ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋ ತಿರಸ್ಕರಿಸಿದ ಕೇಂದ್ರ: ಬಿ ವೈ ವಿಜಯೇಂದ್ರ ಹೇಳಿದ್ದೇನು?
ಬೆಂಗಳೂರು, ಜನವರಿ 10: ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋ ಅವಕಾಶ ಕೊಡಬಾರದೆಂಬ ದುರುದ್ದೇಶ ಇದರಲ್ಲಿ ಇಲ್ಲ. ಬೇರೆ ರಾಜ್ಯಕ್ಕೂ ಅವಕಾಶ ಕೊಡಬೇಕೆಂಬ ಸದುದ್ದೇಶವಿದೆ ಅಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದರು.
ಈ ಕುರಿತು ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೆಹಲಿ ಗಣರಾಜ್ಯೋತ್ಸವ ಪರೇಡ್ ವೇಳೆ ಸ್ತಬ್ಧಚಿತ್ರ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ 14 ವರ್ಷಗಳಿಂದ ಅವಕಾಶ ಸಿಕ್ಕಿದೆ. ಈಗ ಕೊಡುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿಲ್ಲ.

ಕಳೆದ ವರ್ಷ ಕೂಡ ಕರ್ನಾಟಕಕ್ಕೆ ಅವಕಾಶ ಸಿಕ್ಕಿಲ್ಲ ಎಂದು ಹೇಳಿದಾಗ ರಾಜ್ಯದ ನಮ್ಮೆಲ್ಲ ಹಿರಿಯರು ಪ್ರಯತ್ನಿಸಿದಾಗ ಅವಕಾಶ ಲಭಿಸಿತ್ತು. ಈ ಬಾರಿ ಕರ್ನಾಟಕ, ಗೋವಾ ಸೇರಿ ನಾಲ್ಕೈದು ರಾಜ್ಯಗಳಿಗೆ ಅವಕಾಶ ಸಿಕ್ಕಿಲ್ಲ. ಕರ್ನಾಟಕಕ್ಕೆ ಅವಕಾಶ ಕೊಡಬಾರದೆಂಬ ದುರುದ್ದೇಶ ಇದರಲ್ಲಿ ಇಲ್ಲ. ಬೇರೆ ರಾಜ್ಯಕ್ಕೂ ಅವಕಾಶ ಕೊಡಬೇಕೆಂಬ ಸದುದ್ದೇಶವಿದೆ ಅಷ್ಟೇ ಎಂದು ತಿಳಿಸಿದರು.
ಅವಕಾಶ ಸಿಗದ ಕರ್ನಾಟಕ ಮತ್ತಿತರ ರಾಜ್ಯಗಳಿಗೆ ಎಕ್ಸಿಬಿಷನ್‍ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಗಮನಿಸದೆ ಈ ನಾಡಿನ ಬಗ್ಗೆ ಮೊಸಳೆಕಣ್ಣೀರು ಹಾಕುವ ಕೆಲಸ ರಾಜ್ಯ ಕಾಂಗ್ರೆಸ್ ಸರಕಾರದ್ದು ಎಂದು ಟೀಕಿಸಿದರು. ಕನ್ನಡಪರ ಹೋರಾಟಗಾರ ನಾರಾಯಣಗೌಡರ ಕುರಿತ ಸರಕಾರದ ನಡೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ.
ನಿನ್ನೆ ಬಿಡುಗಡೆ ಆದೊಡನೆ ಮತ್ತೊಂದು ಕೇಸಿನಲ್ಲಿ ಒಳಗಡೆ ಹಾಕುವ ಪಿತೂರಿ ರಾಜ್ಯ ಸರಕಾರದ್ದು ಎಂದು ಆಕ್ಷೇಪಿಸಿದರು. ಮೊಸಳೆ ಕಣ್ಣೀರು ಹಾಕುವುದನ್ನು ಬಿಡಿ. ಪ್ರಾಮಾಣಿಕವಾಗಿ ಎಲ್ಲ ವಿಷಯದಲ್ಲೂ ರಾಜ್ಯದ ಪರವಾಗಿ ನಿಲ್ಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಾಂಗ್ರೆಸ್ ಸರಕಾರಕ್ಕೆ ಆಗ್ರಹಿಸಿದರು.
