳ ಚಟುವಟಿಕೆ, ಸಿದ್ಧತೆಗಳು ನಡೆಯಬೇಕಿದೆ. ಈ ಮಧ್ಯೆ ಶಾಸಕರ ಭಿನ್ನಮತ ಶಮನಕ್ಕೆ ನೆನ್ನೆ ಸೋಮವಾರದಿಂದಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಿರಂತರ ಸಭೆಗಳು ಆರಂಭವಾಗಿವೆ. ಜಿಲ್ಲಾವಾರು ಸಹ ಸಭೆ ನಡೆಸಲಿದ್ದಾರೆ.
ಇದರೊಂದಿಗೆ ಲೋಕಸಭಾ ಚುನಾವಣೆಗೆ ಸಂಘಟಿತರಾಗಿ ಎದುರಿಸುವಂತೆ ಸೂಚಿಸುವ ಜೊತೆಗೆ ಕಾಂಗ್ರೆಸ್ ಅಗತ್ಯ ಸಿದ್ಧತೆಗಳನ್ನು ಆರಂಭಿಸಬೇಕಿದೆ. ಬಿಜೆಪಿ ಪಾಳೆಯದಲ್ಲಿ ಈಗಾಗಲೇ ಚುನಾವಣೆ ಚಟುವಟಿಕೆಗಳು ಗರಿಗೆದರಿದಂತೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ನಾಯಕರನ್ನು ಬೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications