ಕಾಂಗ್ರೆಸ್ ನಾಯಕರನ್ನ ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ: ಛಲವಾದಿ ವಿವಾದಾತ್ಮಕ ಹೇಳಿಕೆ
ಕೋಲಾರ: ಕಾಂಗ್ರೆಸ್ ಅರಾಜಕತೆ ಸೃಷ್ಟಿಸಲು ಮುಂದಾದರೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸುಮ್ಮನಿರುವುದಿಲ್ಲ. ಕಾಂಗ್ರೆಸ್ ನಾಯಕರನ್ನು ತುಂಡು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಸ್‌ಐಆರ್ (SIR) ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿಯು ಕೋಲಾರದಲ್ಲಿ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಎಂಬ ಘೋಷಣೆಯೊಂದಿಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಅರಾಜಕತೆ ಸೃಷ್ಟಿ: ಕಾಂಗ್ರೆಸ್‌ಗೆ ಎಚ್ಚರಿಕೆ
ಇಡೀ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಹೊರಟಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಅರಾಜಕತೆ ಸೃಷ್ಟಿಸಿದರೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಸೇರಿ ಕಾಂಗ್ರೆಸ್ ನಾಯಕರನ್ನು ತುಂಡು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರಾಜಕೀಯ ವಿರೋಧದ ವಿಚಾರವಾಗಿ ಮಾತನಾಡುವ ವೇಳೆ ಅವರು ಬಳಸಿದ ಈ ಪದಗಳು ಇದೀಗ ವಿವಾದಕ್ಕೆ ಕಾರಣವಾಗಿವೆ. ಪ್ರಜಾಪ್ರಭುತ್ವ ಉಳಿಸುವ ಹೆಸರಿನಲ್ಲಿ ನಡೆದ ಬಿಜೆಪಿ ಪಾದಯಾತ್ರೆಯಲ್ಲಿ ಪ್ರತಿಪಕ್ಷ ನಾಯಕರೊಬ್ಬರು ಇಂತಹ ಹೇಳಿಕೆ ನೀಡಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ರಾಜಕೀಯ ಸಂಸ್ಕೃತಿ ಎಷ್ಟು ಅಧಃಪತನ: ಬಿ ಕೆ ಹರಿಪ್ರಸಾದ್
ನಾಲಿಗೆ ತನ್ನ ನೀಚತನವನ್ನ ಮಾತ್ರ ಹೇಳುವುದಿಲ್ಲ ನಾಲಿಗೆ ನಾಗರೀಕತೆಯನ್ನು ಹೇಳುತ್ತೆ. ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬೀ ಸಮುದ್ರಕ್ಕೆ ಎಸೆಯುತ್ತೇವೆ ಎನ್ನುವ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಬಿಜೆಪಿಯ ರಾಜಕೀಯ ಸಂಸ್ಕೃತಿ ಎಷ್ಟು ಅಧಃಪತನಕ್ಕೆ ಇಳಿದಿದೆ ಎಂಬುದಕ್ಕೆ ಸಾಕ್ಷಿ.