ಎಲ್ಲ ವಿಷಯದಲ್ಲೂ ಕೇಂದ್ರ ಸರಕಾರ ರಾಜ್ಯದ ವಿರುದ್ಧ ಇದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಂಬಿಸುತ್ತಿದ್ದಾರೆ. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು. ಬೇರೆ ಬೇರೆ ವಿಷಯಗಳಲ್ಲಿ ನಿಮ್ಮ ನಡವಳಿಕೆಯನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಸಂಘಟನೆ ದೃಷ್ಟಿಯಿಂದ ಇಂದಿನ ಸಭೆ ನಡೆದಿದೆ. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರೆದ ಸಭೆ ಇದು ಎಂದು ಹೇಳಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಮುಖಂಡರಿಗೆ ಈ ನಾಡಿನ ನೆಲ, ಜಲ, ಸಂಪತ್ತಿನ ಬಗ್ಗೆ ನೈಜ ಕಾಳಜಿ ಇದ್ದರೆ ಬೆಳಗಾವಿ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಷಯದಲ್ಲಿ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ತಿಳಿಸಬೇಕು. ಕಾವೇರಿ ನೀರನ್ನು ತಮಿಳುನಾಡಿಗೆ ಕಳೆದ ಆರು ತಿಂಗಳಿಂದ ಹರಿಸುತ್ತಿದ್ದು ಅದರ ವಿಷಯದಲ್ಲೂ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.

ಟ್ಯಾಬ್ಲೋ ತಿರಸ್ಕರಿಸಿದ ಕೇಂದ್ರ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ. ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ ಅನುಮತಿ ನೀಡಿತ್ತು, ಈ ಬಾರಿ ಮತ್ತೆ ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಮುಂದುವರೆಸಿದೆ ಎಂದು ಟ್ವೀಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾಡಿದ್ದಾರೆ.
ನವಕರ್ನಾಟಕದ ಅಭಿವೃದ್ಧಿಯ ದೃಷ್ಠಾರ, ಸಾಮಾಜಿಕ ನ್ಯಾಯದ ಹರಿಕಾರ, ನೀರಾವರಿ, ಬ್ಯಾಂಕಿಂಗ್, ಮೂಲಸೌಕರ್ಯದ ಕ್ಷೇತ್ರಗಳ ಅಭಿವೃದ್ದಿಯ ಮೂಲಕ ಮೈಸೂರನ್ನು ಒಂದು ಮಾದರಿ ರಾಜ್ಯವಾಗಿ ಕಟ್ಟಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ತಬ್ಧಚಿತ್ರ, ನೆಲದ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗಗೈದ ಅಪ್ರತಿಮ ದೇಶಪ್ರೇಮಿ ರಾಣಿ ಚೆನ್ನಮ್ಮ ಅವರ ಸ್ತಬ್ಧಚಿತ್ರ, ಕರುನಾಡಿನ ಪ್ರಾಕೃತಿಕ ಸೌಂದರ್ಯ ಮತ್ತು ಬ್ರಾಂಡ್ ಬೆಂಗಳೂರು ಹೀಗೆ 4 ಸ್ತಬ್ಧಚಿತ್ರ ಮಾದರಿಗಳಿಗೆ ಅವಕಾಶ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದ ಆಯ್ಕೆ ಸಮಿತಿಯು ನಮ್ಮ ಮನವಿಯನ್ನು ತಿರಸ್ಕರಿಸಿ, ನಾಡಿನ ಅಸೀಮ ಸಾಧನೆ ಮತ್ತು ಮಾದರಿ ಸಾಧಕರನ್ನು ದೇಶಕ್ಕೆ ಪರಿಚಯಿಸುವ ಅವಕಾಶವನ್ನು ಕಸಿದುಕೊಂಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ತೆರಿಗೆ ಪಾಲಿನಲ್ಲಿ ವಂಚನೆ, ಬರಪರಿಹಾರದಲ್ಲಿ ಅನ್ಯಾಯ, ಕನ್ನಡಿಗರು ಕಟ್ಟಿರುವ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳ ಮಾರಾಟ ಹೀಗೆ ಹೆಜ್ಜೆಹೆಜ್ಜೆಗೂ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಪ್ರಹಾರ ಮಾಡುತ್ತಿದೆ. ಇದರ ಜೊತೆಗೆ ಈಗ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಅವಕಾಶ ನಿರಾಕರಿಸಿ ನಮ್ಮ ಅಸ್ಮಿತೆಯ ಮೇಲೆ ದಾಳಿಗೆ ಇಳಿದಿದೆ.
ಕನ್ನಡ-ಕನ್ನಡಿಗ ಮತ್ತು ಕರ್ನಾಟಕಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದಿಂದ ಕನ್ನಡಿಗರು ಈಗಾಗಲೇ ರೋಸಿಹೋಗಿದ್ದಾರೆ. ಅವರ ತಾಳ್ಮೆಯನ್ನು ಪರೀಕ್ಷಿಸಲು ಕೇಂದ್ರ ಸರ್ಕಾರ ಹೋಗಬಾರದು.
ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಸರ್ಕಾರ ತಕ್ಷಣ ತನ್ನ ತಪ್ಪನ್ನು ತಿದ್ದಿಕೊಂಡು ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಂಡು ದೇಶದ ಹೆಮ್ಮೆಯ ಗಣರಾಜ್ಯೋತ್ಸವ ಪರೇಡ್ ನ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications