ರೈತರ ಮನೆಯಲ್ಲಿ 4-5 ಕೋಟಿ ಹಣ, ಮೋದಿಗೆ ಅಭಿನಂದನೆಗಳು
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿಕೆ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಬಿಜೆಪಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ವ್ಯಂಗ್ಯವಾಗಿದೆ.
ಬೆಂಗಳೂರು, ಮಾರ್ಚ್ 08; "ಎಲ್ಲರ ಮನೆಯಲ್ಲೂ ಹಣವಿರುತ್ತದೆ. ಅಡಕೆ ಬೆಳೆಗಾರರ ಮನೆಯಲ್ಲಿ ಕನಿಷ್ಠ 5-6 ಕೋಟಿ ರೂ. ಹಣ ಇರುತ್ತದೆ. ನಮ್ಮ ಕುಟುಂಬಕ್ಕೆ ಸೇರಿದ 125 ಎಕರೆ ಅಡಕೆ ತೋಟವಿದೆ. 2 ಕ್ರಷರ್ ಇದೆ, ಅಡಿಕೆ ಮಂಡಿಯಿದೆ" ಎಂದು ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚನ್ನೇಶಪುರದ ಮನೆಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದರು.
ಶಾಸಕರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಬಿಜೆಪಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ವ್ಯಂಗ್ಯವಾಗಿದೆ. ಇದಕ್ಕಾಗಿ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಸಿಕ್ಕ 6 ಕೋಟಿ ರೂ. ಹಣದ ಚಿತ್ರವನ್ನು ಬಳಕೆ ಮಾಡಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ಕುರಿತು ಚರ್ಚೆಗಳು ನಡೆಯುತ್ತಿವೆ.

ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಈಗ ಪ್ರತಿಯೊಬ್ಬ ರೈತರ ಮನೆಯಲ್ಲಿ 4-5 ಕೋಟಿ ಹಣ ಇರುವುದು ಸರ್ವೇ ಸಾಮಾನ್ಯ. ರೈತರ ಆದಾಯ ನೂರಾರು ಪಟ್ಟು ಹೆಚ್ಚಾಗಿದ್ದು ಇದಕ್ಕೆ ಕಾರಣಕರ್ತರಾದ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರಿಗೆ ನಮ್ಮ ಅಭಿನಂದನೆಗಳು' ಇಂತಿ ನಿಮ್ಮ ಸೇವಕ, ಮಾಡಾಳು ವಿರುಪಾಕ್ಷಪ್ಪ ಬಿಜೆಪಿಗರು ಹೀಗೊಂದು ಪೋಸ್ಟರ್ ಹಾಕಿಸಿದರೆ ಅಚ್ಚರಿ ಇಲ್ಲ!' ಎಂದು ವ್ಯಂಗ್ಯವಾಡಿದೆ.
ಮಧ್ಯಂತರ ಜಾಮೀನು; ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಲಂಚ ಪ್ರಕರಣದಲ್ಲಿ ಕೆ. ಮಾಡಾಳು ವಿರೂಪಾಕ್ಷಪ್ಪಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಮಂಗಳವಾರ ಮಂಜೂರು ಮಾಡಿತ್ತು. ಅಲ್ಲದೇ 48 ಗಂಟೆಯಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚನೆ ನೀಡಿತ್ತು. ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಶಾಸಕರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ಶಾಸಕರ ಪರವಾಗಿ ಕೆ. ಸಮನ್ ವಾದ ಮಂಡನೆ ಮಾಡಿದ್ದರು. ವಯಸ್ಸು ಆರೋಗ್ಯದ ಕಾರಣದ ಮೇಲೆ ಮಧ್ಯಂತರ ಜಾಮೀನು ನೀಡಿ ಎಂದು ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ಜಾಮೀನು ನೀಡಿತ್ತು. ಲಂಚ ಪ್ರಕರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದ ಶಾಸಕರು ಜಾಮೀನು ಸಿಕ್ಕ ಬಳಿಕ ಚನ್ನೇಶಪುರದ ಮನೆಗೆ ಆಗಮಿಸಿದ್ದರು, ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದರು.
'ಈಗ ಪ್ರತಿಯೊಬ್ಬ ರೈತರ ಮನೆಯಲ್ಲಿ 4-5 ಕೋಟಿ ಹಣ ಇರುವುದು ಸರ್ವೇ ಸಾಮಾನ್ಯ. ರೈತರ ಆದಾಯ ನೂರಾರು ಪಟ್ಟು ಹೆಚ್ಚಾಗಿದ್ದು ಇದಕ್ಕೆ ಕಾರಣಕರ್ತರಾದ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರಿಗೆ ನಮ್ಮ ಅಭಿನಂದನೆಗಳು'
— Karnataka Congress (@INCKarnataka) March 8, 2023
ಇಂತಿ ನಿಮ್ಮ ಸೇವಕ
ಮಾಡಾಳು ವಿರುಪಾಕ್ಷಪ್ಪ
ಬಿಜೆಪಿಗರು ಹೀಗೊಂದು ಪೋಸ್ಟರ್ ಹಾಕಿಸಿದರೆ ಅಚ್ಚರಿ ಇಲ್ಲ! pic.twitter.com/tMBNvwJQlb
ಬುಧವಾರ ಕಾಂಗ್ರೆಸ್ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಸರಣಿ ಟ್ವೀಟ್ ಮಾಡುತ್ತಿದೆ. ಒಂದು ಟ್ವೀಟ್‌ನಲ್ಲಿ, 'ಮಾಡಾಳ್ ವಿರೂಪಾಕ್ಷಪ್ಪರಿಗೆ ಒಂದೇ ದಿನದಲ್ಲಿ ಅರ್ಜಿಯ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದ್ದನ್ನು ಖಂಡಿಸಿ ವಕೀಲರ ಸಂಘ ಸಿಜೆಐಗೆ ಪತ್ರ ಬರೆದಿದ್ದಾರೆ. ಸರ್ಕಾರ ಮಾತ್ರ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಲಿಲ್ಲ, ಲೋಕಾಯುಕ್ತ ಪರ ವಕೀಲರೇ ಹಾಜರಿರಲಿಲ್ಲ!. ಭ್ರಷ್ಟ ಬಿಜೆಪಿಯಿಂದಾಗಿ ಜನತೆ ಕಾನೂನಿನ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ' ಎಂದು ಆರೋಪ ಮಾಡಿದೆ.
ಮತ್ತೊಂದು ಟ್ವೀಟ್‌ನಲ್ಲಿ ಶಾಸಕರ "ನನ್ನ ವಿರುದ್ಧ ನಮ್ಮ ಪಕ್ಷದವರೇ ಷಡ್ಯಂತ್ರ ರೂಪಿಸಿದ್ದಾರೆ' ಎಂಬ ಹೇಳಿಕೆ ಉಲ್ಲೇಖ ಮಾಡಿ ಕಾಂಗ್ರೆಸ್, 'ಷಡ್ಯಂತ್ರ ರೂಪಿಸಿದವರಾರು? ಏಕೆ ಎಂಬುದನ್ನೂ ಹೇಳಬೇಕಲ್ಲವೇ?. ಮಾಡಾಳ್ BSY ಅವರ ಕಟ್ಟಾ ಬೆಂಬಲಿಗರು, BSY ಪಟಾಲಮ್ಮಿನವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ಶಾಸಕರ ಮಾತಿನ ಮರ್ಮವೇ?' ಎಂದು ಕೇಳಿತ್ತು.
ಇನ್ನೊಂದು ಟ್ವೀಟ್‌ನಲ್ಲಿ 'ಅಡಿಕೆ ಬೆಳೆಗಾರರ ಮನೆಗಳಲ್ಲಿ 5-6 ಕೋಟಿ ಹಣ ಇರುವುದು ಸರ್ವೇ ಸಾಮಾನ್ಯ ಅಂತೆ ಮಾಡಾಳ್ ವಿರೂಪಾಕ್ಷಪ್ಪನವರ ಪ್ರಕಾರ. ಸ್ವಾಮಿ ಶಾಸಕರೇ, ರಾಜ್ಯದ ಅಡಿಕೆ ಬೆಳೆಗಾರರು ಎಲೆ ಚುಕ್ಕೆ ರೋಗ, ಬೆಲೆ ಇಳಿಕೆಯಿಂದ ಕಂಗಾಲಾಗಿರುವಾಗ ನಿಮ್ಮಂತೆ ಕೋಟಿಗಟ್ಟಲೆ ಹಣ ಬೆಳೆಯುವ ಈ ವಿಧಾನ ಹೇಗೆಂದು ರಾಜ್ಯದ ಬೆಳೆಗಾರರಿಗೂ ತಿಳಿಸಿದರೆ ಬಹಳ ಅನುಕೂಲ' ಎಂದು ವ್ಯಂಗ್ಯವಾಡಿತ್ತು.












Click it and Unblock the Notifications