ಕಾಂಗ್ರೆಸ್ ನಾಯಕರನ್ನು ಸಮುದ್ರಕ್ಕೆ ಎಸೆದರೆ ಉಪ್ಪಾಗಿ ಜನರ ಮೆದುಳು ಸೇರುತ್ತೇವೆ, ಅಲ್ಲಿಯೂ ಸ್ವಸ್ಥ ಸಮಾಜ ನಿರ್ಮಿಸುತ್ತೇವೆ. ಆದರೆ ದ್ವೇಷವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ನಮ್ಮದು ಸ್ವತಂತ್ರ ವೀರರ ರಕ್ತ
ಮೊನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ 'ಕಾಂಗ್ರೆಸ್ ನನ್ ಮಕ್ಳು' ಎಂದು ನಾಲಿಗೆ ಹರಿಬಿಟ್ಟಿದ್ದರು. ಈಗ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಾಯಕರನ್ನು ತುಂಡರಿಸುವ ಮಾತಾಡುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ. ನಮ್ಮದು ಸ್ವತಂತ್ರ ವೀರರ ರಕ್ತವೇ ಹೊರತು ಬ್ರಿಟಿಷರ ಬೂಟು ನೆಕ್ಕಿದ ಹೇಡಿ ವೀರರ ರಕ್ತವಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಬಾಯಿಗೆ ಬಂದಂತೆ ನಿಂದಿಸಿದರೆ, ವಿರೋಧ ಪಕ್ಷದ ನಾಯಕನಾಗಿ ಕೊಲೆ ಬೆದರಿಕೆಯ ಭಾಷೆಯಲ್ಲಿ ಮಾತನಾಡುತ್ತಾರೆ. ಇದು ರಾಜಕೀಯ ಪಕ್ಷದ ನಾಯಕರ ನಡವಳಿಕೆಯೋ ಅಥವಾ ಬೀದಿ ರೌಡಿಗಳ ವರ್ತನೆಯೋ? ಗೌರಿ ಲಂಕೇಶ್, ಎಂ ಎಂ ಕಲ್ಬುರ್ಗಿ, ಪನ್ಸಾರೆ ಅಂತ ವಿಚಾರವಂತರ ಕೊಲೆಗಡುಕ ರಕ್ಷಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಬಿಜೆಪಿ ಪಕ್ಷದಲ್ಲಿ ರೌಡಿ ಮೋರ್ಚಾದಲ್ಲಿ ಕೊಲೆ ಗಡುಕರನ್ನೇ ಸೇರಿಸಿಕೊಂಡರೆ ಇನ್ಯಾವ ಸಾರ್ವಜನಿಕ ಭಾಷೆ ನಿರೀಕ್ಷಿಸಲು ಸಾಧ್ಯ.? ಎಂದು ಪ್ರಶ್ನಿಸಿದರು.
ನಾಲಿಗೆಯ ತುದಿಯಲ್ಲಿ ಹಿಂಸೆಯ ತಂತ್ರ!
ಇನ್ನೂ ದೊಡ್ಡ ವಿಪರ್ಯಾಸವೆಂದರೆ ಛಲವಾದಿ ನಾರಾಯಣಸ್ವಾಮಿ ಈ ಮಾತುಗಳನ್ನು ಆಡಿರುವುದು ಕೋಲಾರದಲ್ಲಿ ಬಿಜೆಪಿ ಆಯೋಜಿಸಿದ್ದ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಪಾದಯಾತ್ರೆಯಲ್ಲಿ! ಬಾಯಲ್ಲಿ ಪ್ರಜಾಪ್ರಭುತ್ವದ ಮಂತ್ರ, ನಾಲಿಗೆಯ ತುದಿಯಲ್ಲಿ ಹಿಂಸೆಯ ತಂತ್ರ! ರಾಜಕೀಯ ವಿರೋಧಿಗಳನ್ನು ತುಂಡರಿಸುವ ಮಾತಾಡುವವರೇ ಪ್ರಜಾಪ್ರಭುತ್ವ ಉಳಿಸುತ್ತೇವೆ ಎಂದು ಹೇಳುವುದು ಈ ಶತಮಾನದ ಬಹುದೊಡ್ಡ ರಾಜಕೀಯ ವ್ಯಂಗ್ಯ ಎಂದು ಹೇಳಿದರು.
'ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ' ಎಂಬ ಗಾದೆಯಂತೆ, ಬಿಜೆಪಿ ನಾಯಕರ ಬೆದರಿಕೆಗಳಿಗೆ ಕಾಂಗ್ರೆಸ್‌ನ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಸ್ವಾತಂತ್ರ್ಯ ಹೋರಾಟದ ಬೆಂಕಿಯಲ್ಲಿ ಬೆಂದು ರೂಪುಗೊಂಡ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಬೆದರಿಕೆಗಳು ಹೊಸದೇನಲ್ಲ. ಬ್ರಿಟಿಷರ ದಬ್ಬಾಳಿಕೆಗೆ ಮಣಿಯದ ಕಾಂಗ್ರೆಸ್, ಬಿಜೆಪಿಯ ನಾಯಕರ ನಾಲಿಗೆಯ ಅಬ್ಬರಕ್ಕೆ ಹೆದರುತ್ತದೆ ಎಂದು ಭಾವಿಸಿದ್ದರೆ ಅದು ಅವರ ರಾಜಕೀಯ ಅಜ್ಞಾನ ಎಂದು ಬಿ ಕೆ ಹರಿಪ್ರಸಾದ್ ಕಿಡಿಕಾರಿದರು.


Click it and Unblock the Notifications
