Breaking; ಬಿ. ಶ್ರೀರಾಮುಲುಗೆ ಕಾಂಗ್ರೆಸ್ ಕೇಳಿದ ಪ್ರಶ್ನೆ ಏನು?
ಬೆಂಗಳೂರು, ಡಿಸೆಂಬರ್ 27; ಬಡವರ, ಶ್ರಮಿಕರ, ರೈತರ ಪಕ್ಷ (ಬಿಎಸ್‌ಆರ್ ಕಾಂಗ್ರೆಸ್) ಕಟ್ಟಿದ್ದ ಸಚಿವ ಬಿ. ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.
ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ರಾಜಕೀಯ ಜೀವನ ರೂಪಿಸಿಕೊಟ್ಟ ಜ.ರೆಡ್ಡಿಯವರನ್ನು ಕೈಬಿಟ್ಟು ಪಕ್ಷ ತಾಯಿ ಇದ್ದಂಗೆ ಎನ್ನುತ್ತಿರುವ ಬಿ. ಶ್ರೀರಾಮುಲು ಅವರೇ, ಬಿಎಸ್‌ಆರ್ ಕಾಂಗ್ರೆಸ್ ಕಟ್ಟಿ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಕ್ಕೆ ತಾಯಿದ್ರೋಹ ಎನ್ನೋಣವೇ?" ಎಂದು ಕೇಳಿದೆ.
"ಅವಕಾಶವಾದಿತನ, ಅಧಿಕಾರದಾಹಕ್ಕೆ ಸ್ನೇಹವನ್ನೇ ಕಡೆಗಣಿಸಿದ ತಮ್ಮಿಂದ ಜನತೆಗೆ ದ್ರೋಹವಲ್ಲದೆ ಇನ್ನೇನು ಸಿಗಬಹುದು' ಎಂದು ಟ್ವೀಟ್‌ನಲ್ಲಿ ಹೇಳಿದೆ.

ಸೋಮವಾರ ಕಾಂಗ್ರೆಸ್, 'ಸ್ನೇಹ ಮುಖ್ಯವೋ ಅಧಿಕಾರ ಮುಖ್ಯವೋ?' ಎಂದು ಬಿ. ಶ್ರೀರಾಮುಲು ಪ್ರಶ್ನಿಸಿತ್ತು. ಇದಕ್ಕೆ ಬೆಳಗಾವಿಯಲ್ಲಿ ಉತ್ತರ ನೀಡಿದ್ದ ಸಚಿವರು, ಪಕ್ಷವೇ ಮುಖ್ಯ ಎಂದು ಹೇಳಿದ್ದರು. "ನಮ್ಮದು ರಾಷ್ಟ್ರೀಯ ಪಕ್ಷ ಬಿಜೆಪಿ. ಬಿಜೆಪಿ ನನಗೆ ತಾಯಿ ಇದ್ದಂತೆ. ಪಕ್ಷ ನನಗೆ ಇಷ್ಟೊಂದು ಸ್ಥಾನಮಾನ ನೀಡಿದೆ. ಸ್ನೇಹ ಹಾಗೂ ರಾಜಕಾರಣವನ್ನು ಒಂದೇ ತಟ್ಟೆಯಲ್ಲಿ ತೂಗಬೇಡಿ" ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ತಂದ ಅಪಕೀರ್ತಿ; ಕಾಂಗ್ರೆಸ್ ಪಕ್ಷ ಟ್ವೀಟ್‌ನಲ್ಲಿ, ಬಳ್ಳಾರಿ ಅಕ್ರಮ ಗಣಿಗಾರಿಕೆಯ ಧೂಳಿನಲ್ಲಿ, ಹಿಂಬಾಗಿಲ ಮೂಲಕ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಅಪಕೀರ್ತಿ ಜನಾರ್ಧನ ರೆಡ್ಡಿ ಹಾಗೂ ಅವರ ಗೆಳೆಯ ಬಿ. ಶ್ರೀರಾಮುಲು ಅವರಿಗೆ ಸಲ್ಲುತ್ತದೆ. ಆಪರೇಷನ್ ಕಮಲದಂತಹ ಕೆಟ್ಟ ರಾಜಕೀಯ ಪಂಪರೆಯ ಮೂಲಕ ಜನಾರ್ಧನ ರೆಡ್ಡಿ ಅವರು ಶ್ರೀರಾಮುಲು ಅವರಿಗೆ ರಾಜಕಾರಣದಲ್ಲಿ ಗಟ್ಟಿ ನೆಲೆ ಕಟ್ಟಿಕೊಟ್ಟಿದ್ದಂತು ಸುಳ್ಳಲ್ಲ. ಇದು ರಾಮುಲು ಅವರಿಗೂ ತಿಳಿದಿದೆ. ಹೀಗಿದ್ದರೂ ಅವರು ತಮ್ಮ ರಾಜಕೀಯ ಗುರು ಜನಾರ್ಧನ ರೆಡ್ಡಿ ಅವರು ಕಟ್ಟುತ್ತಿರುವ ಹೊಸ ಪಕ್ಷಕ್ಕೆ ಹೋಗುವುದಿಲ್ಲವಂತೆ. ಪಕ್ಷ ತಾಯಿ ಇದ್ದಂಗೆ ಎಂದು ಈಗ ಹೇಳುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದೆ.
'ಈ ಹಿಂದೆ ರಾಮುಲು ಅವರು ಬಿಜೆಪಿಯನ್ನು ತೊರೆದು, ಬಿಎಸ್‌ಆರ್ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಿ, ಅದೇ ಬಿಜೆಪಿಯ ವಿರುದ್ಧ ಮುಗಿಬಿದ್ದಿದ್ದರು. ಇದನ್ನು ತಾಯಿದ್ರೋಹ ಎನ್ನೋಣವೇ?. ಜನಾರ್ಧನ ರೆಡ್ಡಿ ಅವರ ಹೊಸ ಪಕ್ಷಕ್ಕೆ ಸೇರುವಾಗ ಆಗುವ ತಾಯಿ ದ್ರೋಹ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಕಟ್ಟಿದಾಗ ಆಗಲಿಲ್ಲವೇ?. ತಾಯಿ ದ್ರೋಹ ಎನ್ನುವ ಪದವನ್ನು ರಾಮುಲು ಅವರು ಹೇಗೆಬೇಕಾದರೂ ಉಪಯೋಗಿಸಿಕೊಳ್ಳಬಹುದೇ?' ಎಂದು ಕೇಳಿದೆ.
ಸಚಿವ ಬಿ. ಶ್ರೀರಾಮುಲು ಆಪ್ತ ಸ್ನೇಹಿತ, ಮಾಜಿ ಸಚಿವ ಜನಾರ್ದನ ರೆಡ್ಡಿ 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಹೊಸ ಪಕ್ಷಕ್ಕೆ ಬಿ. ಶ್ರೀರಾಮುಲು ಯಾವಾಗ ಹೋಗುತ್ತಾರೆ? ಎಂದು ಕಾಂಗ್ರೆಸ್ ಸೋಮವಾರ ಪ್ರಶ್ನೆ ಮಾಡಿತ್ತು.
ಮತ್ತೊಂದು ಟ್ವೀಟ್‌ನಲ್ಲಿ 'ಗೆಳೆಯನ ಅಸಮಾಧಾನವನ್ನು ಹೈಕಮಾಂಡ್ ಜೊತೆ ಮಾತಾಡಿ ನ್ಯಾಯ ಒದಗಿಸುತ್ತೇನೆ ಎಂದಿದ್ದ ತಾವು ವಿಫಲರಾದಿರಾ ಅಥವಾ ಅಧಿಕಾರದ ರುಚಿ ಕಂಡಮೇಲೆ ರಾಜಕೀಯ ಜೀವನ ರೂಪಿಸಿಕೊಟ್ಟ ಗೆಳೆಯನನ್ನೇ ಮರೆತಿರಾ ಬಿ. ಶ್ರೀರಾಮುಲು ಅವರೇ?. ಜನಾರ್ದನ ರೆಡ್ಡಿಯವರ ಹೊಸ ಪಕ್ಷಕ್ಕೆ ಶ್ರೀರಾಮುಲು ಹೋಗುವುದು ಯಾವಾಗ?. ಸ್ನೇಹ ಮುಖ್ಯವೋ ಅಧಿಕಾರ ಮುಖ್ಯವೋ?' ಎಂದು ಕೇಳಿತ್ತು.












Click it and Unblock the Notifications