ಆಪರೇಷನ್ ಕಮಲಕ್ಕಿರುವ ಆಸಕ್ತಿ ವಿಪಕ್ಷ ನಾಯಕನ ಆಯ್ಕೆಯಲ್ಲಿಲ್ಲ: ಬಿಜೆಪಿ ಹೈಕಮಾಂಡ್‌ಗೆ ಕಾಂಗ್ರೆಸ್ ಕ್ಲಾಸ್
ಬೆಂಗಳೂರು, ಜುಲೈ 3: ಸದನ ಆರಂಭಕ್ಕೂ ಮೊದಲೇ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವುದಾಗಿ ಹೇಳಿದ್ದ ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ ಹೆಸರನ್ನು ಘೋಷಣೆ ಮಾಡಿಲ್ಲ. ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿ ಚರ್ಚೆ ಮಾಡಿದ್ದು, ನಾಳೆ (ಜುಲೈ 4) ಹೆಸರು ಅಂತಿಮವಾಗಲಿದೆ ಎಂದು ಹೇಳಿದ್ದಾರೆ.
ಈ ನಡುವೆ ಕರ್ನಾಟಕ ಕಾಂಗ್ರೆಸ್ ಬಿಜೆಪಿಯ ಕಾಲೆಳೆಯುವ ಪ್ರಯತ್ನ ಮಾಡಿದೆ. ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದ ಬಗ್ಗೆ ವ್ಯಂಗ್ಯವಾಡಿದೆ. ಸರ್ಕಾರ ರಚನೆಯಾಗಿ 50 ದಿನಗಳಾದರೂ ವಿಪಕ್ಷ ನಾಯಕನ ಹೆಸರು ಘೋಷಿಸದ ಬಿಜೆಪಿ ಬಗ್ಗೆ ಕಾಂಗ್ರೆಸ್ ಹಲವು ಆರೋಪಗಳನ್ನು ಮಾಡಿದೆ.

ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಮಾರಾಟಕ್ಕೆ ಇಡಲಾಗಿದೆಯಾ ಎಂದು ಗಂಭೀರವಾದ ಪ್ರಶ್ನೆ ಮಾಡಿದೆ. ಚೌಕಾಶಿ ಮಾಡುತ್ತಿರುವ ಕಾರಣ ಹೆಸರು ಘೋಷಣೆ ತಡವಾಗುತ್ತಿದೆಯಾ ಎಂದು ಕರ್ನಾಟಕ ಬಿಜೆಪಿಯನ್ನು ಕೆಣಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ವಿರೋಧ ಪಕ್ಷದ ನಾಯಕನ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಮುಖ್ಯಮಂತ್ರಿ ಹುದ್ದೆಗೆ ₹ 2,500 ಕೋಟಿ ಫಿಕ್ಸ್ ಮಾಡಲಾಗಿತ್ತು, ವಿರೋಧ ಪಕ್ಷದ ನಾಯಕನ ಹುದ್ದೆ ಎಷ್ಟಕ್ಕೆ ಬಿಕರಿಯಾಗುತ್ತಿದೆ? ಆ ಚೌಕಾಶಿ ವ್ಯವಹಾರಕ್ಕಾಗಿಯೇ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆಯೇ? ಕರ್ನಾಟಕದ ಬಿಜೆಪಿ ನಾಯಕರೇ ಉತ್ತರಿಸಬೇಕು" ಎಂದು ಪ್ರಶ್ನೆ ಮಾಡಿದೆ.
ಶೋಚನೀಯ ಸಂಗತಿ
ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ತನ್ನ ಮಾತಿನ ಪ್ರಹಾರವನ್ನ ಮುಂದುವರೆಸಿದ್ದು, ಬಿಜೆಪಿ ಹೈಕಮಾಂಡ್ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲೂ ಗ್ಯಾರಂಟಿ ನೀಡಿಲ್ಲ ಎಂದು ದೂಷಿಸಿದೆ. "ಸದನ ಪ್ರಾರಂಭವಾಗುವ ಮೊದಲೇ ವಿರೋಧ ಪಕ್ಷದ ನಾಯಕನನ್ನು ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದು ಗ್ಯಾರಂಟಿ ನೀಡಿದ್ದಿರಿ. ನಿಮ್ಮ ಹೈಕಮಾಂಡ್ ಕನಿಷ್ಠ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲೂ ನಿಮಗೆ ಗ್ಯಾರಂಟಿ ನೀಡದಿರುವುದು ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ಶೋಚನಿಯ ಸಂಗತಿ. ಪಾಪ!" ಎಂದು ಬಿಜೆಪಿಯನ್ನು ಕೆಣಕಿದೆ.
ಆಪರೇಷನ್ ಕಮಲದಲ್ಲಿ ಬ್ಯುಸಿ!
"ದನ ಪ್ರಾರಂಭವಾಗುವ ಮೊದಲೇ ವಿಪಕ್ಷ ನಾಯಕನ ಆಯ್ಕೆಯಾಗುತ್ತದೆ ಎಂದಿದ್ದ ಕರ್ನಾಟಕ ಬಿಜೆಪಿ ನಾಯಕರು ಈಗ ಏಕೆ ಮೌನ ವಹಿಸಿದ್ದಾರೆ. ಬಿಜೆಪಿಯ ಮಾತಿನ ಬಗ್ಗೆ ಬಿಜೆಪಿಗೇ ಗ್ಯಾರಂಟಿ ಇಲ್ಲ, ಅವರ ನಾಯಕರಿಗೇ ಅವರ ಪಕ್ಷದ ಮೇಲೆ ಭರವಸೆ ಇಲ್ಲ, ಬಿಜೆಪಿ ಹೈಕಮಾಂಡಿಗೆ ಆಪರೇಷನ್ ಕಮಲಕ್ಕಿರುವ ಆಸಕ್ತಿ ವಿಪಕ್ಷ ನಾಯಕನ ಆಯ್ಕೆಯಲ್ಲಿಲ್ಲ. ಅಮಿತ್ ಶಾ ಅವರು ಮಹರಾಷ್ಟ್ರದ ಆಪರೇಷನ್ ಕಮಲದಲ್ಲಿ ಬ್ಯುಸಿಯಾಗಿದ್ದರಿಂದ ಕರ್ನಾಟಕದ ನಾಯಕರ ಕಡೆ ತಿರುಗಿ ನೋಡಲಿಲ್ಲವೇ?" ಎಂದು ಕರ್ನಾಟಕ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದೆ.
ನಾಳೆ ಎಲ್ಲಾ ಗೊಂದಲಕ್ಕೆ ತೆರೆ?
ಇನ್ನು ವಿರೋಧ ಪಕ್ಷದ ನಾಯಕನ ಆಯ್ಕೆ ಬಿಜೆಪಿ ಕಗ್ಗಂಟಾಗಿದೆ ಎನ್ನುವುದು ನಿಜ. ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡ ಬಿಜೆಪಿ ನಾಯಕರು ಹೈಕಮಾಂಡ್ ಆಯ್ಕೆ ಬಗ್ಗೆ ಚರ್ಚೆ ಮಾಡಿದ್ದಾರೆ. ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಚರ್ಚೆ ಮಾಡಿದ್ದು, ನಾಳೆ (ಜುಲೈ 4) ವಿರೋಧ ಪಕ್ಷದ ನಾಯಕನ ಹೆಸರು ಅಂತಿಮಗೊಳಿಸಲಾಗುವುದು ಎಂದು ದೆಹಲಿಯಿಂದ ವಾಪಸಾದ ಬಳಿಕ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications